ಸೋಮವಾರಪೇಟೆ, ನ.19: ಸಂವಿಧಾನ ಶಿಲ್ಪಿ ಬಿ.ಅರ್. ಅಂಬೇಡ್ಕರ್ ಅವರಿಗೆ ಶಿಕ್ಷಣ ಇಲಾಖೆ ಯಿಂದ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ ಕೊಡ್ಲಿಪೇಟೆಯಲ್ಲಿ ಹೋಬಳಿ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯದ ಬಿಜೆಪಿ ಸರ್ಕಾರದ ಶಿಕ್ಷಣ ಇಲಾಖೆಯ ಮುಖಾಂತರ ಹೊರತಂದ ಕೈಪಿಡಿಯಲ್ಲಿ ಸಂವಿಧಾನ ರಚನೆಯಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರು ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿದ್ದರೇ ಹೊರತು ಸಂವಿಧಾನ ರಚಿಸುವಲ್ಲಿ ಅಂಬೇಡ್ಕರ್ ರವರ ಪಾತ್ರ ಅಷ್ಟೇನೂ ಇಲ್ಲ, ಉಳಿದ 6 ಜನ ಸಂವಿಧಾನ ಕರಡು ಸಮಿತಿಯ ಸದಸ್ಯರೇ ಶ್ರಮವಹಿಸಿ ಸಂವಿಧಾನ ರಚಿಸಿದ್ದು ಎಂದು ಸಂವಿಧಾನ ದಿನಾಚರಣೆಯ ದಿನ ಶಾಲಾ ವಿದ್ಯಾರ್ಥಿಗಳಿಗೆ ಇತಿಹಾಸ ತಿರುಚಿ ಹೇಳುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

ಈ ಕೃತ್ಯವೆಸಗಿದ ಶಿಕ್ಷಣ ಇಲಾಖೆಯ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಮತ್ತು ರಾಜ್ಯ ಸರ್ಕಾರದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರನ್ನು ರಾಜ್ಯ ಸಚಿವ ಸಂಪುಟದಿಂದ ಕೈಬಿಡ ಬೇಕೆಂದು ಒತ್ತಾಯಿಸುವ ಮನವಿ ಪತ್ರವನ್ನು ಕಂದಾಯ ಪರಿವೀಕ್ಷಕರ ಮುಖಾಂತರ ರಾಜ್ಯಪಾಲರಿಗೆ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಸಮಿತಿಯ ಕಾರ್ಯದರ್ಶಿ ಜನಾರ್ಧನ್, ದಲಿತ ಸೇನೆಯ ಜಿಲ್ಲಾಧ್ಯಕ್ಷ ಟಿ.ಈ. ಸುರೇಶ್, ಪಂಚಾಯಿತಿ ಉಪಾಧ್ಯಕ್ಷ ವಿಜಯ್, ಸದಸ್ಯ ಚಂದ್ರಶೇಖರ್, ಪ್ರಮುಖರಾದ ಔರಂಗಜೇಬ್, ವಸಂತ್, ಇಂದ್ರೇಶ್, ಜಗದೀಶ್, ವೀರಭದ್ರ, ಪ್ರಸನ್ನ ಸೇರಿದಂತೆ ಇತರರು ಉಪಸ್ಥಿತರಿದ್ದರು.

ತಾ. 25 ರಂದು ಪ್ರತಿಭಟನೆ

ಮಡಿಕೇರಿ : ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿ ಡಾ. ಬಿ.ಆರ್. ಅಂಬೇಡ್ಕರ್ ವಿರುದ್ಧ ನೀಡಿರುವ ಹೇಳಿಕೆ ಮತ್ತು ಸಮಾನತೆಯ ಸಮಾಜದ ಪರಿಕಲ್ಪನೆಯ ‘ಸಂವಿಧಾನ’ದ ಆಶಯಗಳನ್ನು ಹಾಳುಗೆಡಹಲು ನಿರಂತರ ಪ್ರಯತ್ನ ನಡೆಯುತ್ತಿದೆ. ಈ ಷಡ್ಯಂತ್ರಗಳ ವಿರುದ್ಧ ಜನಜಾಗೃತಿ ಮೂಡಿಸುವ ಸಲುವಾಗಿ ತಾ. 25 ರಂದು ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಲಾಗಿದೆ ಎಂದು ಸಂವಿಧಾನ ರಕ್ಷಣಾ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ಮೋಹನ್ ಮೌರ್ಯ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲಾ ದಲಿತ ಸಂಘಟನೆಗಳು ಒಂದಾಗಿ ಅಸ್ತಿತ್ವಕ್ಕೆ ತರಲಾಗಿರುವ ಸಂವಿಧಾನ ರಕ್ಷಣಾ ಹೋರಾಟ ಸಮಿತಿಯ ವತಿಯಿಂದ ಅಂದು ಬೆಳಿಗ್ಗೆ 10.30 ಗಂಟೆಗೆ ನಗರದ ಸುದರ್ಶನ ವೃತ್ತದ ಬಳಿಯ ಡಾ.ಅಂಬೇಡ್ಕರ್ ಭವನದ ಬಳಿಯಿಂದ ಜಿಲ್ಲಾಡಳಿತ ಭವನದವರೆಗೆ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಿರುವದಾಗಿ ಮಾಹಿತಿ ನೀಡಿದರು

ಸಮಿತಿಯ ಸಂಯೋಜಕ ಹೆಚ್.ಎಲ್. ದಿವಾಕರ್ ಮಾತನಾಡಿ, ಜಿಲ್ಲೆಯ ಎಲ್ಲಾ ದಲಿತ ಸಂಘಟನೆಗಳು ಒಗ್ಗೂಡಿ ಒಂದು ಸಮಿತಿಯನ್ನು ರಚಿಸುವ ಮೂಲಕ ಸಂವಿಧಾನವನ್ನು ಉಳಿಸುವ ಕಾರ್ಯಕ್ಕೆ ಮುಂದಾಗಿದ್ದು, ಮುಂದಿನ ದಿನಗಳಲ್ಲಿ ವಿವಿಧ ಜಾಗೃತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗು ವದೆಂದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಮಡಿಕೇರಿ ಸಯೋಜಕರಾದ ಹೆಚ್.ಎಸ್.ದಿಲೀಪ್ ಹಾಗೂ ಕುಶಾಲನಗರ ಸಂಯೋಜಕÀ ದಿನು ಬೋಜಪ್ಪ ಉಪಸ್ಥಿತರಿದ್ದರು.

ಮಡಿಕೇರಿಯಲ್ಲಿ ಪ್ರತಿಭಟನೆ

ಸೋಮವಾರಪೇಟೆ : ಸಂವಿಧಾನ ರಕ್ಷಣಾ ಹೋರಾಟ ಸಮಿತಿಯಿಂದ ತಾ. 25ರಂದು ಮಡಿಕೇರಿಯಲ್ಲಿ ಆಯೋಜಿಸಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿ, ಜಿಲ್ಲಾ ದಲಿತ ಹಿತರಕ್ಷಣಾ ಒಕ್ಕೂಟದ ವತಿಯಿಂದ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಲಾಗುವದು ಎಂದು ಒಕ್ಕೂಟದ ಅಧ್ಯಕ್ಷ ಡಿ.ಎಸ್. ನಿರ್ವಾಣಪ್ಪ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಸಂವಿಧಾನದ ಆಶಯಗಳನ್ನು ಮೂಲೆಗೆ ತಳ್ಳುವ ಯತ್ನಗಳು ದೇಶದಲ್ಲಿ ನಡೆಯುತ್ತಿದ್ದು, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ತೆರೆಮರೆಗೆ ಸರಿಸುವ ಯತ್ನಗಳ ವಿರುದ್ಧ ಪ್ರತಿಭಟನೆ ನಡೆಸಲಾಗುವದು ಎಂದರು.

ಅಂಬೇಡ್ಕರ್ ಅವರು ಹುಟ್ಟಿದ ದಿನವನ್ನು ವಿಶ್ವದಾದ್ಯಂತ ‘ವಲ್ಡ್ ನಾಲೆಡ್ಜ್ ಡೇ’ ಎಂದು ಆಚರಿಸಲಾಗುತ್ತಿದೆ. ಪ್ರಪಂಚವೇ ಅವರ ವಿಚಾರಧಾರೆ ಒಪ್ಪಿದೆ. ಆದರೆ ಬಿಜೆಪಿ ಸರ್ಕಾರ ಟಿಪ್ಪುವಿನ ಚರಿತ್ರೆಯನ್ನು ಪುಸ್ತಕದಿಂದ ಕೈಬಿಟ್ಟಂತೆ ಅಂಬೇಡ್ಕರ್ ಅವರ ಹೆಸರನ್ನೂ ಮರೆಮಾಚಿಸುವ ಯತ್ನಕ್ಕೆ ಮುಂದಾಗಿದೆ ಎಂದು ಆರೋಪಿಸಿದರು.

ಗೋಷ್ಠಿಯಲ್ಲಿದ್ದ ಒಕ್ಕೂಟದ ಗೌರವಾಧ್ಯಕ್ಷ ಹನುಮಯ್ಯ ಮಾತನಾಡಿ, ಬಿಜೆಪಿ ಸರ್ಕಾರಗಳು ಆಡಳಿತಕ್ಕೆ ಬಂದ ನಂತರ ಸಂವಿಧಾನವನ್ನು ಬದಲಾಯಿಸುವ ಹೇಳಿಕೆಗಳು ಕೇಳಿ ಬರುತ್ತಿವೆ ಎಂದು ಸರ್ಕಾರ ಕ್ಷಮೆ ಕೇಳಬೇಕೆಂದರು.

ಪ್ರಧಾನ ಕಾರ್ಯದರ್ಶಿ ಪಾಲಾಕ್ಷ ಮಾತನಾಡಿ, ಸಂವಿಧಾನ ರಕ್ಷಣೆ ಮಾಡುವಂತೆ ಕೇವಲ ದಲಿತರು ಮಾತ್ರ ಹೋರಾಡುವ ಸ್ಥಿತಿ ನಿರ್ಮಾಣ ವಾಗಿದೆ ಎಂದರು.

ತಾ. 25ರಂದು ಪೂರ್ವಾಹ್ನ 10.30 ರಿಂದ ಮಡಿಕೇರಿಯ ಸುದರ್ಶನ್ ಸರ್ಕಲ್‍ನ ಅಂಬೇಡ್ಕರ್ ಭವನದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಒಕ್ಕೂಟದ ಖಜಾಂಚಿ ನಾಗರಾಜ್, ಉಪಾಧ್ಯಕ್ಷ ಹೊನ್ನಪ್ಪ, ಹೆಚ್.ಎಂ. ಸೋಮಪ್ಪ, ಪದಾಧಿಕಾರಿ ಮಂಜುನಾಥ್ ಅವರುಗಳು ಉಪಸ್ಥಿತರಿದ್ದರು.

ದಲಿತ ಸಂಘಟನೆಗಳ ಆರೋಪ

ಮಡಿಕೇರಿ : ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನವನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಕೊಡಗು ಜಿಲ್ಲೆಯ ಎಲ್ಲಾ ದಲಿತ ಸಂಘಟನೆಗಳು ಹಾಗೂ ಭಾರತೀಯ ರಿಪಬ್ಲಿಕನ್ ಪಾರ್ಟಿ (ಆರ್‍ಪಿಐ)ಯ ವತಿಯಿಂದ ತಾ. 25ರಂದು ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಗುವದೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ)ಯ ಕೊಡಗು ಜಿಲ್ಲಾಧ್ಯಕ್ಷ ಕೆ.ಬಿ.ರಾಜು ಹಾಗೂ ಆರ್‍ಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವೀಂದ್ರ ನಾಥ್ ಹೆಬ್ಬಾಲೆ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರುಗಳು, ಅಂಬೇಡ್ಕರ್ ನಿರ್ಮಿಸಿದ ಸಂವಿಧಾನ ಭಾರತದ ಪ್ರತಿಯೊಬ್ಬ ಪ್ರಜೆಗೂ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯ ಹಕ್ಕುಗಳನ್ನು ನೀಡಿದ್ದು, ಇದರ ಪರಿಣಾಮವಾಗಿ ಇಂದು ಭಾರತದ ಶೇ.85ರಷ್ಟಿರುವ ಬಹುಜನರಾದ ಒಬಿಸಿ, ಪರಿಶಿಷ್ಟ ಜಾತಿ-ಪಂಗಡ, ಧಾರ್ಮಿಕ ಅಲ್ಪಸಂಖ್ಯಾತರಾದಿಯಾಗಿ ಎಲ್ಲಾ ಭಾರತೀಯ ಪ್ರಜೆಗಳೂ ಹಕ್ಕುಗಳನ್ನು ಅನುಭವಿಸುತ್ತಿದ್ದಾರೆ. ಅಲ್ಲದೆ ಈ ಸಂವಿಧಾನ ಸ್ವಾತಂತ್ರ್ಯ, ಸಮಾನತೆ, ಸಹೋದರತೆಯನ್ನು ಎತ್ತಿ ಹಿಡಿದಿದೆ. ಇಂತಹ ಪ್ರಜಾಪ್ರಭುತ್ವತೆ ಹೊಂದಿರುವ ಸಂವಿಧಾನವನ್ನು ಬದಲಾವಣೆ ಮಾಡಲೇಬೇಕೆಂದು ಕೆಲವು ಕಿಡಿಗೇಡಿಗಳು ವಾದಿಸುತ್ತಿರು ವದು ವಿಪರ್ಯಾಸ ಎಂದು ಟೀಕಿಸಿದರು. ತಾ. 25ರಂದು ಮಡಿಕೇರಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲು ತೀರ್ಮಾನಿಸಿರು ವದಾಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಭಾರತೀಯ ರಿಪಬ್ಲಿಕನ್ ಪಾರ್ಟಿಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎಂ.ಡಿ.ಲತಾ ಮಾಲಂಬಿ, ಉಪಾಧ್ಯಕ್ಷೆ ಕೆ.ಜೆ. ಸಾವಿತ್ರಮ್ಮ, ಡಿಎಸ್‍ಎಸ್ ಭೀಮ ವಾದದ ಅಮ್ಮತ್ತಿ ಘಟಕದ ಅಧ್ಯಕ್ಷೆ ಹೆಚ್.ವಿ.ಜಯಮ್ಮ, ಹಾಗೂ ಸೋಮವಾರಪೇಟೆ ತಾಲೂಕು ಅಧ್ಯಕ್ಷೆ ವೀಣಾ ಉಪಸ್ಥಿತರಿದ್ದರು.