ಮಡಿಕೇರಿ, ನ. 16: ಮೈಕ್ರೋ ಫೈನಾನ್ಸ್‍ಗಳು ಸಾಲ ಮರುಪಾವತಿಸುವಂತೆ ಕಾರ್ಮಿಕ ವರ್ಗಕ್ಕೆ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿರುವ ಮಾನವ ಹಕ್ಕುಗಳ ಸಮಿತಿಯ ರಾಜ್ಯ ಉಪಾಧ್ಯಕ್ಷೆ ಅಪ್ಪನೆರವಂಡ ಶಾಂತಿ ಅಚ್ಚಪ್ಪ, ಕಿರುಕುಳದ ವಿರುದ್ಧ ತಾ. 18 ರಂದು ವೀರಾಜಪೇಟೆ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸುವದಾಗಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಕ್ರೋ ಫೈನಾನ್ಸ್‍ಗಳು ಸಂಘದ ರೂಪದಲ್ಲಿ ಕಾರ್ಮಿಕ ವರ್ಗಕ್ಕೆ ಹಣ ನೀಡಿ, ವಾರದ ಕಂತಿನಲ್ಲಿ ಶೇ.18 ರಿಂದ 23ರಷ್ಟು ಬಡ್ಡಿದರವನ್ನು ವಸೂಲಿ ಮಾಡುತ್ತಿದೆ. ಇದನ್ನು ನೀಡಲು ಸಾಧ್ಯವಾಗದೆ ಇರುವ ಕಾರ್ಮಿಕರಿಗೆ ಕಿರುಕುಳ ನೀಡುತ್ತಿರುವದಾಗಿ ಆರೋಪಿಸಿದರು.

ಮೈಕ್ರೋ ಫೈನಾನ್ಸ್ ಕಂಪೆನಿಯ ಸಿಬ್ಬಂದಿಗಳು ಕಾರ್ಮಿಕರಿರುವ ಸ್ಥಳಕ್ಕೆ ತೆರಳಿ ಮತ್ತು ಮನೆಯ ಮುಂದೆ ನಿಂತು ಹಣ ನೀಡುವಂತೆ ಒತ್ತಡ ಹೇರುತ್ತಿರುವದಲ್ಲದೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಜಿಲ್ಲೆಯ ಕಾರ್ಮಿಕ ವರ್ಗ ಸಂಕಷ್ಟವನ್ನು ಎದುರಿಸುತ್ತಿದ್ದರೂ ಸರ್ಕಾರ ಸಾಲ ಮರುಪಾವತಿಗೆ ಒತ್ತಡ ಹೇರಬಾರದೆಂದು ಹೇಳಿದ್ದರು ಕಿರುಕುಳ ಮುಂದುವರೆದಿದೆ. ಇದನ್ನು ಖಂಡಿಸಿ ತಾ. 18 ರಂದು ಬೆಳಿಗ್ಗೆ 10 ಗಂಟೆಗೆ ವೀರಾಜಪೇಟೆಯ ಮಾರಿಯಮ್ಮ ದೇವಸ್ಥಾನದ ಬಳಿಯಿಂದ ತಹಶೀಲ್ದಾರ್ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುವದೆಂದು ಶಾಂತಿ ಅಚ್ಚಪ್ಪ ತಿಳಿಸಿದರು.

ಸಮಿತಿಯ ಜಿಲ್ಲಾ ಅಧ್ಯಕ್ಷೆ ಪಡಿಕಲ್ ಕುಸುಮಾವತಿ ಮಾತನಾಡಿ, ಮೈಕ್ರೋ ಫೈನಾನ್ಸ್‍ಗಳು ಪ್ರಮುಖವಾಗಿ ಬಡವರ್ಗದವರನ್ನು ಗುರಿಯಾಗಿಸಿಕೊಂಡು ಮಹಿಳೆÉಯರಿಗೆ ಮಾತ್ರ ಸಾಲವನ್ನು ಒದಗಿಸುತ್ತದೆ ಮತ್ತು ಹೆಚ್ಚಿನ ಬಡ್ಡಿ ಹಣವನ್ನು ವಸೂಲಿ ಮಾಡಲು ನಂತರದ ದಿನಗಳಲ್ಲಿ ಕಿರುಕುಳ ನೀಡುತ್ತಿರುವದಾಗಿ ಆರೋಪಿಸಿದರು.

ಸಮಿತಿಯ ಪ್ರಮುಖ ಪರ್ಮಾಲೆ ಗಣೇಶ್ ಮಾತನಾಡಿ, ಪ್ರಸ್ತುತ ಜಿಲ್ಲಾ ವ್ಯಾಪ್ತಿಯಲ್ಲಿ ಕಾಫಿ, ಕರಿಮೆಣಸು ಮೊದಲಾದ ಕೃಷಿ ಚಟುವಟಿಕೆಗಳಿಗೆ ಹವಾಮಾನ ವೈಫರೀತ್ಯಗಳಿಂದ ಹಿನ್ನೆಡೆಯಾಗಿದೆ. ಇದರಿಂದ ಕಾರ್ಮಿಕರಿಗೆ ಅಗತ್ಯ ಕೆಲಸ ದೊರಕುತ್ತಿಲ್ಲ, ಪಡೆದ ಸಾಲವನ್ನು ಸಕಾಲದಲ್ಲಿ ಪಾವತಿಸಲು ತೊಡಕುಂಟಾಗುತ್ತಿದೆ. ಇಂತಹ ಸಂದರ್ಭ ಸಾಲ ಮರುಪಾವತಿಗೆ ಕಿರುಕುಳ ನೀಡುವದು ಸರಿಯಲ್ಲ, ಕನಿಷ್ಟ ನಾಲ್ಕೈದು ತಿಂಗಳ ಕಾಲಾವಕಾಶ ನೀಡಬೇಕೆಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಸಮಿತಿಯ ಪ್ರಮುಖರಾದ ಪುಷ್ಪ ಹಾಗೂ ಮನು ಗೌಡ ಉಪಸ್ಥಿತರಿದ್ದರು.