*ಗೋಣಿಕೊಪ್ಪಲು: ಮಕ್ಕಳ ದಿನಾಚರಣೆಯ ಅಂಗವಾಗಿ ಇಲ್ಲಿನ ಪುಟಾಣಿ ನಕ್ಷತ್ರ ಶಿಶುಪಾಲನ ಕೇಂದ್ರದಲ್ಲಿ ಮಕ್ಕಳಿಗೆ ಸಿಹಿ ಹಂಚಿ ಸಂಭ್ರಮಿಸಲಾಯಿತು.
ಸುಮಾರು 50ಕ್ಕೂ ಹೆಚ್ಚು ಮಕ್ಕಳಿಗೆ ಮಧ್ಯಾಹ್ನದ ಭೋಜನವನ್ನು ಏರ್ಪಡಿಸಲಾಗಿತ್ತು. ಮಧ್ಯಾಹ್ನದ ಆಹಾರವನ್ನು ಮಂಜು ಅವರು ಮಕ್ಕಳಿಗೆ ನೀಡಿದರು. ಶಿಶುಪಾಲನ ಕೇಂದ್ರದ ಮೇಲ್ವಿಚಾರಕರಾದ ಸುಶೀಲಾ, ಸೌಮ್ಯ ಹಾಜರಿದ್ದರು.
ಮಾಲ್ದಾರೆ: ಮಾಲ್ದಾರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಸಂಭ್ರಮಿಸಿದರು. ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು ಸಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಕ್ಕಳೊಂದಿಗೆ ನಲಿದರು. ಮಕ್ಕಳ ದಿನಾಚರಣೆಯ ಮಹತ್ವವನ್ನು ಶಿಕ್ಷಕ ಮೊಹಮ್ಮದ್ ಶರೀಫ್ ತಿಳಿಸಿದರು. 10ನೇ ತರಗತಿ ವಿದ್ಯಾರ್ಥಿ ನಾಚಪ್ಪ ಅಧ್ಯಕ್ಷತೆಯಲ್ಲಿ ಮುಖ್ಯ ಶಿಕ್ಷಕ ಜೆ.ಎ. ಶಿವರಾಂ, ಶಿಕ್ಷಕರಾದ ಧನ್ಯ, ಈಶ್ವರಿ, ಪ್ರತಿಮಾ, ಗುಮಾಸ್ತರಾದ ವೇಣುಗೋಪಾಲ ಉಪಸ್ಥಿತರಿದ್ದರು.
ಬಾಳೆಲೆ: ಬಾಳೆಲೆ ವಿಜಯಲಕ್ಷ್ಮಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ವಿವಿಧ ಚಟುವಟಿಕೆಗಳನ್ನು ನಡೆಸಲಾಯಿತು. ಕಣ್ಣಿಗೆ ಬಟ್ಟೆ ಕಟ್ಟಿ ಬಕೆಟ್ ಒಡೆಯುವ ಸ್ಪರ್ಧೆಯ ಕಾಲೇಜು ವಿಭಾಗದಲ್ಲಿ ಸಫ್ರಿನಾ ಪ್ರಥಮ, ಪ್ರೌಢಶಾಲೆ ವಿಭಾಗದಲ್ಲಿ ಗಂಗಮ್ಮ ಪ್ರಥಮ ಬಹುಮಾನ ಪಡೆದುಕೊಂಡರು. ಮ್ಯೂಜಿಕಲ್ ಚೇರ್ ಸ್ಪರ್ಧೆಯ ಕಾಲೇಜು ವಿಭಾಗದಲ್ಲಿ ರಂಜಿತಾ ಪ್ರಥಮ, ದಿವ್ಯಾ ದ್ವಿತೀಯ, ರಿಹಾನ ತೃತೀಯ ಸ್ಥಾನ ಪಡೆದುಕೊಂಡರು.
ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದ ಪ್ರಾಂಶುಪಾಲ ಡಾ. ಜೆ. ಸೋಮಣ್ಣ ದೇಶದ ಮೊದಲ ಪ್ರಧಾನ ಮಂತ್ರಿ ಜವಾಹರ್ಲಾಲ್ ನೆಹರೂ ಅವರ ಜಯಂತಿಯನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ನೆಹರೂ ಅವರ ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಶಿಕ್ಷಕರಾದ ಎಂ.ಪಿ. ರಾಘವೇಂದ್ರ, ಡಿ.ಎನ್. ಸುಬ್ಬಯ್ಯ, ಜಯಣ್ಣ, ಉಪನ್ಯಾಸಕರಾದ ಎನ್.ಕೆ. ಪ್ರಭು ಹಾಜರಿದ್ದರು.
ಮಡಿಕೇರಿ: ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಮಾಜಿ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರು ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ, ನೆಹರು ಅವರ ಸಾಧನೆಗಳನ್ನು ವಿವರಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ನಗರ ಕಾಂಗ್ರೆಸ್ ಅಧ್ಯಕ್ಷ ಕೆ.ಯು. ಅಬ್ದುಲ್ ರಜಾóಕ್, ನೆಹರು ಅವರ ಆದರ್ಶಗಳು ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ.ಪಿ. ಸುರೇಶ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಟ್ರತನ ಎಂ. ವೆಂಕಟೇಶ್, ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆರ್.ಪಿ. ಚಂದ್ರಶೇಖರ್, ನಗರಸಭಾ ಮಾಜಿ ಸದಸ್ಯ ಪ್ರಕಾಶ್ ಆಚಾರ್ಯ, ನಗರ ಕಾಂಗ್ರೆಸ್ ಉಪಾಧ್ಯಕ್ಷ ಜಫ್ರುಲ್ಲಾ, ಎಸ್.ಸಿ. ಘಟಕದ ಅಧ್ಯಕ್ಷ ಮುದ್ದುರಾಜ್, ಪ್ರಮುಖರಾದ ಫ್ರಾನ್ಸಿಸ್, ರಮೇಶ್, ರಾಣಿ, ಉಷಾ ಹಾಗೂ ಕಾರ್ಯಕರ್ತರು ಹಾಜರಿದ್ದರು.
ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಸದಾ ಮುದ್ದಪ್ಪ ಸರ್ವರನ್ನು ಸ್ವಾಗತಿಸಿ, ವಂದಿಸಿದರು. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ನೆಹರು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ವೀರಾಜಪೇಟೆ: ವೀರಾಜಪೇಟೆಯ ಕಾವೇರಿ ಪದವಿಪೂರ್ವ ಕಾಲೇಜಿನಲ್ಲಿ ಮಕ್ಕಳ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸಲಾಯಿತು. ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಎ.ಎಂ. ಕಮಾಲಕ್ಷಿ ಮಾತನಾಡಿ, ಮಕ್ಕಳಿಗೆ ಶುಭ ಹಾರೈಸಿದರು.
ವಿದ್ಯಾರ್ಥಿಗಳು ಕಾಲೇಜಿನ ಆವರಣದಲ್ಲಿ ಗಿಡಗಳನ್ನು ನೆಡುವದರ ಮೂಲಕ ಪರಿಸರ ಜಾಗೃತಿಯನ್ನು ಮೂಡಿಸಿದರು. ವಿದ್ಯಾರ್ಥಿಗಳಿಗೆ ವಿವಿಧ ಆಟಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕೊನೆಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಸಿಹಿ ಹಂಚಲಾಯಿತು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಎನ್.ಎಂ. ನಾಣಯ್ಯ, ಉಪನ್ಯಾಸಕ ವರ್ಗ ಹಾಗೂ ಆಡಳಿತಾತ್ಮಕ ಸಿಬ್ಬಂದಿಗಳು ಪಾಲ್ಗೊಂಡಿದ್ದರು.ಪಾಲಿಬೆಟ್ಟ: ಚೆನ್ನಯ್ಯನಕೋಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ಶಾಲಾ ಆವರಣದ ವೇದಿಕೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಸದಸ್ಯೆ ಲೀಲಾವತಿ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯು ದೇಶ ಸೇವೆಯ ಸಾಧಕರ ಮಾರ್ಗದರ್ಶನಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಶಿಕ್ಷಣದೊಂದಿಗೆ ಸಮಾಜದಲ್ಲಿ ಗುರುತಿಸಿಕೊಳ್ಳುವ ಮೂಲಕ ಸಾಧನೆ ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿ, ಮಕ್ಕಳ ದಿನಾಚರಣೆಗೆ ಶುಭಾಶಯ ಕೋರಿದರು.
ವೀರಾಜಪೇಟೆ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಗೀತಾಂಜಲಿ ಮಾತನಾಡಿ, ಚೆನ್ನಯ್ಯನಕೋಟೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಶಾಲೆಯ ಶಿಕ್ಷಕರ ಪರಿಶ್ರಮದಿಂದ ವಿದ್ಯಾರ್ಥಿಗಳು ಮುಂದಿನ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತಿದ್ದು, ಸ್ಕೌಟ್ಸ್ ಅಂಡ್ ಗೈಡ್ಸ್, ಸೇವಾದಳದಲ್ಲೂ ವಿದ್ಯಾರ್ಥಿಗಳು ಗುರುತಿಸಿಕೊಂಡು ಶಿಸ್ತುಬದ್ಧವಾಗಿ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು ಪೋಷಕರು ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳಿಸಿ ಮುಂದಿನ ಭವಿಷ್ಯ ರೂಪಿಸಲು ಕೈಜೋಡಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಸಮಾಜ ಸೇವಕ ವಾಟೇರಿರ ಸುರೇಶ್ ಸೋಮಯ್ಯ, ಚೆಟ್ಟಿನಾಡು ಚಾರಿಟಬಲ್ ಟ್ರಸ್ಟ್ ನಿರ್ದೇಶಕ ನಟರಾಜನ್, ಚೆಟ್ಟಿನಾಡು ಗ್ರೂಪ್ನ ಪಾಲಿಬೆಟ್ಟ-ದುಬಾರೆ ತೋಟದ ವ್ಯವಸ್ಥಾಪಕ ಕೊಳಂದೇ ವೇಲನ್, ಕೆನರಾ ಬ್ಯಾಂಕ್ ವ್ಯವಸ್ಥಾಪಕ ವೇಣುಗೋಪಾಲ್ ಅವರುಗಳನ್ನು ವೇದಿಕೆಯಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.
ಇದೇ ಸಂದರ್ಭ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಶೋಭಾ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರೌಢಶಾಲಾ ಮುಖ್ಯ ಶಿಕ್ಷಕ ರವಿಚಂದ್ರನ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಅಜಿತಾ, ಸುಷಾ, ಉತ್ತಪ್ಪ, ಶ್ರೀನಿವಾಸ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಗ್ಲಾಡಿ ಸಿಕ್ವೇರಾ, ಶಾಲಾ ಹಳೆ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ರಾಜೇಶ್, ಗ್ರಾಮ ಪಂಚಾಯಿತಿ ಸದಸ್ಯ ಬಿಜು, ಸರ್ವ ಸಹಾಯ ಮಿತ್ರ ಮಂಡಳಿ ಅಧ್ಯಕ್ಷ ಅಬ್ದುಲ್ ರೆಹಮಾನ್, ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಘದ ಅಧ್ಯಕ್ಷೆ ಇಂದಿರಾ ಸೇರಿದಂತೆ ಶಾಲಾ ಶಿಕ್ಷಕರು, ಪೋಷಕರು ಹಾಜರಿದ್ದರು. ಶಾಲಾ ಶಿಕ್ಷಕ ಗಿರೀಶ್ ಸ್ವಾಗತಿಸಿ, ಶಿಲ್ಪ ನಿರೂಪಿಸಿ, ಬಿ.ಬಿ. ಜಾಜಿ ವಂದಿಸಿದರು.
ಬಳಗುಂದ ಶಾಲೆಯಲ್ಲಿ: ಸಮೀಪದ ಬಳಗುಂದ ಸರ್ಕಾರಿ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಅಲ್ಲಿನ ಪಾಂಚಜನ್ಯ ಯುವಕ ಸಂಘದಿಂದ ವಿದ್ಯಾರ್ಥಿಗಳಿಗೆ ಟೈ ಹಾಗೂ ಬೆಲ್ಟ್ಗಳನ್ನು ವಿತರಿಸಲಾಯಿತು.
ಸಂಘದ ಪದಾಧಿಕಾರಿಗಳಾದ ವಿಶು ಪೂವಯ್ಯ, ಪ್ರಶಾಂತ್, ಪ್ರದೀಪ್, ಹರೀಶ್, ಶಶಿಕಾಂತ್, ಪ್ರಿಯಾಂತ್ ಹಾಗೂ ಶಾಲಾ ಮುಖ್ಯಶಿಕ್ಷಕಿ ಜಯಂತಿ, ಶಿಕ್ಷಕಿ ಭಾಗ್ಯ, ದಮಯಂತಿ ಅವರುಗಳು ಈ ಸಂದರ್ಭ ಉಪಸ್ಥಿತರಿದ್ದರು.
ಮಾಲ್ದಾರೆ: ನೆಹರು ಯುವ ಕೇಂದ್ರ ಮಡಿಕೇರಿ ಹಾಗೂ ಜನಪರ ಸಂಘಟನೆ ಮಾಲ್ದಾರೆ ಇವರ ಸಂಯುಕ್ತ ಆಶ್ರಯದಲ್ಲಿ ಗುಡ್ಲೂರ್ ಸ.ಕಿ.ಪ್ರಾ. ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಹಲವು ಕಾರ್ಯಕ್ರಮಗಳೊಂದಿಗೆ ನಡೆಸಲಾಯಿತು.
ಕಾರ್ಯಕ್ರಮದ ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಸದಸ್ಯ ರಘು ಕರುಂಬಯ್ಯ ಹಾಗೂ ಶಾಲಾ ಅಧ್ಯಾಪಕಿ ನಂದಿತ, ಅಂಗನವಾಡಿ ಅಧ್ಯಾಪಕಿ ಕಮಲ, ಆಶಾ ಕಾರ್ಯಕರ್ತೆ ರೋಶ್ನಿ ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು. ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಅಂಗನವಾಡಿ ವಿದ್ಯಾರ್ಥಿಗಳಿಗೆ ಪೆನ್-ಪೆನ್ಸಿಲ್ ಮತ್ತು ಸಿಹಿ ಸಂಘದ ವತಿಯಿಂದ ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಆಂಟೋನಿ. ಖಜಾಂಚಿ ಹರಿಪ್ರಸಾದ್. ವಿನಿಲ್, ಅಪ್ಪು ಜಮೀಲ್, ರಂಜು, ಜಬೀರ್, ಇಸ್ಮಾಯಿಲ್, ಮಸೂಕ್, ಸುಗು ಹಾಗೂ ಮತ್ತಿತರರು ಪಾಲ್ಗೊಂಡಿದ್ದರು. ಭಾವ ಮಾಲ್ದಾರೆ ನಿರ್ವಹಿಸಿದರು.
ಸಿದ್ದಾಪುರ: ಮೊರಾರ್ಜಿ ದೇಸಾಯಿ ವಸತಿ ಶಾಲೆ ಆಲೂರು-ಸಿದ್ದಾಪುರದಲ್ಲಿ ಮಕ್ಕಳ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿ ನಾಯಕರಾದ ಸುಪಿನ್ ಹಾಗೂ ವಿದ್ಯಾರ್ಥಿನಿ ಸಿರಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಲಾ ವಿದ್ಯಾರ್ಥಿ ಸಂಘದ ನಾಯಕರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳಾದ 10ನೇ ತರಗತಿ ಯಶವಂತ್, ಸಿಂದು, 9ನೇ ತರಗತಿ ಹುಲನ್, ಹರ್ಷಿತಾ, 8ನೇ ತರಗತಿ ಸನಯ್ ಕುಮಾರ್, ಕಾವ್ಯ, 7ನೇ ತರಗತಿ ಗೌತಮ್, ನಿಶಾ ಟಿ.ಡಿ. 6ನೇ ತರಗತಿ ಸಿದ್ದೇಶ, ಅಮೂಲ್ಯ ರವರಿಗೆ ಬಹುಮಾನ ನೀಡಿ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ಕಾರ್ಯಕ್ರಮದ ಕುರಿತು ಭಾಷಣ, ಗೀತೆಗಳನ್ನು ಹಾಡಿ ರಂಜಿಸಿದರು. ವಿದ್ಯಾರ್ಥಿಗಳಿಗೆ ಮನೋರಂಜನಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲೆ ಭಾರತಿ ಕೆ.ಆರ್. ಶಿಕ್ಷಕರಾದ ಸತೀಶ್ ಡಿ.ಪಿ., ಅಲೋಕ್, ಪ್ರಸಾದ್, ಮಂಜು, ಮನುಕುಮಾರ್, ಮಮತಾ, ಲೋಲಾಕ್ಷಿ ಇತರರಿದ್ದರು.ಒಡೆಯನಪುರ: ಸಮೀಪದ ಶನಿವಾರಸಂತೆ ಸುಪ್ರಜ ಗುರುಕುಲ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯಲ್ಲಿ ಮಕ್ಕಳ ದಿನಾಚರಣೆ ಮಕ್ಕಳ ಕಲರವ ಮತ್ತು 64ನೇ ಕನ್ನಡ ರಾಜ್ಯೋತ್ಸವ ಹಾಗೂ ಶನಿವಾರಸಂತೆ ಹೋಬಳಿ ಜಾನಪದ ಪರಿಷತ್ ಮತ್ತು ಸುಪ್ರಜ ಗುರುಕುಲ ವಿದ್ಯಾಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಕನ್ನಡ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರ ಬಹುಮಾನ ವಿತರಣೆ ಕಾರ್ಯಕ್ರಮವನ್ನು ವಿದ್ಯಾಸಂಸ್ಥೆ ಆವರಣದಲ್ಲಿ ಏರ್ಪಡಿಸಲಾಯಿತು.
ಶಾಲೆಯ 9ನೇ ತರಗತಿ ವಿದ್ಯಾರ್ಥಿ ಪಿ.ಡಿ. ಸಾತ್ವಿಕ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು 7ನೇ ತರಗತಿ ವಿದ್ಯಾರ್ಥಿಗಳಾದ ಗಾನವಿ ಮತ್ತು ನೇಹನ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ 3ನೇ ಮತ್ತು 4ನೇ ತರಗತಿ ವಿದ್ಯಾರ್ಥಿಗಳಾದ ಬಿ. ಸಾರ್ಥಕ್, ಪ್ರದೀಪ್, ಮೋಕ್ಷೀತ್ಗೌಡ 5 ಮತ್ತು 6ನೇ ತರಗತಿ ವಿದ್ಯಾರ್ಥಿಗಳಾದ ಧನುಷ್ ಶೆಟ್ಟಿ, ಸಾಯಿಪೂರ್ವಿ ಪಾಲ್ಗೊಂಡು ದಿನದ ಮಹತ್ವದ ಕುರಿತಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಕ್ಕಳು ಮಕ್ಕಳ ದಿನಾಚರಣೆ ಮಹತ್ವ, ನೆಹರು ಮತ್ತು ಕನ್ನಡ ರಾಜ್ಯೋತ್ಸವದ ಕುರಿತಾಗಿ ಭಾಷಣ ಮಾಡಿದರು.
ಮಕ್ಕಳ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಸುಪ್ರಜ ಗುರುಕುಲ ವಿದ್ಯಾಸಂಸ್ಥೆ ಟ್ರಸ್ಟಿ ಡಿ. ಸುಜಲಾದೇವಿ, ಕಾರ್ಯದರ್ಶಿ ಡಿ.ಟಿ. ಗುರುಪ್ರಸಾದ್ ಮತ್ತು ಶಿಕ್ಷಕರ ನೇತೃತ್ವದಲ್ಲಿ ಆಯೋಜನೆ ಮಾಡಲಾಗಿತ್ತು. ಅಧಿಕ ಸಂಖ್ಯೆಯಲ್ಲಿ ಪೋಷಕರು ಪಾಲ್ಗೊಂಡಿದ್ದರು.
ಈ ಸಂದರ್ಭ ವಿದ್ಯಾರ್ಥಿಗಳ ಕನ್ನಡ ರಸಪ್ರಶ್ನೆ ಸ್ಪರ್ಧಾ ವಿಜೇತರ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತ ಶಯನ ವಿಜೇತರಿಗೆ ಬಹುಮಾನ ವಿತರಿಸಿದರು. ಈ ಸಂದರ್ಭ ಜಾನಪದ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಕುಶಾಲಪ್ಪ, ಸೋಮವಾರಪೇಟೆ ತಾಲೂಕು ಜಾನಪದ ಪರಿಷತ್ ಕಾರ್ಯದರ್ಶಿ ವಿಜಯ್ ಹಾನಗಲ್, ಶನಿವಾರಸಂತೆ ಹೋಬಳಿ ಜಾನಪದ ಪರಿಷತ್ ಅಧ್ಯಕ್ಷೆ ಡಿ. ಸುಜಲಾದೇವಿ, ಜಾನಪದ ಪರಿಷತ್ ಪದಾಧಿಕಾರಿಗಳಾದ ಡಿ.ಟಿ. ಗುರುಪ್ರಸಾದ್, ವಿ.ಸಿ. ಸುರೇಶ್ ಒಡೆಯನಪುರ, ಸರ್ಫರಾಜ್ ಆಹಮದ್ ಮುಂತಾದವರು ಹಾಜರಿದ್ದರು.
ಸೋಮವಾರಪೇಟೆ: ಮಕ್ಕಳ ದಿನಾಚರಣೆಯನ್ನು ಸೋಮವಾರಪೇಟೆ ವ್ಯಾಪ್ತಿಯ ವಿವಿಧ ಶಾಲೆಗಳಲ್ಲಿ ಆಚರಿಸಲಾಯಿತು. ದೊಡ್ಡಮಳ್ತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂತೆ ನಡೆಯಿತು.
ಗ್ರಾಮೀಣ ಭಾಗದಲ್ಲಿ ಬೆಳೆದ ವಿವಿಧ ತರಕಾರಿ, ಸೊಪ್ಪು, ಹಣ್ಣು ಹಂಪಲುಗಳನ್ನು ತಂದು ಮಕ್ಕಳು ಮಾರಾಟ ಮಾಡಿದರು. ಪೋಷಕರು, ಶಿಕ್ಷಕರು ಹಾಗೂ ಸ್ಥಳೀಯರು ಶಾಲೆಗೆ ಬಂದು ಮಕ್ಕಳ ಸಂತೆಯಲ್ಲಿ ಖರೀದಿ ಮಾಡಿದರು.
ಮನೆಯ ಸಮೀಪದಲ್ಲೇ ಸಾವಯವ ಮಾದರಿಯಲ್ಲಿ ಬೆಳೆದ ಬಸಲೆ ಸೊಪ್ಪು ಹಾಗೂ ಇತರ ಸೊಪ್ಪುಗಳಿಗೆ ಬೇಡಿಗೆ ಹೆಚ್ಚಾಗಿ, ಭರ್ಜರಿ ವ್ಯಾಪಾರದಿಂದ ಮಕ್ಕಳು ಆರ್ಥಿಕ ಲಾಭಗಳಿಸಿ ಸಂತೋಷ ವ್ಯಕ್ತಪಡಿಸಿದರು.
ಸಾವಯವ ಮಾದರಿಯಲ್ಲಿ ತರಕಾರಿ, ಸೊಪ್ಪುಗಳನ್ನು ಬೆಳೆದು ಹಣ ಗಳಿಸುವ ಬಗ್ಗೆ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಆಶಾ ಮಕ್ಕಳಿಗೆ ಮಾಹಿತಿ ನೀಡಿದರು. ಶಾಲಾ ಸಹ ಶಿಕ್ಷಕರಾದ ಗಿರಿಗೌಡ, ದಾಕ್ಷಾಯಣಿ, ಅಬಿದಾಬಾನು, ಕಾವ್ಯ ಅವರುಗಳು ಸಂತೆಯಲ್ಲಿ ಮಕ್ಕಳಿಗೆ ಸಹಕಾರ ನೀಡಿದರು.
ಮುಳ್ಳೂರು: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಳ್ಳೂರಿನಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಣೆ ಮಾಡಲಾಯಿತು ಬಣ್ಣ ಬಣ್ಣದ ವಸ್ತ್ರ ತೊಟ್ಟು ಬಂದ ವಿದ್ಯಾರ್ಥಿಗಳು ಪಾತರಗಿತ್ತಿಯಂತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಇದು ತಮ್ಮದೇ ದಿನ ಎಂಬ ಸಂಭ್ರಮದಲ್ಲಿದ್ದ ವಿದ್ಯಾರ್ಥಿಗಳು ಶಿಕ್ಷಕರು ಆಯೋಜಿಸಿದ್ದ ಮಕ್ಕಳ ಸಂಭ್ರಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
5ನೇ ತರಗತಿ ವಿದ್ಯಾರ್ಥಿನಿ ಸಿಂಚನ ಎಂ.ಜೆ. ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನೆರವೇರಿತು. ಮುಖ್ಯ ಅತಿಥಿಗಳಾಗಿ 4ನೇ ತರಗತಿಯ ಕುಮುದಾ ಮತ್ತು ಹರ್ಷವರ್ಧನ ಭಾಗವಹಿಸಿದರೆ, ನಿರೂಪಕರಾಗಿ ತನುಶ್ರೀ ಮತ್ತು ಮಿಲನ್ ಕಾರ್ಯಕ್ರಮ ನಿರೂಪಕರಾಗಿ ಗಮನ ಸೆಳೆದರು. ಮಕ್ಕಳು ತಮ್ಮ ಭಾಷಣದಲ್ಲಿ ನೆಹರೂ ಅವರ ಜೀವನ ಚರಿತ್ರೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು ಪ್ರಾಸ್ತಾವಿಕ ನುಡಿಗಳನ್ನಾಡಿದ ಶಿಕ್ಷಕ ಸತೀಶ್, ಮಗುವಿನ ಸಹಜ ಬೇಕು ಬೇಡಿಕೆಗಳಿಗೆ ಸ್ಪಂದಿಸುವಂತೆ ಕರೆ ನೀಡಿದರು. ಮುಖ್ಯೋಪಾಧ್ಯಾಯ ಮಂಜುನಾಥ್, ಶಾಲಾ ಎಸ್.ಡಿ.ಎಂ.ಸಿ. ಪದಾಧಿಕಾರಿಗಳು, ಪೋಷಕರು ಹಾಜರಿದ್ದು, ಕಾರ್ಯಕ್ರಮ ಸುಸೂತ್ರವಾಗಿ ನೆರವೇರಿಸಿಕೊಟ್ಟರು.
ಮಾಯಮುಡಿ: ಮಾಯಮುಡಿ ಗ್ರಾಮದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಭಾರತ ಸೇವಾ ದಳ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಗ್ರಾಮಸ್ಥರು ರಸ್ತೆ ಬದಿ ಕಸ ಹೆಕ್ಕುವ ಮೂಲಕ ಶ್ರಮದಾನ ಮಾಡಿದರು. ಗ್ರಾಮದ ಮಾನಿಲ್ ಅಯ್ಯಪ್ಪ ಯುವಕ ಸಂಘ, ಕಂಗಳತ್ತ್ನಾಡ್ ಮಹಿಳಾ ಸಮಾಜ, ಕ್ಲೀನ್ ಕೂರ್ಗ್ ಇನಿಶೇಟಿವ್, ಭಾರತ್ ಸೇವಾ ದಳ ವತಿಯಿಂದ ಅಲ್ಲಿನ ರಾಮಮಂದಿರ ಆವರಣದಿಂದ ಮಡಿಕೆಬೀಡುವರೆಗೆ ಸ್ವಚ್ಛತೆ ನಡೆಸಲಾಯಿತು. ರಸ್ತೆ ಬದಿಯಲ್ಲಿನ ಪ್ಲಾಸ್ಟಿಕ್, ಕಸ ಹೆಕ್ಕಿ ಸ್ವಚ್ಛತೆ ಅರಿವು ಮೂಡಿಸಲಾಯಿತು. ಸುಮಾರು 100 ಕ್ಕೂ ಹೆಚ್ಚು ಜನರು ಪಾಲ್ಗೊಂಡರು.
ಭಾರತ್ ಸೇವಾ ದಳ ಜಿಲ್ಲಾ ಸಂಘಟಕ ಉಮೇಶ್, ತಾಲೂಕು ಸಂಘಟಕ ಪಿ.ಎ. ಪ್ರವೀಣ್ ಸ್ವಚ್ಛತೆ ಕಾಪಾಡಿಕೊಳ್ಳುವ ಬಗ್ಗೆ ಸ್ವಯಂ ಸೇವಕರಿಗೆ ಅರಿವು ಮೂಡಿಸಿದರು. ಪ್ರಮುಖರಾದ ಸಣ್ಣುವಂಡ ರಮೇಶ್, ಚೆಪ್ಪುಡೀರ ದರ್ಶನ್, ಪ್ರದೀಪ್ ಪೂವಯ್ಯ, ಆಪಟ್ಟೀರ ಬೋಪಣ್ಣ, ರಾಧಾ ಅಚ್ಚಯ್ಯ, ಪಂಚು ದೇವಯ್ಯ ಇದ್ದರು.