ಗೋಣಿಕೊಪ್ಪ ವರದಿ, ನ. 16: ವನವಾಸಿ ಕಲ್ಯಾಣ ಜಿಲ್ಲಾ ಘಟಕದ ಆಶ್ರಯದಲ್ಲಿ ನಿಟ್ಟೂರು-ಕಾರ್ಮಾಡು ಗ್ರಾಮದ ಯರವರ ಸಂಘದ ಸಭಾಂಗಣದಲ್ಲಿ ಬಿರ್ಸಾ ಮುಂಡಾ ಜಯಂತಿ ಆಚರಣೆ ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಿರಿಯರಾದ ಅಳಮೇಂಗಡ ಬೋಸ್ ಮಂದಣ್ಣ ಮಾತನಾಡಿ, ಬುಡಕಟ್ಟು ಜನಾಂಗದ ಯುವಪೀಳಿಗೆ ದುಷ್ಚಟಗಳಿಂದ ದೂರ ಉಳಿಯಬೇಕು. ಆಮಿಷಗಳಿಗೆ ಒಳಗಾಗದೆ ತಮ್ಮ ಶ್ರೀಮಂತ ಸಂಸ್ಕೃತಿಯನ್ನು ಉಳಿಸಿಕೊಂಡು ಉತ್ತಮ ನಾಗರಿಕರಾಗಿ ಬದುಕು ಸಾಗಿಸಬೇಕು ಎಂದು ಕರೆ ನೀಡಿದರು.

ಕಾರ್ಯದರ್ಶಿ ಪ್ರಭುಕುಮಾರ್ ಮಾತನಾಡಿ, ಬಿರ್ಸಾ ಮುಂಡಾ ಅವರು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿ ಬುಡಕಟ್ಟು ಜನಾಂಗಕ್ಕೆ ಮಾದರಿಯಾಗಿದ್ದಾರೆ. ಇಂದಿಗೂ ಅವರ ಭಾವಚಿತ್ರ ಭಾರತದ ಪಾರ್ಲಿಮೆಂಟ್ ಭವನದಲ್ಲಿ ರಾರಾಜಿಸುತ್ತಿದೆ. ಇವರ ಹೋರಾಟವನ್ನು ಗೌರವಿಸಿ ರಾಂಚಿ ವಿಮಾನ ನಿಲ್ದಾಣ, ಕೃಷಿ ಕಾಲೇಜು ಹಾಗೂ ಕ್ರೀಡಾಂಗಣಕ್ಕೆ ಇವರ ಹೆಸರನ್ನು ನಾಮಕರಣ ಮಾಡಲಾಗಿದೆ. ಬುಡಕಟ್ಟು ಜನಾಂಗಕ್ಕೆ ಇವರ ಬದುಕು ಮಾದರಿಯಾಗಬೇಕು ಎಂದು ಹೇಳಿದರು.

ಕ್ರೀಡಾಕೂಟ: ಜಯಂತಿ ಪ್ರಯುಕ್ತ ಬಾಳೆಲೆ ಕ್ರೀಡಾ ಕೇಂದ್ರ ವತಿಯಿಂದ ಗ್ರಾಮದ ಮೈದಾನದಲ್ಲಿ ವಾಲಿಬಾಲ್ ಪಂದ್ಯ ಏರ್ಪಡಿಸಲಾಗಿತ್ತು. ಹೋಬಳಿ ವ್ಯಾಪ್ತಿಯ ಬುಡಕಟ್ಟು ಜನಾಂಗದ 5 ತಂಡಗಳು ಪಾಲ್ಗೊಂಡಿದ್ದವು. ತಟ್ಟಕೆರೆ ತಂಡ ಪ್ರಥಮ ಹಾಗೂ ನಿಟ್ಟೂರು ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.

ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹರೀಶ್, ಜಿಲ್ಲಾಧ್ಯಕ್ಷ ಪ್ರಕಾಶ್, ಕೊಲ್ಲಿಹಾಡಿ ಅಧ್ಯಕ್ಷ ಕಡ್ಡಿ, ಪ್ರಾಂತ ಸಂಚಾಲಕ ಗಾಣಂಗಡ ಬೋಪಯ್ಯ, ಪ್ರಮುಖರುಗಳಾದ ಕೃಷ್ಣ, ಮನು ನಂಜಪ್ಪ, ಯರವರ ಚಂದ ಇದ್ದರು.