ಚೆಟ್ಟಳ್ಳಿ, ನ. 16: ಕೊಡಗು ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ಪ್ರವಾಹಕ್ಕೆ ತುತ್ತಾಗಿ ಮನೆಗಳನ್ನು ಕಳೆದುಕೊಂಡು ಸಂತ್ರಸ್ತರಾದವರಿಗೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಒಟ್ಟು 25 ಮನೆಗಳನ್ನು ಜಾತಿ,ಮತ ಭೇದವಿಲ್ಲದೆ ನಿರ್ಮಾಣ ಮಾಡಿ ಕೊಡಲಾಗುವದೆಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಖಮರುಲ್ ಉಲಮಾ ಎ.ಪಿ. ಅಬೂಬಕರ್ ಮುಸ್ಲಿಯಾರ್ ಘೋಷಣೆ ಮಾಡಿದರು.
ಕೊಂಡಂಗೇರಿಯಲ್ಲಿ ಪ್ರವಾಹಕ್ಕೆ ತುತ್ತಾಗಿ ಸಂತ್ರಸ್ತರಾದವರಿಗೆ ನಿರ್ಮಿಸಲಿರುವ ‘ಬೈತುಸ್ಸಖಾಫ್’ ಭವನದ ಶಿಲಾನ್ಯಾಸವನ್ನು ಮಾಡಿ ಎ.ಪಿ. ಅಬೂಬಕರ್ ಮುಸ್ಲಿಯಾರ್ ಮಾತನಾಡಿದರು.
ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಸತತವಾಗಿ ಮಳೆಯಿಂದ ಪ್ರವಾಹ ಸಂಭವಿಸಿದೆ.
ಪ್ರವಾಹದಲ್ಲಿ ಹಲವಾರು ಜನರು ತಮ್ಮ ಮನೆ, ಆಸ್ತಿಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ.
ಸಂತ್ರಸ್ತರಿಗೆ ಸೂರು ಒದಗಿಸಲು ಎಲ್ಲರೂ ಜಾತಿ, ಮತ ಭೇದವಿಲ್ಲದೆ, ಮುಂದೆ ಬರಬೇಕು. ಅಲ್ಲದೇ ಪ್ರವಾಹದಲ್ಲಿ ಮನೆ ಕಳೆದುಕೊಂಡವರು ಯಾರೂ ಕೂಡ ಎದೆಗುಂದದೆ ಧೈರ್ಯದಿಂದ ಇರಬೇಕು ಎಂದು ಎ.ಪಿ. ಅಬೂಬಕರ್ ಮುಸ್ಲಿಯಾರ್ ಹೇಳಿದರು
ಕರ್ನಾಟಕ ರಾಜ್ಯ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಸಿದ್ದಾಪುರದ ಪಿ.ಸಿ. ಹಸೈನಾರ್ ಹಾಜಿ, ಐದು ಲಕ್ಷ ರೂ. ವೆಚ್ಚದಲ್ಲಿ ಒಂದು ಕುಟುಂಬಕ್ಕೆ ತಾವು ಮನೆ ನಿರ್ಮಿಸಿ ಕೊಡುವದಾಗಿ ಘೋಷಣೆ ಮಾಡಿದರು.
ಹನೀಫ್ ಸಖಾಫಿ ಮಾತನಾಡಿ, ಕೊಂಡಂಗೇರಿಯ ನೆರೆ ಸಂತ್ರಸ್ತರಿಗೆ ದಾನಿಗಳು ನೀಡಿದ ಒಟ್ಟು 3 ಎಕರೆ ಜಾಗದಲ್ಲಿ ಸುಮಾರು ಅಂದಾಜು 100 ಮನೆಗಳನ್ನು ಕೊಂಡಂಗೇರಿ ಸುನ್ನಿ ಜಮಾಹತ್ ವತಿಯಿಂದ ನಿರ್ಮಿಸಿ ಕೊಡುವ ಯೋಜನೆಯನ್ನು ರೂಪಿಸಿದ್ದೇವೆ ಎಂದರು.
ಈ ಸಂದರ್ಭ ವೇದಿಕೆಯಲ್ಲಿ ನಾಸಿರ್ ಆಲಿ ಕಮ್ಮಾಸ್, ಶಾದುಲಿ ಫೈಝಿ, ಕೆ.ಎಂ. ಯಹ್ಯಾ, ಇಕ್ಬಾಲ್, ಅಹ್ಮದ್ ಹಾಜಿ, ಕೆ.ಕೆ ಯೂಸುಫ್ ಹಾಜಿ, ಪಿ.ಇ ಶಾದುಲಿ, ಎ.ಎಂ. ಅಬ್ದುಲ್ಲಾ, ಮಜೀದ್ ಮದನಿ, ಸುಲೈಮಾನ್ ಫಾಲಿಲಿ, ವಕ್ಫ್ ಬೋರ್ಡ್ ಸದಸ್ಯ ಅಬ್ದುಲ್ ರೆಹ್ಮಾನ್ ಇದ್ದರು.