ಮಡಿಕೇರಿ, ನ. 15: ಮನು ಜನ ಅಂಗಾಂಗ ದಾನದಿಂದ ಇತರರಿಗೆ ಆಗುವ ಸಹಾಯ, ದಾನ ಮಾಡುವ ಬಗೆಗಿನ ಮಾಹಿತಿಯನ್ನು ಪ್ರಚುರ ಪಡಿಸುವ ಸಲುವಾಗಿ ಲಯನ್ಸ್ ಕ್ಲಬ್ ಆಫ್ ಕೊಡಗು ವತಿಯಿಂದ ವಾಹನ ಜಾಥಾ ಮೂಲಕ ಜಾಗೃತಿ ಮೂಡಿಸಲಾಯಿತು.ಜಿಲ್ಲೆಯ ವಿವಿಧೆಡೆಗಳಿಂದ ಹೊರಟು ಮಡಿಕೇರಿಗೆ ಆಗಮಿಸಿದ ಜಾಥಾಗೆ ಫೀ.ಮಾ. ಕಾರ್ಯಪ್ಪ ವೃತ್ತದಲ್ಲಿ ನಗರ ಠಾಣಾಧಿಕಾರಿ ಸದಾಶಿವ ಅವರು ಧ್ವಜ ಹಾರಿಸುವ ಮೂಲಕ ಚಾಲನೆ ನೀಡಿದರು. ಅಪೊಲೋ ಆಸ್ಪತ್ರೆಯ ತಜ್ಞ ವೈದ್ಯ ಶ್ರೀನಿವಾಸ್ ನಲ್ಲೂರು ಅಂಗಾಂಗ ದಾನ ಮಾಡುವ ವಿಧಿ ವಿಧಾನಗಳ ಬಗ್ಗೆ, ಅದರಿಂದ ಮತ್ತೊಬ್ಬರಿಗೆ ಆಗುವ ಪ್ರಯೋಜನದ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭ ಲಯನ್ಸ್ ಜಿಲ್ಲಾ ಕಾರ್ಯಕ್ರಮ ಸಂಯೋಜಕ ಗೋವರ್ಧನ್ ಶೆಟ್ಟಿ, ಮುಖ್ಯ ಸಂಯೋಜಕ ಸಂಜಿತ್ ಶೆಟ್ಟಿ, ವಲಯ ಅಧ್ಯಕ್ಷ ಕೆ.ಕೆ. ದಾಮೋದರ್, ಲಯನ್ಸ್ ಮಡಿಕೇರಿ ಅಧ್ಯಕ್ಷ ಮೋಹನ್ ಕುಮಾರ್, ಕಾರ್ಯದರ್ಶಿ ಮಧುಕರ್, ಖಜಾಂಚಿ ಮಧುಕರ್ ಶೇಟ್, ಬಿ.ಸಿ. ನಂಜಪ್ಪ, ಅಂಬೆಕಲ್ ನವೀನ್ ಕುಶಾಲಪ್ಪ, ವೈದ್ಯರುಗಳಾದ
ಡಾ. ಅನ್ರಿತ್ ನಾಣಯ್ಯ, ರಾಖೇಶ್ ಉತ್ತಪ್ಪ, ದಕ್ಷ್ ನಿಶಾಂತ್, ಜಿಲ್ಲೆಯ ಎಲ್ಲಾ ಘಟಕಗಳ ಲಯನ್ಸ್ ಅಧ್ಯಕ್ಷರುಗಳು ಪಾಲ್ಗೊಂಡಿದ್ದರು. ಜಾಥಾವು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ
(ಮೊದಲ ಪುಟದಿಂದ) ಫೀ.ಮಾ. ಕಾರ್ಯಪ್ಪ ಕಾಲೇಜಿನಲ್ಲಿ ಸಮಾವೇಶಗೊಂಡಿತು. ನಂತರ ಕಾಲೇಜು ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನೆರವೇರಿತು.
ಗೋಣಿಕೊಪ್ಪ ವರದಿ : ಕೊಡಗು ಲಯನ್ಸ್ ಕ್ಲಬ್, ಅಪೋಲೊ ಆಸ್ಪತ್ರೆ ಸಹಯೋಗದಲ್ಲಿ ಜಿಲ್ಲೆಯ ಜನರಲ್ಲಿ ಅಂಗಾಂಗ ದಾನದ ಅರಿವು ಮೂಡಿಸುವ ಉದ್ದೇಶದಿಂದ ಆಯೋಜಿಸಿದ್ದ ಜಾಗೃತಿ ಜಾಥಾವು ದಕ್ಷಿಣ ಕೊಡಗಿನ ವಿವಿಧ ಭಾಗಗಳಲ್ಲಿ ನಡೆಯಿತು. ಅಮ್ಮತ್ತಿ, ಪಾಲಿಬೆಟ್ಟ, ಗೋಣಿಕೊಪ್ಪ ಕಡೆಗಳಲ್ಲಿ ವಾಹನದ ಮೂಲಕÀ ಸಂಚರಿಸಿದ ಜಾಥಾ ವೀರಾಜಪೇಟೆ ಮೂಲಕ ಮಡಿಕೇರಿಗೆ ತೆರಳಿತು.
ಜಾಥಾ ಸಂದರ್ಭ ಅಂಗಾಂಗ ಕಸಿ ಬಗ್ಗೆ ಜಾಗೃತಿ ಮೂಡಿಸಲಾಯಿತು. ದೇಶದಲ್ಲಿ ಪ್ರತಿದಿನ ಕನಿಷ್ಟ 15 ರೋಗಿಗಳು ಅಂಗಾಂಗ ಕಸಿಗಾಗಿ ಹಾತೊರೆದು ಸಾವನಪ್ಪುತ್ತಿರುವ ಘಟನೆ ಬಗ್ಗೆ ಮಾಹಿತಿ ನೀಡಲಾಯಿತು. ಪ್ರತೀ 10 ನಿಮಿಷಕೊಮ್ಮೆ ಅಂಗಾಂಗ ಪಟ್ಟಿಗೆ ಕಾಯುವವರ ಸಂಖ್ಯೆಗೆ ದಾನ ಮಾಡುವವರ ಸಂಖ್ಯೆ ಸೇರಿಸಲು ಜಾಗೃತಿ ನಡೆಸಲಾಗುತ್ತಿದೆ. ಇದಕ್ಕೆ ಜನ ಸಾಮಾನ್ಯ ದಾನಿಗಳ ಪ್ರೋತ್ಸಾಹದ ಬಗ್ಗೆ ತಿಳಿಸಲಾಯಿತು.
18 ವರ್ಷ ಮೇಲ್ಪಟ್ಟವರು ಪೋಷಕರೊಂದಿಗೆ ನಿರ್ಧರಿಸಿ ಕಾನೂನು ರೂಪದಲ್ಲಿ ದಾನಕ್ಕೆ ಮುಂದಾಗುವ ಬಗ್ಗೆ ತಿಳಿಸಲಾಯಿತು. ಅಂಗ ಪಡೆಯುವವರು ಕಸಿ ಮಾಡುವ ವೆಚ್ಚ ಭರಿಸುವದರಿಂದ ದಾನಿಗಳಿಗೆ ತಮ್ಮ ಅಂಗಗಳಿಗೆ ಮತ್ತೆ ಜೀವ ತುಂಬಲು ಅವಕಾಶವಿದೆ. ಆರ್ಥಿಕ ವೆಚ್ಚದ ಸಮಸ್ಯೆ ಇಲ್ಲ ಎಂದು ಜನರಿಗೆ ತಿಳಿಸಲಾಯಿತು. ಜಿಲ್ಲೆಯಲ್ಲಿ ನಡೆಯು ತ್ತಿರುವ ದಾನಿಗಳ ಹೆಸರು ನೋಂದಣಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ತಿಳಿಸಲಾಯಿತು. ವಾಹನ ಜಾಥಾ ಮೂಲಕ ಆಯಾ ಭಾಗದ ಲಯನ್ಸ್ ಕ್ಲಬ್ ಪ್ರಮುಖರು ಅರಿವು ಮೂಡಿಸಿದರು.
ಅಮ್ಮತ್ತಿ ಲಯನ್ಸ್ ಕ್ಲಬ್ ವತಿಯಿಂದ ಅರಿವು ಜಾಥಾ ಕಾರ್ಯಕ್ರಮವನ್ನು ಅಮ್ಮತ್ತಿ ಕೊಡವ ಸಮಾಜ ಅಧ್ಯಕ್ಷ ಮೂಕೊಂಡ ಬೋಸ್, ಸ್ಥಳೀಯ ಪೊಲೀಸ್ ಸಿಬ್ಬಂದಿಯಾದ ಎಸ್. ಜಿ. ಪಾಟಿಲ್, ರಸಲ್ಗಂಡಿ ಧ್ವಜ ಹಾರಿಸುವ ಮೂಲಕ ಉದ್ಘಾಟಿಸಿದರು.
ಅಮ್ಮತ್ತಿ ಕೊಡವ ಸಮಾಜ ಅಧ್ಯಕ್ಷ ಮುಕೊಂಡ ಬೋಸ್ ಮಾತನಾಡಿ, ನಮ್ಮ ಸಾವಿನೊಂದಿಗೆ ಜೀವಂತ ವಿರುವ ಅಂಗಗಳನ್ನು ಬೇರೆಯವರಿಗೆ ದಾನ ಮಾಡುವ ಮೂಲಕ ಬೇರೆಯವರಲ್ಲಿ ನಮ್ಮ ಅಂಗಾಂಗಗಳು ಜೀವಂತಿಕೆ ಉಳಿಸಿಕೊಳ್ಳಲು ಜನ ಸಾಮಾನ್ಯರು ದಾನ ಕಾರ್ಯಕ್ಕೆ ಮುಂದಾಗಬೇಕು ಎಂದರು. ಸಾವು ಖಚಿತ ಎಂಬವದನ್ನು ಎಲ್ಲರೂ ಅರಿತು ಕೊಂಡು ಅಂಗಾಂಗ ದಾನಕ್ಕೆ ಕೈಜೋಡಿಸಬೇಕಿದೆ. ಅಪಘಾತ ಇನ್ನಿತರ ಘಟನೆಗಳಲ್ಲಿ ಅಂಗ ಕಳೆದುಕೊಂಡವರ ಬಾಳಿಗೆ ಮತ್ತೆ ಜೀವ ತುಂಬುವಂತ ಮಹತ್ಕಾರ್ಯಕ್ಕೆ ನಾವು ಮುಂದಾಗಬೇಕಿದೆ ಎಂದರು.
ಈ ಸಂದರ್ಭ ಅಮ್ಮತ್ತಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಜ್ಯೋತಿ ಪೊನ್ನಪ್ಪ, ಕಾರ್ಯದರ್ಶಿ ಸವಿತಾ ಬೋಪಣ್ಣ, ಖಜಾಂಜಿ ರಕ್ಷಿತ್ ಅಯ್ಯಪ್ಪ, ಪ್ರಮುಖರಾದ ಬೊಮ್ಮಂಡ ರೋಶನ್ ಅಯ್ಯಪ್ಪ ಸೇರಿದಂತೆ ಸ್ಥಳೀಯರು ಇದ್ದರು.
ಪಾಲಿಬೆಟ್ಟದಲ್ಲಿ: ಪಾಲಿಬೆಟ್ಟದಲ್ಲಿ ಲಯನ್ಸ್ ಕ್ಲಬ್ ಪ್ರಮುಖರು ಜಾಥಾದಲ್ಲಿ ತೊಡಗಿಕೊಂಡರು. ಪಾಲಿಬೆಟ್ಟ ಲಯನ್ಸ್ ಕ್ಲಬ್ ಅಧ್ಯಕ್ಷೆ ಕನ್ನಿಕಾ ಅಯ್ಯಪ್ಪ, ಪ್ರಮುಖರಾದ ಮೀರಾ ಸುಬ್ರಮಣಿ, ಸ್ವರೂಪ್ ಅಯ್ಯಪ್ಪ ಸದಸ್ಯರು ಇದ್ದರು.
ಗೋಣಿಕೊಪ್ಪದಲ್ಲಿ ಬಸ್ ನಿಲ್ದಾಣ ದಲ್ಲಿ ಜಾಥಾದಲ್ಲಿ ಪಾಲ್ಗೊಂಡು ಅರಿವು ಮೂಡಿಸಲಾಯಿತು. ಈ ಸಂದರ್ಭ ಗೋಣಿಕೊಪ್ಪ ಲಯನ್ಸ್ ಕ್ಲಬ್ ಅಧ್ಯಕ್ಷ ನಿತಿ ಪೂಣಚ್ಚ, ಕಾರ್ಯದರ್ಶಿ ಅಮ್ಮಂಡ ಚಿಣ್ಣಪ್ಪ, ಪ್ರಮುಖರಾದ ಅಲ್ಲುಮಾಡ ಸುನಿಲ್, ಸ್ವರಣ್ ಶುಭಾಶ್, ಅಚ್ಚಯ್ಯ ಇದ್ದರು. ಸಿದ್ದಾಪುರದಿಂದ ಆರಂಭಗೊಂಡ ಜಾಥಾದಲ್ಲಿ ಸಿದ್ದಾಪುರ ಲಯನ್ಸ್ ಕ್ಲಬ್ ಅಧ್ಯಕ್ಷ ವಿವೇಕ್ ಜೋಯಪ್ಪ ಮತ್ತು ಪ್ರಮುಖರು ಪಾಲ್ಗೊಂಡರು.
ಸುಂಟಿಕೊಪ್ಪ: ಲಯನ್ಸ್ ಕ್ಲಬ್ ಕೊಡಗು ವತಿಯಿಂದ ಇಲ್ಲಿನ ಕನ್ನಡ ವೃತ್ತದಲ್ಲಿ ಮಾನವನ ಅಂಗಾಂಗ ದಾನ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ನಡೆಸಲಾಯಿತು.
ತಾ. 17 ರಂದು ಅಂಗಾಂಗ ದಾನಿಯಾಗಿ ನೋಂದಾಯಿಸಿ ಮರಣ ನಂತರ ಮತ್ತೊಬ್ಬರ ಜೀವನಕ್ಕೆ ಬೆಳಕಾಗಿ ಸಾರ್ಥಕ ಜೀವನಕ್ಕೆ ಮುಡಿಯಿಡಬೇಕೆಂದು ಎಂ.ಎ.ವಸಂತ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ಅಂಗದಾನದಿಂದ ಬದುಕಿನ ಕತ್ತಲೆಯಲ್ಲಿರುವವರಿಗೆ ಬೆಳಕು ನೀಡಬಹುದು ಎಂದೂ ಅವರು ಹೇಳಿದರು.
ಈ ಸಂದರ್ಭ ಸುಂಟಿಕೊಪ್ಪ ಲಯನ್ಸ್ ಅಧ್ಯಕ್ಷ ಗ್ಲೆನ್ಮೆನೆಜೆಸ್, ಕಾರ್ಯದರ್ಶಿ ಶಶಾಂಕ್, ಮಾಜಿ ಅಧ್ಯಕ್ಷ ಪೊನ್ನಪ್ಪ, ಡಾ.ಯಶೋಧರ ಪೂಜಾರಿ ಮತ್ತಿತರರು ಇದ್ದರು.
ಕುಶಾಲನಗರ : ಅಂಗಾಂಗ ದಾನದ ಕುರಿತು ಜಾಗೃತಿ ಮೂಡಿಸುವ ಮತ್ತು ನೋಂದಣಿ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಲಯನ್ಸ್ ಕ್ಲಬ್ ಸದಸ್ಯರು ಕುಶಾಲನಗರದಿಂದ ಮಡಿಕೇರಿಗೆ ಜಾಥಾ ಹಮ್ಮಿಕೊಂಡರು.
ಜಾಥಾ ಕುಶಾಲನಗರ ಡಿವೈಎಸ್ಪಿ ಪಿ.ಕೆ.ಮುರಳೀಧರ್ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು, ಅಂಗಾಂಗ ದಾನ ಮಾಡುವ ಜನರಿಗೆ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಲಯನ್ಸ್ ಕ್ಲಬ್ ಉತ್ತಮ ಕಾರ್ಯ ಹಮ್ಮಿಕೊಂಡಿದೆ. ಕಾರ್ಯಕ್ರಮ ಯಶಸ್ವಿಯಾಗಲೆಂದು ಹಾರೈಸಿದರು.
ಕುಶಾಲನಗರ, ಸುಂಟಿಕೊಪ್ಪ, ಸೋಮವಾರಪೇಟೆ ಲಯನ್ಸ್ ಕ್ಲಬ್ಗಳ ತಂಡದ ಸದಸ್ಯರು ಕುಶಾಲನಗರ ಗಡಿಭಾಗ ಕೊಪ್ಪ ಕಾವೇರಿ ಪ್ರತಿಮೆ ಬಳಿ ಪೂಜೆ ಸಲ್ಲಿಸಿ ನಂತರ ಪಟ್ಟಣದ ಮುಖ್ಯ ರಸ್ತೆಯಲ್ಲಿ ಜಾಥಾ ನಡೆಸಿದರು. ಜನರಿಗೆ ಅಂಗಾಂಗ ದಾನದ ಬಗ್ಗೆ ಕರಪತ್ರ ಹಂಚುವದರೊಂದಿಗೆ ಅಂಗಾಂಗ ದಾನದ ನೋಂದಣಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಕುಶಾಲನಗರ ಲಯನ್ಸ್ ಅಧ್ಯಕ್ಷÀ ಕೊಡಗನ ಹರ್ಷ, ಸುಂಟಿಕೊಪ್ಪ ಕ್ಲಬ್ ಅಧ್ಯಕ್ಷ ಗ್ಲೆನ್ ಮೆನೇಜಸ್, ಸೋಮ ವಾರಪೇಟೆಯ ಎಂ.ಎ.ಹರೀಶ್ ನೇತೃತ್ವದಲ್ಲಿ ನಡೆದ ಜಾಥಾದಲ್ಲಿ ಲಯನ್ಸ್ ಕ್ಲಬ್ನ ಪ್ರಮುಖರಾದ ಪೊನ್ನಚ್ಚನ ಮೋಹನ್, ಗಣಿಪ್ರಸಾದ್, ಲೀಲಾ ರಾಮ್, ಮಹೇಶ್, ಕವಿತಾ ಮೋಹನ್, ವಿವೇಕ್, ಸುನಿಲ್, ರಾಜೇಶ್ ಮತ್ತಿತರರು ಇದ್ದರು.
ಸಿದ್ದಾಪುರ : ಲಯನ್ಸ್ ಕ್ಲಬ್ ವತಿಯಿಂದ ಹಮ್ಮಿಕೊಂಡಿರುವ ಅಂಗಾಗಗಳ ದಾನದ ಬಗ್ಗೆ ಅರಿವು ಕಾರ್ಯಕ್ರಮ ಜಾಥಾಕ್ಕೆ ಸಿದ್ದಾಪುರ ದಲ್ಲಿ ಚಾಲನೆ ನೀಡಲಾಯಿತು. ಲಯನ್ಸ್ ಕ್ಲಬ್ಗಳ ವತಿಯಿಂದ ತಾ.17ರಂದು ಅಂಗಾಂಗಗಳ ದಾನ ಮಾಡುವ ಬಗ್ಗೆ ದಾನಿಗಳು ನೋಂದಾಯಿಸುವ ಉದ್ದೇಶಕ್ಕಾಗಿ ಜಿಲ್ಲೆಯ ವಿವಿಧೆಡೆ ತೆರಳುವ ವಾಹನಗಳ ಜಾಥಾಕ್ಕೆ ಸಿದ್ದಾಪುರದಲ್ಲಿ ಠಾಣಾಧಿಕಾರಿ ದಯಾನಂದ ಚಾಲನೆ ನೀಡಿದರು. ಈ ಸಂದರ್ಭ ಸಿದ್ದಾಪುರ ಲಯನ್ಸ್ ಕ್ಲಬ್ನ ಅಧ್ಯಕ್ಷ ಕೀತಿಯಂಡ ವಿವೇಕ್ ಜೋಯಪ್ಪ, ಕಾರ್ಯದರ್ಶಿ ವಿಪಿನ್, ಭರತ್, ಲಯನ್ಸ್ ಕ್ಲಬ್ ಪದಾಧಿಕಾರಿಗಳಾದ ದಿನೇಶ್, ಸುನಿಲ್, ಮಮತ, ಚಿನ್ನು, ಥಾಮಸ್, ಅಪ್ಪಚ್ಚು, ವಿಶಾಲ್, ಸಿದ್ದಾಪುರ ಆಟೋ ಚಾಲಕರ ಮಾಲೀಕರ ಸಂಘದ ಅಧ್ಯಕ್ಷ ಎಂ.ಆರ್. ಸಲೀಂ ಹಾಗೂ ವಾಹನ ಚಾಲಕರ ಮತ್ತು ಮಜ್ದೂರ್ ಸಂಘದ ಅಧ್ಯಕ್ಷ ಸತೀಶ್ ಇತರರು ಪಾಲ್ಗೊಂಡಿದ್ದರು. ವಾಹನ ಜಾಥಾಕ್ಕೆ ಸಿದ್ದಾಪುರದ 40ಕ್ಕೂ ಹೆಚ್ಚು ಆಟೋರಿಕ್ಷಾಗಳು ಪಾಲ್ಗೊಂಡಿದ್ದವು. ಜಾಥಾವು ಸಿದ್ದಾಪುರ, ಅಮ್ಮತ್ತಿ ಪಾಲಿಬೆಟ್ಟ ಸೇರಿದಂತೆ ವಿವಿಧ ಊರುಗಳಿಗೆ ತೆರಳಿದ್ದವು.