ಗೋಣಿಕೊಪ್ಪಲು, ನ. 15: ವಾಣಿಜ್ಯ ನಗರ ಕನ್ನಡ ಬಾವುಟಗಳಿಂದ ಅಲಂಕೃತಗೊಂಡಿದ್ದು ಆಟೋ ನಿಲ್ದಾಣವು ತಳಿರು ತೋರಣ, ವಿದ್ಯುತ್ ಅಲಂಕಾರದಿಂದ ಕೂಡಿದೆ. ನಗರದ ಮುಖ್ಯ ರಸ್ತೆಯ ಎರಡು ಬದಿಯಲ್ಲಿ ಕನ್ನಡದ ಬಂಟಿಂಗ್ಸ್ಗಳು, ಬಾವುಟಗಳು ಹಾರಾಡುವ ಮೂಲಕ ಹಬ್ಬದ ವಾತಾವರಣ ಸೃಷ್ಟಿಯಾಗಿದೆ.
ಆಟೋ ಚಾಲಕರು,ಮಾಲೀಕರು ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಹಗಲು ರಾತ್ರಿಯೆನ್ನದೆ ದುಡಿಯುತ್ತಿದ್ದು ನಗರದಲ್ಲಿ ಸಂಚರಿಸುವ ಆಟೋ ರಿಕ್ಷಾಗಳು ಕನ್ನಡ ಬಾವುಟವನ್ನು ಅಳವಡಿಸಿಕೊಂಡು ಓಡಾಡುತ್ತಿವೆ. ತಾ. 17ರಂದು ಮುಂಜಾನೆಯಿಂದ ನಡೆಯಲಿರುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಆಟೋ ಚಾಲಕರ, ಮಾಲೀಕರ ಸಂಘದ ಗೌರವ ಅಧ್ಯಕ್ಷ ಸಿ.ಕೆ. ಬೋಪಣ್ಣ ಮುಂದಾಳತ್ವದಲ್ಲಿ ಸಮಿತಿಯ ಪದಾಧಿಕಾರಿಗಳು ಮಧ್ಯರಾತ್ರಿಯವರೆಗೂ ನಗರದಲ್ಲಿ ಕನ್ನಡ ಬಾವುಟವನ್ನು ಕಟ್ಟುವಲ್ಲಿ ತಲ್ಲೀನರಾಗಿದ್ದರು. ಕಾರ್ಯಕ್ರಮಕ್ಕೆ ಸ್ವಾಗತ ಕೋರುವ ಬ್ಯಾನರ್ಗಳು ನಗರದಲ್ಲಿ ಅಳವಡಿಸಲಾಗಿದೆ.
ಈ ಬಾರಿ ಸಂಘದ ವತಿಯಿಂದ 11ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಲಿದ್ದು ಕನ್ನಡ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಳೆದ 10 ವರ್ಷಗಳಿಂದ ಆಟೋ ಸಂಘವು ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಈ ಬಾರಿ ತಾ. 17 ರಂದು ದಿನ ಪೂರ್ತಿ ಕಾರ್ಯಕ್ರಮ ನಡೆಯಲಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಿಂದ ಆಟೋರಿಕ್ಷಾಗಳು ಮೆರವಣಿಗೆಯಲ್ಲಿ ಸಾಗಿ ಬರಲಿವೆ. ಮೆರವಣಿಗೆಯ ಜೊತೆಗೆ ಡೊಳ್ಳು ಕುಣಿತ, ಕನ್ನಡ ಸಂಸ್ಕøತಿಯನ್ನು ಬಿಂಬಿಸುವ ಛಧ್ಮವೇಶಗಳು, ಆದಿವಾಸಿಗಳ ಕೋಲಾಟ ಮೆರವಣಿಗೆಗೆ ಮೆರುಗು ನೀಡಲಿವೆ.
ಮೆರವಣಿಗೆಯು ಉಮಾ ಮಹೇಶ್ವರಿ ದೇವಸ್ಥಾನದವರೆಗೆ ಸಾಗಿ ಬರಲಿದ್ದು ಮಧ್ಯಾಹ್ನ 1 ಗಂಟೆಗೆ ಬಸ್ ನಿಲ್ದಾಣದಲ್ಲಿ ಗ್ರೀಸ್ಕಂಬ ಹತ್ತುವ ಕಾರ್ಯಕ್ರಮ ನಡೆಯಲಿದೆ. ಆಟೋ ನಿಲ್ದಾಣದಲ್ಲಿ ಮಧ್ಯಾಹ್ನ 2 ಸಾವಿರ ಮಂದಿಗೆ ಅನ್ನದಾನ ಆಯೋಜಿಸ ಲಾಗಿದೆ. ಬಸ್ ನಿಲ್ದಾಣದ ಬೃಹತ್ ವೇದಿಕೆಯಲ್ಲಿ ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಶಾಸಕ ಕೆ.ಜಿ.ಬೋಪಯ್ಯ, ಜಿ. ಪಂ.ಅಧ್ಯಕ್ಷ ಹರೀಶ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲೋಕೇಶ್ ಸಾಗರ್, ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಡಾ. ಚಂದ್ರಶೇಖರ್, ಆಟೋ ಚಾಲಕರ ಸಂಘದ ಅಧ್ಯಕ್ಷ ಜಪ್ಪು ಸುಬ್ಬಯ್ಯ ಸೇರಿದಂತೆ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ. ರಾತ್ರಿ 9.30ರ ನಂತರ ಬೆಂಗಳೂರಿನ ಕಲಾವಿದರಿಂದ ರಸ ಮಂಜರಿ ಕಾರ್ಯಕ್ರಮ ಮೂಡಿ ಬರಲಿದೆ.
(ವಿಶೇಷ ವರದಿ, ಹೆಚ್.ಕೆ.ಜಗದೀಶ್)