ಶನಿವಾರಸಂತೆ, ನ. 15: ಶನಿವಾರಸಂತೆಯ ಸಮೀಪದ ತ್ಯಾಗರಾಜ ಕಾಲೋನಿಯ ನಿವಾಸಿ ದಕ್ಷಿಣಮೂರ್ತಿ ಅವರ ಮನೆಗೆ ತ್ಯಾಗರಾಜ ಕಾಲೋನಿಯ ಚಂಗಡಹಳ್ಳಿ ಮುಖ್ಯರಸ್ತೆ ಪಕ್ಕದ ವಾಸಿ ಆರೋಪಿ ಬಸಪ್ಪ ಎಂಬಾತ ಮದ್ಯಸೇವಿಸಿ ಅಕ್ರಮ ಪ್ರವೇಶ ಮಾಡಿ, ಹಳೆಯ ವೈಷಮ್ಯದಿಂದ ರೀಪರ್ ಪಟ್ಟಿಯಿಂದ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿ ಮನೆಯಿಂದ ಹೊರಗಡೆ ಬರದಂತೆ ಮನೆಯ ಬಾಗಿಲು ಹಾಕಿಕೊಂಡು ಹೋದ ಪ್ರಕರಣ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ದಕ್ಷಿಣಮೂರ್ತಿ ಹಾಗೂ ಬಸಪ್ಪ ಅವರುಗಳಿಗೆ ಒಂದು ತಿಂಗಳ ಹಿಂದೆ ಸಾರಾಯಿ ಕುಡಿಯುವ ವಿಚಾರದಲ್ಲಿ ಜಗಳವಾಗಿದೆ. ತಾ. 11ರಂದು ದಕ್ಷಿಣಮೂರ್ತಿ ಆರೋಗ್ಯ ಸರಿ ಇಲ್ಲದ ಕಾರಣ ಮನೆಯಲ್ಲೇ ಮಲಗಿದ್ದಾಗ ಆರೋಪಿ ಮದ್ಯಪಾನ ಮಾಡಿಕೊಂಡು ಮನೆಗೆ ಅಕ್ರಮ ಪ್ರವೇಶಮಾಡಿ ನನ್ನ ಜತೆ ಜಗಳ ಮಾಡಲು ಬರುತ್ತೀಯ, ನಿನ್ನನ್ನು ಕೊಲೆ ಮಾಡದೆ ಬಿಡುವದಿಲ್ಲ ಎಂದು ಹೇಳಿಕೊಂಡು ಫ್ಲೈವುಡ್ ರೀಪರ್ ಪಟ್ಟಿಯಿಂದ ಹಣೆ ಮತ್ತು ತಲೆಯ ಭಾಗಕ್ಕೆ ಹೊಡೆದು, ಹೊರಗಡೆ ಬಾರದಂತೆ ಮನೆಯಲ್ಲಿ ಕೂಡಿಹಾಕಿ ಬಾಗಿಲು ಹಾಕಿಕೊಂಡು ಹೊರಟುಹೋಗಿದ್ದಾನೆ. ಸಂಜೆ ಕೂಲಿಕೆಲಸ ಮಾಡಿಕೊಂಡು ಬಂದ ತಾಯಿ ಕಲಾವತಿ ಪರಿಸ್ಥಿತಿಯನ್ನು ತಿಳಿದು ಅರಕಲಗೋಡಿನ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆಆರ್‍ಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಂದು ಶನಿವಾರಸಂತೆ ಪೊಲೀಸ್ ಠಾಣೆಗೆ ದೊರೆತ ಪುಕಾರಿನ ಮೇರೆ ಪೊಲೀಸ್ ಠಾಣಾಧಿಕಾರಿ ಕೃಷ್ಣನಾಯಕ್ ಪ್ರಕರಣ ದಾಖಲಿಸಿದ್ದು, ಸಂಜೆ ಆರೋಪಿಯನ್ನು ಸಹಾಯಕ ಠಾಣಾಧಿಕಾರಿ ಹೆಚ್.ಎಂ. ಗೋವಿಂದ್, ಸಿಬ್ಬಂದಿಗಳಾದ ವಿನಯ್, ಬೋಪಣ್ಣ, ಶಫೀರ್ ಅವರುಗಳು ಮನೆಯ ಬಳಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತಾರೆ.