ಚೆಟ್ಟಳ್ಳಿ, ನ. 15: ಚೆಟ್ಟಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನರೇಂದ್ರ ಮೋದಿ ಸಹಕಾರ ಸಂಘದಲ್ಲಿ ನಿನ್ನೆ 66ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಅಖಿಲ ಭಾರತ ಸಹಕಾರ ಸಪ್ತಾಹದ ಉದ್ಘಾಟನಾ ಕಾರ್ಯಕ್ರಮ ಹಾಗೂ ಗ್ರಾಮೀಣ ಸಹಕಾರ ಸಂಸ್ಥೆಗಳ ಮೂಲಕ ಅನ್ವೇಷಣೆ ಎಂಬ ವಿಷಯದಡಿ, ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್, ಜಿಲ್ಲಾ ಕೇಂದ್ರ ಬ್ಯಾಂಕ್ ಹಾಗೂ ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಸಂಯುಕ್ತ ಆಶ್ರಯದಲ್ಲಿ ಈ ಬಾರಿಯ ಸಪ್ತಾಹಕ್ಕೆ ಚಾಲನೆ ನೀಡಲಾಯಿತು.

ವರ್ಷಂಪ್ರತಿ ಎಲ್ಲಡೆ ಹಲವು ಜಯಂತಿಗಳನ್ನು ಆಚರಿಸುತಿದ್ದು, ಅದೇ ರೀತಿ 113 ವರ್ಷಗಳ ಇತಿಹಾಸ ಹೊಂದಿರುವ ಸಹಕಾರ ಕ್ಷೇತ್ರವು ಕಳೆದ 65ವರ್ಷಗಳಿಂದ ಅಖಿಲಭಾರತ ಸಹಕಾರ ಸಪ್ತಾಹವನ್ನು ಆಚರಿಸುತ್ತಾ ವರ್ಷಕ್ಕೊಂದು ಧ್ಯೇಯವಾಕ್ಯಗಳೊಂದಿಗೆ ಸಹಕಾರದ ಸಾಧಕ ಭಾದಕಗಳ ಬಗ್ಗೆ ಹಾಗೂ ಮುಂದಿನ ಕ್ರೀಯಾ ಯೋಜನೆಗಳ ಚರ್ಚಿಸಲಾಗುತ್ತದೆ. ಸಹಕಾರ ಬ್ಯಾಂಕುಗಳು ಖಾಸಗಿ ರಾಷ್ಟ್ರೀಕೃತ ಬ್ಯಾಂಕುಗಳ ಪೈಪೋಟಿಯ ನಡುವೆ ರೈತರನ್ನು ಸದಸ್ಯರಾಗಿಸಿ ಕಡಿಮೆ ಬಡ್ಡಿದರದಲ್ಲಿ ಕೃಷಿ ಅಭಿವೃದ್ಧಿಗೆ ಸಾಲ, ಹೆಚ್ಚಿನ ಬಡ್ಡಿದರದ ಠೇವಣಿಯನ್ನು ನೀಡುತ್ತಿದೆ. ಜೊತೆಗೆ ರೈತರಿಗೆ ಸುಲಭ ರೀತಿಯಲ್ಲಿ ಹಣ ನೀಡುವ ಗಣಕೀಕರಣ ಯೋಜನೆಯನ್ನು ಜಾರಿಗೊಳಿಸಿದೆ. ಆದರೆ ತೆರಿಗೆ ವಿನಾಯಿತಿ ಇದ್ದ ಸಹಕಾರ ಸಂಘಗಳಿಗೆ ತೆರಿಗೆಯನ್ನು ಹೇರುವ ಮೂಲಕ ಸಹಕಾರ ಸಂಘದ ಅಭಿವೃದ್ಧಿಗೆ ತೊಡಕಾಗಿದೆ. ಮುಂದಿನ ದಿನಗಳಲ್ಲಿ ತೆರಿಗೆಯ ಹೊರೆಯಿಂದ ಸಹಕಾರ ಸಂಘಕ್ಕೆ ಕುಂಠಿತವಾಗಲಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕಿನ ನಿರ್ದೇಶಕರು, ಕೊಡಗು ಜಿಲ್ಲಾ ಸಹಕಾರ ಬ್ಯಾಂಕಿನ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಚೆಟ್ಟಳ್ಳಿಯ ನರೇಂದ್ರಮೋದಿ ಸಹಕಾರ ಭವನದಲ್ಲಿ ನಡೆದ 66ನೇ ಅಖಿಲ ಭಾರತ ಸಹಕಾರ ಸಪ್ತಾಹದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಹಕಾರ ಕ್ಷೇತ್ರದಲ್ಲಿ ವೈದ್ಯನಾಥ್ ವರದಿಯನ್ನು ಜಾರಿಗೊಳಿಸಿದರೂ ಸಂಪೂರ್ಣ ಫಲಕಾರಿಯಾಗಲಿಲ್ಲ. ಕರ್ನಾಟಕದಲ್ಲಿ ಕೊಡಗು ಜಿಲ್ಲಾ ಬ್ಯಾಂಕು ಮುಂಚೂಣಿಯಲ್ಲಿರುವದು ಹೆಮ್ಮೆಯ ವಿಷಯ ಅದೇ ರೀತಿ ಜಿಲ್ಲಾ ಸಹಕಾರ ಬ್ಯಾಂಕು ಹಾಗೂ ಚೆಟ್ಟಳ್ಳಿ ಸಹಕಾರ ಸಂಘಕ್ಕೂ ಈವರೆಗೆ ಸರಕಾರದ ಯಾವದೇ ಠೇವಣಿ ಹೊಂದಿಲ್ಲವೆಂದರು.

ಹಿರಿಯ ಸಹಕಾರಿಗಳಾದ ಪುತ್ತರಿರ ಎಂ.ಸೋಮಯ್ಯ ಸಹಕಾರ ಧ್ವಜಾರೋಹಣವನ್ನು ಮಾಡಿ ಚಾಲನೆ ನೀಡಿದರು. ಚೆಟ್ಟಳ್ಳಿ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿಉತ್ತಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ ದಿವಂಗತ ಕೊಂಗೇಟಿರ ಮಾಚಯ್ಯ ಹಾಗೂ ದಿವಂಗತ ಪುತ್ತರಿರ ಬಿ.ಬಿದ್ದಪ್ಪನವರಿಂದಾಗಿ ಚೆಟ್ಟಳ್ಳಿ ಸಹಕಾರ ಸಂಘ ಸ್ಥಾಪನೆಯಾಯಿತು. ಅಂದಿನಿಂದ ಇಂದಿನವರೆಗೆ ಈ ಸಹಕಾರ ಸಂಘವು ಅಭಿವೃದ್ಧಿಯತ್ತ ಸಾಗಿದೆ. ಪ್ರಸ್ತುತ ಆಡಳಿತ ಮಂಡಳಿ ಅಧಿಕಾರ ಪಡೆದಲ್ಲಿಂದ ನಷ್ಟದಲ್ಲಿದ್ದ ಸಂಘವನ್ನು ಲಾಭದೆಡೆಗೆ ಕೊಂಡೊಯ್ದಿದೆ. ಹಲವು ಉತ್ತಮ ಕೆಲಸವನ್ನು ಮಾಡಿದರೂ ಅನಾಮಧೇಯ ಪತ್ರಗಳು, ನಮ್ಮ ಮೇಲೆ ಒಂದೆರಡು ಬೆರಳೆಣಿಕೆಯಷ್ಟು ಜನ ಇಲ್ಲದ ಆರೋಪಗಳನ್ನು ಮಾಡುತಿದ್ದಾರೆ ಎಂದು ವಿಷಾದಿಸಿದರು.

ರೈತರಿಗೆ ಸಾಲಮನ್ನಾ ಇನ್ನು ಬರಲು ಬಾಕಿ ಇದ್ದು, ಇಲಾಖೆ ಹಾಗೂ ಅಧಿಕಾರಿ ಸಾಲಮನ್ನಾ ಶೀಘ್ರದಲ್ಲಿ ವಿತರಿಸಲು ಒತ್ತಾಯಿಸಿದರು. ಈಗಾಗಲೆ ಸಾಲಮನ್ನಾ ಹಲವರಿಗೆ ತಲಪಿದೆ ಇನ್ನು ಬರಲು ಬಾಕಿ ಇದ್ದು ಪಹಣಿ, ಆಧಾರ್, ರೇಶನ್ ಕಾರ್ಡ್‍ನಲ್ಲಿ ಹೆಸರು ವ್ಯತ್ಯಾಸ ಇರುವದರಿಂದ ತಡವಾಗುತ್ತಿದೆ, ಒಂದೇ ಕುಟುಂಬದ ಒಬ್ಬರಿಗೆ ಸಾಲಮನ್ನಾ ಸವಲತ್ತು ದೊರೆಯುವದು, ಜೊತೆಗೆ ಕೊಡಗಿನಲ್ಲಿ ನಿವೃತ್ತಿ ವೇತನ ಪಡೆಯುವ ಯೋಧರಿಗೆ ಸಾಲಮನ್ನಾ ಬಂದಿರುವದಿಲ್ಲ ಎಂದರು. ವಿಶೇಷ ಯೋಜನೆಯಡಿ ಯೋಧ ಕೃಷಿಕರಿಗೆ ಸಾಲಮನ್ನಾ ನೀಡ ಬೇಕೆಂದು ಸಂಬಂಧಪಟ್ಟ ಇಲಾಖೆಗೆ ಹಾಗೂ ಸರಕಾರಕ್ಕೆ ಪತ್ರ ಬರೆದು ಒತ್ತಾಯಿಸಲಾಗಿದೆ ಎಂದು ಕೊಡಗು ಜಿಲ್ಲಾ ಸಹಕಾರ ಬ್ಯಾಂಕಿನ ಅಧ್ಯಕ್ಷ ಕೊಡಂದೇರ ಬಾಂಡ್‍ಗಣಪತಿ ಪ್ರತಿಕ್ರಿಯಿಸಿದರು.

ಸನ್ಮಾನ: ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಚೆಟ್ಟಳ್ಳಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದಲ್ಲಿ ಸದಸ್ಯರಾಗಿ ಭಾರತೀಯ ಸೇನೆ, ವಾಯು ಪಡೆ, ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಸದಸ್ಯರಿಗೆ ಪತ್ರಕರ್ತರಿಗೆ, ಕ್ರೀಡೆ, ಕೃಷಿಕ್ಷೇತ್ರ, ಚಲನಚಿತ್ರರಂಗ, ಸಮಾಜ ಸೇವೆ ಹಾಗೂ ಸ್ಥಳೀಯ ಸಂಘ ಸಂಸ್ಥೆಯಲ್ಲಿ ಅಧಿಕಾರ ಹೊಂದಿದವರಿಗೆ ಕೊಡಗು ಜಿಲ್ಲಾ ಸಹಕಾರ ಸಂಘದ ಉಪಾಧ್ಯಕ್ಷರಾದ ಪಿ.ಸಿ.ಅಚ್ಚಯ್ಯ ಹಾಗೂ ನಿರ್ದೇಶಕರು ಸನ್ಮಾನಿಸಿದರು.

ಬಲ್ಲಾರಂಡ ಮಣಿಉತ್ತಪ್ಪ ನವರು ಸನ್ಮಾನಿತರನ್ನು ಪರಿಚಯಿಸಿ ದೇಶಸೇವೆಯನ್ನು ಸಲ್ಲಿಸಿ ನಿವೃತ್ತರಾಗಿ ಸಂಘದ ಸದಸ್ಯರಿಗೆ ಗೌರವಿಸಿರುವದು ಇದೇ ಮೊದಲ ಬಾರಿಗೆ ಎಂದರು.

ಕೊಡಗು ಜಿಲ್ಲಾ ಸಹಕಾರ ಬ್ಯಾಂಕಿನ ಅಧ್ಯಕ್ಷರಾದ ಕೊಡಂದೇರ ಬಾಂಡ್ ಗಣಪತಿ ಯವರನ್ನು ಹಾಗೂ ಚೆಟ್ಟಳ್ಳಿ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿಉತ್ತಪ್ಪ ಅವರನ್ನು ಇದೇ ವೇದಿಕೆಯಲ್ಲಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಕೊಡಗು ಜಿಲ್ಲಾ ಸಹಕಾರ ಬ್ಯಾಂಕಿನ ನಿರ್ದೇಶಕರಾದ ಕನ್ನಂಡ ಸಂಪತ್ ಉಷಾತೇಜಶ್ವಿ, ಜಿಲ್ಲಾ ಯೂನಿಯನ್‍ನ ನಿರ್ದೆಶಕರಾದ ಎಸ್.ಪಿ. ನಿಂಗಪ್ಪ, ಚೆಟ್ಟಳ್ಳಿ ಸಹಕಾರ ಸಂಘದ ಉಪಾಧ್ಯಕ್ಷ ಎಂ.ಎಸ್.ಉಲ್ಲಾಸ್, ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ರವಿಕುಮಾರ್ ಹೆಚ್.ಡಿ. ಚೆಟ್ಟಳ್ಳಿ ಸಹಕಾರ ಸಂಘದ ನಿರ್ದೇಶಕರಾದ ಪುತ್ತರಿರ ಎಂ.ಸೀತಮ್ಮ, ಕಣಜಾಲು ಪೂವಯ್ಯ, ಧನಂಜಯ, ಟಿ.ಎಸ್.ಬಿ.ಎಂ ಕಾಶಿ, ಶಾಂತಪ್ಪ, ಪೇರಿಯನ ಎಸ್.ಪೂಣಚ್ಚ, ಎನ್.ಡಿ. ನಾಣಯ್ಯ ವೇದಿಕೆಯಲ್ಲಿ ಹಾಜರಿದ್ದರು. ಸಂಘದ ನಿರ್ದೇಶಕ ಕಣಜಾಲು ಪೂವಯ್ಯ ಯೋಧರ ಬಗೆಗಿನ ಕವನ ವಾಚಿಸಿದರು.

ಚೆಟ್ಟಳ್ಳಿ ಸಹಕಾರ ಸಂಘದ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ನಂದಿನಿ, ಕೆ.ಎಸ್ ಪ್ರಾರ್ಥಿಸಿ, ಚೆಟ್ಟಳ್ಳಿ ಸಹಕಾರ ಸಂಘದ ನಿರ್ದೇಶಕಿ ಕೊಂಗೇಟಿರ ವಾಣಿಕಾಳಪ್ಪ ಸ್ವಾಗತಿಸಿ,ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಶ್ ನಾಯಕ್ ನಿರೂಪಿಸಿ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

-ಕರುಣ್ ಕಾಳಯ್ಯ/ ಪಪ್ಪುತಿಮ್ಮಯ್ಯ