ಸಿದ್ದಾಪುರ, ನ. 15: ನೆಲ್ಯಹುದಿಕೇರಿ ಗ್ರಾಮದ ಸಂತ್ರಸ್ತ ಮಹಿಳೆಯರು ಸ್ವ ಉದ್ಯೋಗ ಮಾಡುವ ನಿಟ್ಟಿನಲ್ಲಿ ಕೌಶಲ್ಯ ತರಬೇತಿ ಪಡೆದ ಮಹಿಳೆಯರು ತಯಾರಿಸಿದ ವಸ್ತುಗಳ ಮಾರಾಟವನ್ನು ಮಾಡುವ ಕಾರ್ಯಕ್ರಮಕ್ಕೆ ಶುಕ್ರವಾರದಂದು ಚಾಲನೆ ನೀಡಲಾಯಿತು.

ಕಳೆದ ಆಗಸ್ಟ್ ತಿಂಗಳಿನಲ್ಲಿ ಪ್ರವಾಹಕ್ಕೆ ಸಿಲುಕಿ ನೆಲ್ಯಹುದಿಕೇರಿ ಭಾಗದ ಬೆಟ್ಟದಕಾಡು ಹಾಗೂ ಕುಂಬಾರಗುಂಡಿ ಭಾಗದ ನದಿ ತೀರದ ನೂರಾರು ಮನೆಗಳು ಹಾನಿಯಾಗಿದ್ದವು. ಈ ಹಿನ್ನೆಲೆಯಲ್ಲಿ ಮಹಿಳೆಯರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರು. ಇದನ್ನು ಅರಿತ ಮೈಸೂರಿನ ಓ.ಡಿ.ಪಿ ಸಂಸ್ಥೆ ಹಾಗೂ ಕೂಡಿಗೆಯ ಕಾಪ್ಸ್‍ಸೆಟ್ ವತಿಯಿಂದ ಸಂತ್ರಸ್ತ ಮಹಿಳೆಯರಿಗೆ ಸ್ವಯಂ ಉದ್ಯೋಗದ ಕೌಶಲ್ಯ ತರಬೇತಿಯನ್ನು ನೆಲ್ಯಹುದಿಕೇರಿಯ ಗ್ರಾ. ಪಂ. ಸಭಾಂಗಣದಲ್ಲಿ ನೀಡಲಾಗಿತ್ತು. ತರಬೇತಿಯಲ್ಲಿ ಪೇಪರ್ ಬ್ಯಾಗ್ ತಯಾರಿಕೆ ಹಾಗೂ ಬಟ್ಟೆ ಬ್ಯಾಗ್ , ಮಸಾಲೆ ಪದಾರ್ಥಗಳು ಸೇರಿದಂತೆ ಇತರ ಕೌಶಲ್ಯ ತರಬೇತಿಯನ್ನು ನೀಡಲಾಗಿತ್ತು. ಇದೀಗ ತರಬೇತಿ ಪಡೆದ ಮಹಿಳೆಯರು ತಯಾರಿಸಿದ ವಸ್ತುಗಳ ಮಾರಾಟದ ಘಟಕವನ್ನು ಪ್ರಾರಂಭಿಸಲಾಗಿದೆ.

ಕಾರ್ಯಕ್ರಮದಲ್ಲಿ ನೆಲ್ಯಹುದಿಕೇರಿಯ ಬೆಟ್ಟದಕಾಡಿನ ನಾಡಹಬ್ಬ ಕಟ್ಟಡದಲ್ಲಿ ಮೈಸೂರು ಓ.ಡಿ.ಪಿ ಸಂಸ್ಥೆಯ ನಿರ್ದೇಶಕರಾದ ಫಾದರ್ ಅಲೆಕ್ಸ್ ಪ್ರಶಾಂತ್ ಸಿಕ್ವೇರಾ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಮಾತನಾಡಿದ ಅವರು ಸಂತ್ರಸ್ತ ಮಹಿಳೆಯರು ತಮ್ಮ ನೋವುಗಳನ್ನು ಮರೆತು ಕೌಶಲ್ಯ ತರಬೇತಿ ಪಡೆದು ವಸ್ತುಗಳನ್ನು ತಯಾರಿಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಹಿಳೆಯರು ಸ್ವಯಂ ಉದ್ಯೋಗದ ಮೂಲಕ ಸ್ವಾವಲಂಬಿ ಬದುಕನ್ನು ಕಂಡು ಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.

ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಓ.ಡಿ.ಪಿ ಸಂಚಾಲಕಿ ಜಾಯ್ಸ್ ಮೆನಜಸ್ ಮಾತನಾಡಿ ಪ್ರವಾಹ ಸಂದರ್ಭದಲ್ಲಿ ತಮ್ಮ ಮನೆಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿದ್ದ ಮಹಿಳೆಯರಿಗೆ ಸ್ವಯಂ ಉದ್ಯೋಗವನ್ನು ಕಲ್ಪಿಸುವ ನಿಟ್ಟಿನಲ್ಲಿ ಓ.ಡಿ.ಪಿ ಸಂಸ್ಥೆ ಹಾಗೂ ಕಾಪ್ಸ್‍ಸೆಟ್ ಸಂಸ್ಥೆ ಸಂತ್ರಸ್ತ ಮಹಿಳೆಯರಿಗೆ ನುರಿತ ಶಿಕ್ಷಕರಿಂದ ಕೌಶಲ್ಯ ತರಬೇತಿಯನ್ನು ನೀಡಲಾಗಿದ್ದು ಮಹಿಳೆಯರು ತಾವು ಕಲಿತಿರುವ ತರಬೇತಿಯಿಂದ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಕೆನಡಾ ದೇಶದ ಲೆಸ್ಲಿ ಪ್ಲೊಲೆಂಡು, ಮಾರ್ಗರೇಟ್, ಜರ್ಮನ್ ದೇಶದ ಕ್ರಿಸ್ಟೀನಾ, ಗ್ರಾ. ಪಂ. ಉಪಾಧ್ಯಕ್ಷೆ ಸೆಫಿಯಾ, ಓ.ಡಿ.ಪಿ ಸಂಸ್ಥೆಯ ಪದಾಧಿ ಕಾರಿಗಳಾದ ಮೋಲಿ ಪೊಡ್ತದೊ, ಜಾಯ್ಸ್ ಮೆನಜಸ್, ವಿಜಯ ನಾರಾಯಣ, ಇತರರು ಹಾಜರಿದ್ದರು.