ಕುಶಾಲನಗರ, ನ. 15: ಕುಶಾಲನಗರ ರೋಟರಿ ಸಂಸ್ಥೆ, ಇನ್ನರ್ ವೀಲ್ ಕ್ಲಬ್ ಆಶ್ರಯದಲ್ಲಿ ಚೆನ್ನೈನ ಫ್ರೀಡಂ ಫ್ರಂಟ್ ಟ್ರಸ್ಟ್ ಸಹಯೋಗದೊಂದಿಗೆ ಕೃತಕ ಕಾಲು ಜೋಡಣಾ ಉಚಿತ ಶಿಬಿರಕ್ಕೆ ಚಾಲನೆ ನೀಡಲಾಯಿತು.

ರೋಟರಿ ಅಧ್ಯಕ್ಷ ಎಂ.ಡಿ.ಅಶೋಕ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ದಲ್ಲಿ ವಿವಿಧೆಡೆಗಳಿಂದ ಆಗಮಿಸಿದ್ದ 44 ಮಂದಿ ಫಲಾನುಭವಿಗಳನ್ನು ತಪಾಸಣೆಗೆ ಒಳಪಡಿಸಿ ಕಾಲಿನ ಅಳತೆ ತೆಗೆಯಲಾಯಿತು. ಈ ಸಂದರ್ಭ ಮಾತನಾಡಿದ ರೋಟರಿ ಕಮ್ಯುನಿಟಿ ಸರ್ವೀಸ್ ನಿರ್ದೇಶಕ ಎಂ.ಡಿ.ರಂಗಸ್ವಾಮಿ, ಕಳೆದ 7 ವರ್ಷಗಳಿಂದ ನಿರಂತರವಾಗಿ ಕೃತಕ ಕಾಲು ಜೋಡಣಾ ಶಿಬಿರ ಹಮ್ಮಿ ಕೊಂಡು ಬರಲಾಗುತ್ತಿದೆ. ರೋಟರಿ ಮೂಲಕ ಈಗಾಗಲೆ ನೂರಾರು ಮಂದಿಗೆ ಕೃತಕ ಕಾಲುಗಳನ್ನು ಜೋಡಣೆ ಮಾಡಲಾಗಿದೆ ಎಂದರು. ಪ್ರತಿಯೊಬ್ಬರಿಗೂ ಕೃತಕ ಕಾಲು ಒದಗಿಸುವ ಗುರಿ ಹೊಂದಲಾಗಿದೆ ಎಂದರು. ಕಾರ್ಯಕ್ರಮ ನಿರ್ದೇಶಕ ಪ್ರೇಮಚಂದ್ರನ್ ಮಾತನಾಡಿ, ಕೃತಕ ಕಾಲು ಜೋಡಣಾ ಶಿಬಿರದ ಬಗ್ಗೆ ಮಾಹಿತಿ ಒದಗಿಸಿದರು.

ರೋಟರಿ ಸಹಾಯಕ ಗವರ್ನರ್ ನಾಗೇಶ್, ಕುಶಾಲನಗರ ರೋಟರಿ ಕಾರ್ಯದರ್ಶಿ ಸಂಜು ಬೆಳ್ಳಿಯಪ್ಪ, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಕವಿತಾ ಸಾತಪ್ಪನ್, ಫ್ರೀಡಂ ಫ್ರಂಟ್ ಟ್ರಸ್ಟ್ ಪ್ರಮುಖರಾದ ಡಾ. ಶ್ರೀಪ್ರಕಾಶ್, ತಂತ್ರಜ್ಞರಾದ ಜಯವೇಲು, ಬಾಲಾಜಿ, ರಾಯ್ ಮೋನ್ ಸೇರಿದಂತೆ ರೋಟರಿ ಪದಾಧಿಕಾರಿಗಳು ಇದ್ದರು.