ಸೋಮವಾರಪೇಟೆ,ನ.15: ತಾಲೂಕಿನ ಕೊಡ್ಲಿಪೇಟೆ ಸಮೀಪದ ಕಟ್ಟೆಪುರ ವ್ಯಾಪ್ತಿಯಲ್ಲಿ ಸುಮಾರು 15ಕ್ಕೂ ಅಧಿಕ ಕಾಡಾನೆಗಳು ಸಂಚರಿಸುತ್ತಿದ್ದು, ಸಾರ್ವಜನಿಕರು ಭಯಭೀತರಾಗಿದ್ದಾರೆ.
ಅಗಳಿ ಅರಣ್ಯ ಪ್ರದೇಶದಿಂದ ಜನವಸತಿ ಪ್ರದೇಶಕ್ಕೆ ಲಗ್ಗೆಯಿಡುತ್ತಿರುವ ಕಾಡಾನೆಗಳು ಜನನಿಬಿಡ ಪ್ರದೇಶದಲ್ಲಿಯೇ ಓಡಾಡುತ್ತಿವೆ. ಇದರೊದಿಗೆ ಕಾಫಿ ತೋಟ, ಗದ್ದೆಗಳಿಗೆ ಲಗ್ಗೆಯಿಡುತ್ತಿದ್ದು, ಸ್ಥಳೀಯರು ಭಯಾತಂಕದಿಂದ ದಿನದೂಡು ವಂತಾಗಿದೆ. ಕಟ್ಟೆಪುರ, ಕೋಣಗಾನಹಳ್ಳಿ, ನಿಲುವಾಗಿಲು ಭಾಗದಲ್ಲಿ ಸುಮಾರು 15ಕ್ಕೂ ಅಧಿಕ ಕಾಡಾನೆಗಳು ಸಂಚರಿಸುತ್ತಿದ್ದು, ಸಾರ್ವಜನಿಕರು ರಸ್ತೆಯಲ್ಲಿ ತೆರಳಲು, ತೋಟ, ಗದ್ದೆಯಲ್ಲಿ ಕೆಲಸ ನಿರ್ವಹಿಸಲು ಹಿಂದೇಟು ಹಾಕುವಂತಾಗಿದೆ.
ಹೇಮಾವತಿ ಹಿನ್ನೀರು ಪ್ರದೇಶದಲ್ಲಿ ನೀರಿನ ಸಂಗ್ರಹ ಅಧಿಕವಿರುವ ಹಿನ್ನೆಲೆ ಕಾಡಾನೆಗಳು ಆಚೆ ಬದಿ ತೆರಳಲಾಗದೇ ತೋಟ ಸೇರಿದಂತೆ ಜನವಸತಿ ವ್ಯಾಪ್ತಿಯಲ್ಲಿಯೇ ಸಂಚರಿಸುತ್ತಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.