ನಾಪೋಕ್ಲು, ನ. 15: ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಮತ್ತು ಸಿಬ್ಬಂದಿಗಳ ಕೊರತೆ ಬಗ್ಗೆ ಈಗಾಗಲೇ ಸರಕಾರದ ಗಮನ ಸೆಳೆಯಲಾಗಿದ್ದು, ಶೀಘ್ರದಲ್ಲೇ ಸಮಸ್ಯೆ ಬಗೆಹರಿಯಲಿದೆ ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ತಿಳಿಸಿದ್ದಾರೆ.

ನಾಪೋಕ್ಲುವಿನ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ದಂತ ವೈದ್ಯ ಡಾ. ಕುಶಾಲ್ ನೂತನವಾಗಿ ಕರ್ತವ್ಯಕ್ಕೆ ಹಾಜರಾಗಿದ್ದರೆ. ಆಸ್ಪತ್ರೆಗೆ ಮಂಜೂ ರಾಗಿದ್ದ ನೂತನ 108 ಆಂಬುಲೆನ್ಸ್‍ನಲ್ಲಿ ತಾಂತ್ರಿಕ ತೊಂದರೆ ಕಂಡು ಬಂದ ಹಿನ್ನೆಲೆ ಅದನ್ನು ಹಿಂತಿರುಗಿಸಿ ಹಳೆಯ ಆಂಬುಲೆನ್ಸ್ ವಾಹನವನ್ನು ಬಳಸಿಕೊಳ್ಳಲಾಗಿತ್ತು. ಇದೀಗ ತಾಂತ್ರಿಕ ತೊಂದರೆ ಸರಿಪಡಿಸಿರುವ ಹಿನ್ನೆಲೆ ಮತ್ತದೇ ಅಂಬುಲೆನ್ಸ್ ಅನ್ನು ಆಸ್ಪತ್ರೆಗೆ ತರಿಸಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.

ನಾಪೋಕ್ಲು ಸಮುದಾಯ ಕೇಂದ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಚಿಕಿತ್ಸೆಗಾಗಿ ಆಗಮಿಸು ತ್ತಿರುವ ಹಿನ್ನೆಲೆ ಔಷಧಿಗಳ ಕೊರತೆ ಇದ್ದು, ಸರಕಾರದಿಂದ ಸರಬರಾಜು ಆಗುತ್ತಿರುವ ಔಷಧಿಗಳ ಪ್ರಮಾಣ ಕಡಿಮೆ ಇರುವದರಿಂದ ರೋಗಿಗಳ ಸಂಖ್ಯೆಯನ್ನು ಆಧರಿಸಿ ಹತ್ತು ಲಕ್ಷ ರೂಪಾಯಿಗಳ ಔಷಧಿಗಳನ್ನು ಒದಗಿಸುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರಲ್ಲದೇ, ನಾಪೋಕ್ಲು ಪಟ್ಟಣದಲ್ಲಿ ಜನೌಷಧಿ ಕೇಂದ್ರ ವೊಂದನ್ನು ತೆರೆಯಲು ಪ್ರಯತ್ನಿಸ ಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ ಮಾತನಾಡಿ, ದಿನದ ಇಪ್ಪತ್ನಾಲ್ಕು ಗಂಟೆಯೂ ಸಾರ್ವಜನಿಕರಿಗೆ ಆಂಬುಲೆನ್ಸ್ 108 ಸೇವೆ ಲಭ್ಯವಿದೆ ಎಂದು ಹೇಳಿದ ರಲ್ಲದೇ, ಆಸ್ಪತ್ರೆಯಲ್ಲಿ ಔಷಧಿಗಳ ಕೊರತೆ ಇರುವದರಿಂದ ರೋಗಿಗಳು ಹೊರಗಿನಿಂದ ಔಷಧಿಯನ್ನು ಖರೀದಿಸುವಂತೆ ವೈದ್ಯರು ಶಿಫಾರಸ್ಸು ಮಾಡುತ್ತಿದ್ದಾರೆ ಎಂದು ತಿಳಿಸಿದರು.

ವೈದ್ಯರಾದ ಸಿ.ಕೆ. ಪೂವಯ್ಯ ಮಾತನಾಡಿ, ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಇರುವ ಬಗ್ಗೆ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದು, ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ವೈದ್ಯರ ನೇಮಕ ಕುರಿತಂತೆ ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗುವದೆಂದು ಮಾಹಿತಿ ನೀಡಿದರು. ಆಸ್ಪತ್ರೆ ಆವರಣದಲ್ಲಿ ತುರ್ತು ವಾಹನಗಳ ನಿಲುಗಡೆಗೆ ಶೆಡ್ ನಿರ್ಮಾಣ, ಕುರ್ಚಿಗಳನ್ನು ಖರೀದಿಸಲು, ವ್ಯಾಕ್ಯೂಮ್ ಕ್ಲೀನರ್ ಖರೀದಿಸಲು, ದಂತ ವಿಭಾಗಗಳ ರಾಸಾಯನಿಕಗಳ ಖರೀದಿ, ತ್ಯಾಜ್ಯ ವಸ್ತುಗಳ ನಿರ್ವಹಣೆಗೆ ವಿಭಜಕಗಳನ್ನು ಅಳವಡಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಿ ಅನುಮತಿ ಪಡೆಯ ಲಾಯಿತು. ಸಭೆಯಲ್ಲಿ ತಾಲೂಕು ಪಂಚಾಯಿತಿ ಸದಸ್ಯೆ ಉಮಾಪ್ರಭು, ವೈದ್ಯ ಡಾ. ಮದನ್ ಮೋಹನ್, ನೂತನವಾಗಿ ಕರ್ತವ್ಯಕ್ಕೆ ಹಾಜರಾದ ದಂತ ವೈದ್ಯ ಡಾ. ಕುಶಾಲ್, ಸಮಿತಿಯ ಸದಸ್ಯರಾದ ಯಂ.ಎ. ಮನ್ಸೂರ್ ಆಲಿ, ಡಾ. ಕೋಟೇರ ಪಂಚಮ್ ತಿಮ್ಮಯ್ಯ, ಕಿರಿಯ ಮಹಿಳಾ ಆರೋಗ್ಯ ಸಹಾಯಕರು ಆಶಾ ಕಾರ್ಯಕರ್ತರು ಸಿಬ್ಬಂದಿಗಳು ಉಪಸ್ಥಿತರಿದ್ದರು.