ಮಡಿಕೇರಿ, ನ. 15: ಇಲ್ಲಿನ ಮಹದೇವಪೇಟೆಯ ಕ್ರೆಸೆಂಟ್ ಶಾಲೆಯಲ್ಲಿ ಅನ್ವೇಷಣಾ ಹೆಸರಿನ ವಿಜ್ಞಾನ ಮೇಳ ತಾ. 13 ರಂದು ಜರುಗಿತು. ಮೇಳದಲ್ಲಿ ವಿಜ್ಞಾನದ ಹಲವಾರು ಮಾದರಿಗಳು, ಪ್ರಾಯೋಗಿಕ ಮಾದರಿಗಳು ಹಾಗೂ ಕಲಾಕೃತಿಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.
ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಬಾಟಲ್ಗಳಿಂದ ಕಲಾಕೃತಿಗಳನ್ನು ರಚಿಸಿದ್ದು, ಆಕರ್ಷಣೀಯವಾಗಿತ್ತು. ಪುಟಾಣಿ ಮಕ್ಕಳು ಪರಿಸರ ಮಾಲಿನ್ಯದ ಸ್ತಬ್ಧ ಮಾದರಿಗಳನ್ನು ಪ್ರದರ್ಶಿಸಿ ವೀಕ್ಷಕರಿಗೆ ಅರಿವು ನೀಡಿದರು. ಕಾಡು ಪ್ರಾಣಿಗಳು, ಗಿಡ-ಮರಗಳು ಹಾಗೂ ಕೃಷಿಯ ಮಹತ್ವವನ್ನು ವಿವಿಧ ಮಾದರಿಗಳ ಮೂಲಕ ಪ್ರದರ್ಶಿಸಿದರು. ವೆಂಡಿಂಗ್ ಮೆಷಿನ್, ಸ್ಮಾರ್ಟ್ ಸಿಟಿ, ಸೋಲಾರ್ ಶಕ್ತಿ ಬಳಕೆಯ ಮಾದರಿಗಳು, ಹೈಡ್ರಾಲಿಕ್ ಸೇತುವೆ, ಕ್ರೇನ್ಗಳು, ಪ್ರೊಜೆಕ್ಟರ್ ಹಾಗೂ ವಿಭಿನ್ನವಾದ ಒಂದು ದಸರಾ ಮಂಟಪದ ಮಾದರಿಯೂ ವೀಕ್ಷಕರ ಮನ ಸೆಳೆದವು.
ಇತ್ತೀಚೆಗಷ್ಟೆ ಚಂದ್ರಯಾನ-2 ಮಿಷನ್ ಕೈಗೊಂಡ ಐ.ಎಸ್.ಆರ್.ಒ. ಸಂಸ್ಥೆಯಿಂದ ಪ್ರೇರಿತಗೊಂಡ ವಿದ್ಯಾರ್ಥಿಗಳು ರಾಕೆಟ್ ಮಾದರಿ ಯನ್ನು ಈ ಸಂದರ್ಭ ಪ್ರದರ್ಶಿಸಿ ದರು. ಮಳೆಯ ನೀರನ್ನು ಹೀರಿಕೊಂಡು ಕೃಷಿ ಹಾಗೂ ಇತರ ಕಾರ್ಯಗಳಿಗೆ ಬಳಸಬಹುದಾ ದಂತಹ ರಸ್ತೆಯ ಮಾದರಿಯು ಉತ್ತಮ ತಿಳುವಳಿಕೆಯನ್ನು ನೀಡುವಂತದ್ದಾಗಿತ್ತು.
ಜನರಲ್ ತಿಮ್ಮಯ್ಯ, ಕ್ರೆಸೆಂಟ್, ಸೈನಿಕ್ ಶಾಲೆ ಹಾಗೂ ಇನ್ನಿತರ ಶಾಲೆಯ ವಿದ್ಯಾರ್ಥಿಗಳು ವಿಜ್ಞಾನ ಮೇಳದಲ್ಲಿ ಪಾಲ್ಗೊಂಡಿದ್ದರು. ವೇದಿಕೆಯಲ್ಲಿ ಶಾಲೆಯ ಪ್ರಾಂಶುಪಾಲೆ ಜಾಯ್ಸ್ ವಿನಯ, ವಿಜ್ಞಾನ ವಿಭಾಗದ ಪ್ರಮುಖರಾದ ಮುಬೀನ ಹಾಗೂ ಮುಖ್ಯ ಅತಿಥಿಗಳಾಗಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಹನೀಫ್ ಹಾಜರಿದ್ದರು.
ಮೇಳದಲ್ಲಿ ಬಹುಮಾನ ಪಡೆಯುವದಕ್ಕಿಂತ ಭಾಗವಹಿಸುವದು ಮುಖ್ಯ ಎಂದು ಜಾಯ್ಸ್ ವಿನಯ್ ಸಲಹೆ ನೀಡಿದರು.