ಕುಶಾಲನಗರ, ನ. 13: ಕುಶಾಲನಗರದ ವಿದ್ಯಾರ್ಥಿ ವಿ.ಹೆಚ್. ಧನುಷ್ ಕರ್ನಾಟಕ ರಾಜ್ಯ ಅಮೆಚೂರು ಕಬಡ್ಡಿ ಸಂಸ್ಥೆ ವತಿಯಿಂದ 17ರ ವಯೋಮಿತಿ ಬಾಲಕರ ತಂಡಕ್ಕೆ ಆಯ್ಕೆಯಾಗಿದ್ದಾರೆ. ಕುಶಾಲನಗರ ಜ್ಞಾನಭಾರತಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ವಿ.ಹೆಚ್. ಧನುಷ್ ಅಸ್ಸಾಂ ರಾಜ್ಯದ ಗುಹಾವಟಿಯಲ್ಲಿ ನಡೆಯಲಿರುವ 3ನೇ ಖೇಲೋ ಇಂಡಿಯಾ ಯೂತ್ ಗೇಮ್ಸ್ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ.
2020 ಜನವರಿ 10 ರಿಂದ ನಡೆಯಲಿರುವ ಕ್ರೀಡಾಕೂಟದಲ್ಲಿ ಧನುಷ್ ಪಾಲ್ಗೊಳ್ಳಲಿದ್ದಾರೆ ಎಂದು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಹೆಚ್.ಎಸ್. ಉತ್ತಪ್ಪ ತಿಳಿಸಿದ್ದಾರೆ. ಧನುಷ್ ಮುಳ್ಳುಸೋಗೆ ಗ್ರಾಮದ ನಿವಾಸಿ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಿ.ಬಿ. ಹರೀಶ್ ಮತ್ತು ಶಶಿ ದಂಪತಿಯ ಪುತ್ರ.