ಮಡಿಕೇರಿ, ನ. 13: ಮಡಿಕೇರಿ ರೋಟರಿ ಕ್ಲಬ್ ವತಿಯಿಂದ ನಗರಸಭಾ ಶಾಲೆಯ ಇಬ್ಬರು ಶಿಕ್ಷಕಿಯರು ಹಾಗೂ ತಾಳತ್ತಮನೆ ಸರ್ಕಾರಿ ಶಾಲೆಯ ಇಬ್ಬರು ಶಿಕ್ಷಕಿಯರಿಗೆ ತಲಾ 2 ಸಾವಿರ ರೂ. ಗಳಂತೆ ಮಾಸಿಕ ಗೌರವ ವೇತನವಾಗಿ ಒಟ್ಟು 20 ಸಾವಿರ ರೂ. ಗಳನ್ನು ನೀಡಲಾಯಿತು.
ಮಡಿಕೇರಿಯಲ್ಲಿ ನಗರಸಭೆಯಿಂದ ನಿರ್ವಹಿಸಲ್ಪಡುತ್ತಿರುವ ಸರ್ಕಾರಿ ಶಾಲೆಯ ಇಬ್ಬರು ಶಿಕ್ಷಕಿಯರಿಗೆ ಆರ್ಥಿಕ ನೆರವನ್ನು ರೋಟರಿಯ ಹಿರಿಯ ಸದಸ್ಯ ಡಾ. ಎಂ.ಜಿ. ಪಾಟ್ಕರ್ ಪ್ರಾಯೋಜಿಸಿದ್ದರು. ರೋಟರಿಯಿಂದ ತಾಳತ್ತಮನೆಯ ಸರ್ಕಾರಿ ಶಾಲೆಯ ಶಿಕ್ಷಕಿಯರಿಗೂ ಮಾಸಿಕ ಗೌರವ ವೇತನ ನೀಡಲಾಯಿತು.
ಇದೇ ಸಂದರ್ಭ ಮಡಿಕೇರಿ ರೋಟರಿಯಿಂದ ನಗರಸಭಾ ಶಾಲೆಯ 7 ನೇ ತರಗತಿಯ 8 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವಾಗಿ ಆರ್ಥಿಕ ನೆರವು ನೀಡಲಾಯಿತು. ಶಾಲೆಯ 38 ವಿದ್ಯಾರ್ಥಿಗಳಿಗೆ ಮಗ್ಗಿ ಪುಸ್ತಕವನ್ನೂ ವಿತರಿಸಲಾಯಿತು. ಮಡಿಕೇರಿ ರೋಟರಿ ಅಧ್ಯಕ್ಷ ಕೆ.ಎಸ್. ರತನ್ ತಮ್ಮಯ್ಯ, ಕಾರ್ಯದರ್ಶಿ ಕೆ.ಎಸ್. ಕಾರ್ಯಪ್ಪ, ಡಾ. ಎಂ.ಜಿ. ಪಾಟ್ಕರ್, ಅನಂತ ಸುಬ್ಬರಾವ್, ಜಿ.ಆರ್. ಸದಾಶಿವರಾವ್, ಗೀತಾ ಗಿರೀಶ್ ಹಾಜರಿದ್ದರು.