*ಗೋಣಿಕೊಪ್ಪಲು, ನ. 12: ಒಂದು ಕೋಟಿ, ಮೂವತ್ತಮೂರು ಲಕ್ಷ ಅನುದಾನದಲ್ಲಿ ವೀರಾಜಪೇಟೆ ತಾಲೂಕಿನ 6 ಗ್ರಾ.ಪಂ. ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ.ಜಿ. ಬೋಪಯ್ಯ ಅವರು ಭೂಮಿ ಪೂಜೆ ನೆರವೇರಿಸಿದರು.

16 ಲಕ್ಷ ಅನುದಾನದಲ್ಲಿ ಆರ್ಜಿ ಗ್ರಾ.ಪಂ. ವ್ಯಾಪ್ತಿಯ ತೆರೆಮೆಕಾಡು ಪೈಸಾರಿ ಕಾಂಕ್ರಿಟ್ ರಸ್ತೆ, 20 ಲಕ್ಷದಲ್ಲಿ ನಿರ್ಮಾಣವಾಗುತ್ತಿರುವ ಬೇಟೋಳಿ ಗ್ರಾ.ಪಂ. ವ್ಯಾಪ್ತಿಯ ಹೆಗ್ಗಳ ಹರಿಜನ ಕಾಲೋನಿ ರಸ್ತೆ, 25 ಲಕ್ಷ ದ ಅರುವತ್ತೊಕ್ಲು ಗ್ರಾಮ ಪಂಚಾಯಿತಿಯ ಸೀತಾ ಗಿರಿಜನ ಕಾಲೋನಿಯ ರಸ್ತೆ, ದೇವಕುರುಬರ ಗಿರಿಜನ ಕಾಲೋನಿಗೆ 20 ಲಕ್ಷ ಅನುದಾನದ ರಸ್ತೆ, 20 ಲಕ್ಷದ ಕಾನೂರು ಗ್ರಾ.ಪಂ. ವ್ಯಾಪ್ತಿಯ ನಾಲ್ಕೇರಿ, ಬೊಮ್ಮಾಡು ಗಿರಿಜನ ಕಾಲೋನಿ ರಸ್ತೆ, 12 ಲಕ್ಷದ ಬೇಟೋಳಿ ಗ್ರಾ.ಪಂ. ವ್ಯಾಪ್ತಿಯ ಹೆಗ್ಗಳ ಹಿಲ್‍ಟಾಪ್ ಗಿರಿಜನ ಕಾಲೋನಿ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ ಮಾಡಿದರು.

ಜಿ.ಪಂ. ಸದಸ್ಯರುಗಳಾದ ಅಚ್ಚಪಂಡ ಮಹೇಶ್, ಅಪ್ಪಡೇರಂಡ ಭವ್ಯ, ತಾ.ಪಂ. ಸದಸ್ಯ ಬಿ.ಎಂ. ಗಣೇಶ್, ಆರ್ಜಿ ಗ್ರಾ.ಪಂ. ಉಪಾಧ್ಯಕ್ಷ ಗಿರಿ, ಸದಸ್ಯರುಗಳಾದ ಉದಯ, ಶ್ರೀಜಾ, ಗುತ್ತಿಗೆದಾರ ನಾಮೇರ ನವೀನ್, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧುದೇವಯ್ಯ ಸೇರಿದಂತೆ ಸ್ಥಳೀಯ ತೆರೆಮೆಕಾಡು ಪೈಸಾರಿಯ ನಿವಾಸಿಗಳು ಹಾಜರಿದ್ದರು.

ಪಾಲಿಬೆಟ್ಟ: ಕಳೆದ ಹಲವು ವರ್ಷಗಳಿಂದ ಅಭಿವೃದ್ಧಿ ಕಾಣದೆ ಸಂಪೂರ್ಣ ಹಾಳಾಗಿದ್ದ ಸಿದ್ದಾಪುರ ಪಾಲಿಬೆಟ್ಟ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಶಾಸಕ ಕೆ.ಜಿ ಬೋಪಯ್ಯ ಭೂಮಿ ಪೂಜೆ ನೆರವೇರಿಸಿದರು. ಮಳೆ ಹಾನಿ ಯೋಜನೆಯಡಿಯಲ್ಲಿ ಅಂದಾಜು ರೂ. 4.20 ಕೋಟಿ ವೆಚ್ಚದಲ್ಲಿ ಮೂರು ಸೇತುವೆ ಹಾಗೂ ರಸ್ತೆ ಅಗಲೀಕರಣಗೊಳಿಸಿ ಡಾಂಬರೀಕರಣ ಮಾಡಿ ಅಭಿವೃದ್ಧಿಗೊಳಿಸಲಾಗುವದು ಎಂದು ಬೋಪಯ್ಯ ಹೇಳಿದರು.

ಗುಣಮಟ್ಟದ ರಸ್ತೆ ನಿರ್ಮಾಣ ಮಾಡಲು ರಸ್ತೆ ಬದಿಯಲ್ಲಿರುವ ತೋಟದ ಮಾಲೀಕರು ಚರಂಡಿ ನಿರ್ಮಾಣಕ್ಕೆ ಜಾಗ ಬಿಟ್ಟು ಅಭಿವೃದ್ಧಿಗೆ ಕೈಜೋಡಿಸಬೇಕೆಂದು ಜಿಲ್ಲಾ ಪಂಚಾಯಿತಿ ಸದಸ್ಯ ವಿಜು ಸುಬ್ರಮಣಿ ಮನವಿ ಮಾಡಿದರು. ಈ ಸಂದರ್ಭ ತಾ.ಪಂ. ಸದಸ್ಯ ಅಜಿತ್ ಕರುಂಬಯ್ಯ, ಪಾಲಿಬೆಟ್ಟ ಗ್ರಾ.ಪಂ. ಉಪಾಧ್ಯಕ್ಷೆ ಲಲಿತಾ, ಸದಸ್ಯೆ ರೇಖಾ ಗಣಪತಿ, ಲೋಕೋಪಯೋಗಿ ಇಲಾಖೆ ಸುರೇಶ್, ಸ್ಥಳೀಯರಾದ ರಾಮದಾಸ್, ನವೀನ್ ಈಶ್ವರ್, ಅನಂದ ಸೇರಿದಂತೆ ಮತ್ತಿತರರು ಹಾಜರಿದ್ದರು.