ಗುಡ್ಡೆಹೊಸೂರು, ನ. 11: ಇಲ್ಲಿಗೆ ಸಮೀಪದ ಹೊಸಪಟ್ಟಣ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಬಸವೇಶ್ವರ ದೇವಸ್ಥಾನವನ್ನು ಕಳೆದು ಮೂರು ದಿನಗಳಿಂದ ದೇವಸ್ಥಾನದಲ್ಲಿ ವಿವಿಧ ಪೂಜಾವಿಧಿ ವಿಧಾನಗಳನ್ನು ಅಷ್ಟಬಂಧ ಬ್ರಹ್ಮಕಲಶೋತ್ಸವ, ಕಲಶ ಕುಂಭಾಭಿಷೇಕ ಹಾಗೂ ವಿವಿಧ ಪೂಜಾ ಕಾರ್ಯಗಳನ್ನು ನೆರವೇರಿಸಿ ದೇವಸ್ಥಾನವನ್ನು ಉದ್ಘಾಟಿಸಲಾಯಿತು.
ಈ ಸಂದರ್ಭ ವಿವಿಧ ಮಠಾಧೀಶರಿಂದ ಧಾರ್ಮಿಕ ಪ್ರವಚನ ನಡೆಯಿತು. ಈ ದೇವಸ್ಥಾನವನ್ನು ಇಲ್ಲಿನ ನಿವಾಸಿ ದಿ. ಶಿವಕುಮಾರ್ ಅವರ ಧರ್ಮಪತ್ನಿ ಹೆಚ್.ಎಸ್. ಪೂರ್ಣಿಮ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದೆ. ಕಿರಿಕೊಡ್ಲಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ಭಾರತ ದೇಶ ಧಾರ್ಮಿಕ ತಳಹದಿಯ ಮೇಲೆ ನಿಂತಿರುವ ದೇಶ ಎಂದರು. ತೊರೆನೂರಿನ ಶ್ರೀ ಮಲ್ಲೇಶ ಸ್ವಾಮೀಜಿ ಮಾತನಾಡಿ, ಜನರಲ್ಲಿ ಶ್ರದ್ಧೆ-ಭಕ್ತಿ ಬೆಳೆಯಲು ಈ ರೀತಿಯ ದೇವಸ್ಥಾನಗಳು ಹೆಚ್ಚು ಸ್ಥಾಪನೆಯಾಗಬೇಕು ಎಂದು ತಿಳಿಸಿದರು.
ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ತೋಂಟದಾರ್ಯ ಮಠದ ಸ್ವತಂತ್ರ ಬಸವಲಿಂಗ ಶಿವಯೋಗಿಗಳು ಹಾಜರಿದ್ದು ಮಾತನಾಡಿದರು. ದೇವಸ್ಥಾನ ಸಮಿತಿಯ ಸದಸ್ಯರಾದ ಲೋಕನಾಥ್ ನಿರೂಪಿಸಿ, ಮೂರು ದಿನಗಳ ಕಾಲ ದೇವಸ್ಥಾನ ಆವರಣದಲ್ಲಿ ಅನ್ನಸಂತರ್ಪಣೆ ಕಾರ್ಯ ನಡೆಸಲಾಯಿತು.
ಪೂಜಾ ಕಾರ್ಯದಲ್ಲಿ ಗ್ರಾಮಸ್ಥರು ಹಾಜರಿದ್ದರು. ಈ ಎಲ್ಲಾ ಪೂಜಾ ಕಾರ್ಯವನ್ನು ಮೈಸೂರಿನ ಪುರೋಹಿತ ಬಾಸ್ಕರ ಹಾಗೂ ಕೆ.ಎಸ್. ದಿನೇಶ್ ಶಾಸ್ತ್ರೀಗಳು ಮತ್ತು ತಂಡದವರ ವೈದಿಕತ್ವದಲ್ಲಿ ಜರುಗಿತು. ಇದೇ ಸಂದರ್ಭ ಶ್ರೀ ಕನ್ನಂಬಾಡಿ ಅಮ್ಮ, ಶ್ರೀ ನಾಗದೇವತೆ, ಶ್ರೀ ಮಾರಮ್ಮ ದೇವತೆಗಳ ಪ್ರಾಣ ಪ್ರತಿಷ್ಠಾಪನೆ ಅಷ್ಠಬಂಧ ಬ್ರಹ್ಮಕಲಶೋತ್ಸವ ನಡೆಯಿತು. ದೇವಸ್ಥಾನ ಸಮಿತಿಯ ಸದ್ಯರು ಈ ಕಾರ್ಯದಲ್ಲಿ ಭಾಗವಹಿಸಿದ್ದರು.