ಕಣಿವೆ, ನ. 11: ಮುಳ್ಳುಸೋಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹಾದು ಹೋಗುವ ಹಾರಂಗಿ ರಸ್ತೆ ಕಸದಿಂದ ತುಂಬಿ ತುಳುಕಿದ್ದು, ಸ್ಥಳೀಯ ನಿವಾಸಿಗಳು ಪಂಚಾಯಿತಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಮುಳ್ಳುಸೋಗೆ ಜನತಾ ಕಾಲನಿಗಾಗಿ ಹಾರಂಗಿಗೆ ಸಂಪರ್ಕ ಕಲ್ಪಿಸುವ ಗುಮ್ಮನಕೊಲ್ಲಿ ಮಾರುತಿ ಬಡಾವಣೆ ಬಳಿ ದಾರಿ ಹೋಕರು ಮೂಗು ಮುಚ್ಚಿ ತೆರಳುವ ದುಸ್ಥಿತಿ ಇದ್ದರೂ ಕೂಡ ಸ್ಥಳೀಯ ಜನಪ್ರತಿನಿಧಿಗಳು ನಮಗೇನು ಸಂಬಂಧಿಸಿದ್ದಲ್ಲ ಎಂಬಂತಿದ್ದಾರೆ. ಈ ರಸ್ತೆಯಲ್ಲಿ ಹಾರಂಗಿಗೆ ಹೋಗುವ ಪ್ರವಾಸಿಗರು ತೆರಳುತ್ತಾರೆ.
ಕುಶಾಲನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹೋಗುವ ನೂರಾರು ವಿದ್ಯಾರ್ಥಿಗಳು ಸಂಚರಿಸುತ್ತಾರೆ. ಅಷ್ಟೇ ಏಕೆ ಕುಶಾಲನಗರ ಹಾರಂಗಿಗೆ ಮುಖ ಹಾಕಿ ಬೆಳೆಯುತ್ತಿರುವ ಕಾರಣ ಈ ಭಾಗದ ಹತ್ತಾರು ಬಡಾವಣೆಗಳ ನೂರಾರು ಮಂದಿ ನಾಗರಿಕರು ಇದೇ ರಸ್ತೆಯನ್ನೇ ಅವಲಂಬಿಸಬೇಕಿದೆ. ಆದಾಗ್ಯೂ ಇಲ್ಲಿ ತೆರಳುವ ಪ್ರತಿಯೊಬ್ಬರಿಗೂ ಈ ಕಸದ ರಾಶಿ ಬಲವಂತವಾಗಿ ಮೂಗು ಮುಚ್ಚಿಸುತ್ತಿದೆ. ಅಕ್ಕ ಪಕ್ಕದ ಮನೆಗಳ ನಿವಾಸಿಗಳ ಪಾಡಂತೂ ಹೇಳತೀರದ್ದು. ‘ಹಾಳು ಪಂಚಾಯಿತಿಯವರು ಇಲ್ಲಿ ಯಾವಾಗ ಕ್ಲೀನ್ ಮಾಡಿಸ್ತಾರೋ ಕಾಣೆ...’ ಎಂದು ಪಂಚಾಯಿತಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಇಲ್ಲಿನ ನಿವಾಸಿಗಳು ತಮ್ಮ ಪರಿಸರದ ಅಶುಚಿತ್ವದ ವಿರುದ್ಧ ರೋಸಿ ಹೋಗಿ ಸ್ಥಳೀಯ ಪಂಚಾಯಿತಿ ಸದಸ್ಯರಿಗಂತೂ ಬಳಸದ ಪದಗಳೇ ಇಲ್ಲ. ಜನರು ಬಳಸುವ ಭಾಷೆಗಳನ್ನು ನೋಡಿ ಪಂಚಾಯತಿ ಸದಸ್ಯರೂ ಕೂಡ ಜಡ್ಡು ಗಟ್ಟಿ ಹೋಗಿರುವದೇ ಇಲ್ಲಿನ ಕಸದ ಸಮಸ್ಯೆ ಹೆಚ್ಚಳಕ್ಕೆ ಕಾರಣವಾದ ಅಂಶ ಎನ್ನಲಾಗುತ್ತಿದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಇನ್ನಾದರೂ ಈ ಸ್ಥಳಕ್ಕೆ ಬಂದು ಕಸವನ್ನು ತೆರವುಗೊಳಿಸಿ ನೈರ್ಮಲ್ಯ ಮೂಡಿಸಬೇಕು ಎಂದು ಸ್ಥಳೀಯ ನಿವಾಸಿಗಳಾದ ಲೋಕೇಶ್, ಪಾರ್ವತಮ್ಮ, ಗೋಪಾಲ ಮೊದಲಾದವರು ಕೋರಿದ್ದಾರೆ. ಪಂಚಾಯಿತಿ ಅಧಿಕಾರಿಗಳು ಎರಡು ದಿನದಲ್ಲಿ ಕಸ ತೆರವು ಗೊಳಿಸದಿದ್ದಲ್ಲಿ ಇಲ್ಲಿನ ಕಸವನ್ನೆಲ್ಲಾ ಗುಡಿಸಿ ತಂದು ಪಂಚಾಯಿತಿ ಮುಂದೆ ಸುರಿದು ಪ್ರತಿಭಟನೆ ನಡೆಸಲಾಗುವದು ಎಂದು ಮಹಿಳೆಯರು ಎಚ್ಚರಿಸಿದ್ದಾರೆ.
-ಕೆ.ಎಸ್. ಮೂರ್ತಿ