ಸೋಮವಾರಪೇಟೆ, ನ. 11: ವಿಭಜಿತ ಸೋಮವಾರಪೇಟೆ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಒತ್ತಾಯಿಸಿ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿಯಿಂದ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರಿಗೆ ಮನವಿ ಸಲ್ಲಿಸಲಾಯಿತು.
ಸಮಿತಿಯ ಅಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ನೇತೃತ್ವದಲ್ಲಿ ಶಾಸಕರ ಕಚೇರಿಯಲ್ಲಿ ಮನವಿ ಸಲ್ಲಿಸಲಾಯಿತು.
ತಾಲೂಕು ವಿಭಜನೆ ಸಂದರ್ಭ ಗಡಿಗೆ ಸಂಬಂಧಿಸಿದಂತೆ ಯಾವದೇ ಗ್ರಾಮ ಪಂಚಾಯಿತಿಗಳನ್ನು ಬೇರ್ಪಡಿಸಬಾರದು. ಮಾದಾಪುರ ಹೋಬಳಿ ಸ್ಥಾಪನೆ, ಈಗಾಗಲೇ ಸೋಮವಾರಪೇಟೆ ತಾಲೂಕಿನ ಹಲವು ಗ್ರಾಮಗಳು ಮಡಿಕೇರಿ, ಕುಶಾಲನಗರ ಉಪ ನೋಂದಣಾಧಿ ಕಾರಿ ಕಚೇರಿಗೆ ಸೇರಿದ್ದು, ಎಲ್ಲಾ ಗ್ರಾಮಗಳನ್ನು ಸೋಮವಾರಪೇಟೆ ಉಪನೋಂದ ಣಾಧಿಕಾರಿ ಕಚೇರಿ ವ್ಯಾಪ್ತಿಗೆ ಸೇರ್ಪಡೆಗೊಳಿಸುವದೂ ಸೇರಿದಂತೆ ಹೋರಾಟ ಸಮಿತಿಯವರು ನೀಡಿದ ಬಹುತೇಕ ಮನವಿಗಳಿಗೆ ರಂಜನ್ ಸಕಾರಾತ್ಮಕವಾಗಿ ಸ್ಪಂದಿಸಿದರು.
ಹೋರಾಟ ಸಮಿತಿ ಅಧ್ಯಕ್ಷ ಎಂ.ಬಿ.ಅಭಿಮನ್ಯುಕುಮಾರ್ ಮಾತನಾಡಿ, ಸೋಮವಾರಪೇಟೆ ತಾಲೂಕು ವಿಭಜನೆಯಾದ ನಂತರ ಶಾಂತಳ್ಳಿ, ಮಾದಾಪುರ, ಕೊಡ್ಲಿಪೇಟೆ, ಶನಿವಾರಸಂತೆ ಸೇರಿದಂತೆ ಬಹುತೇಕ ಹಿಂದುಳಿದ ಪ್ರದೇಶಗಳು ನಮ್ಮೊಂದಿಗೆ ಸೇರಿವೆ. ಈ ಭಾಗದಲ್ಲಿ ಯಾವದೇ ಉನ್ನತ ಶಿಕ್ಷಣ, ಕೈಗಾರಿಕೋದ್ಯಮಗಳು, ಪ್ರವಾಸೋದ್ಯಮ, ತಾಂತ್ರಿಕ ಶಿಕ್ಷಣ ಸಂಸ್ಥೆಗಳು, ಬಸ್ ಡಿಪೋಗಳಿಲ್ಲ ಎಂದು ಗಮನ ಸೆಳೆದರು.
ಇದರೊಂದಿಗೆ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಹುಟ್ಟೂರಾದ ಶನಿವಾರಸಂತೆ ಯಲ್ಲಿರುವ ಸರ್ಕಾರಿ ವಸತಿಗೃಹದಲ್ಲಿ ತಾಲೂಕಿನ ಹುತಾತ್ಮ ಯೋಧರ ಸ್ಮಾರಕ ಹಾಗೂ ಮ್ಯೂಸಿಯಂ ನಿರ್ಮಾಣ ಸೇರಿದಂತೆ ಹತ್ತು ಹಲವಾರು ಕಾರ್ಯಗಳು ಆಗಬೇಕಿದೆ. ಈ ಕುರಿತು ಶಾಸಕರು ಗಮನಹರಿಸಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಚಿಂತನೆ ನಡೆಸಬೇಕು ಎಂದು ಮನವಿ ಮಾಡಿದರು.
ಪ್ರಧಾನ ಸಂಚಾಲಕ ಎಸ್.ಮಹೇಶ್ ಮಾತನಾಡಿ, ಸೋಮವಾರಪೇಟೆ ಸುತ್ತಮುತ್ತಲಿನ ಪ್ರದೇಶಗಳನ್ನು ಸೇರ್ಪಡೆ ಗೊಳಿಸಿಕೊಂಡು ಹಾಲಿ ಪಟ್ಟಣ ಪಂಚಾಯಿತಿಯನ್ನು ಪುರಸಭೆಯನ್ನಾಗಿ, ಶನಿವಾರಸಂತೆ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೆ ಏರಿಸಬೇಕೆಂದು ಮನವಿ ಮಾಡಿದರು.
ಸಮಿತಿಯ ಬೇಡಿಕೆಗಳನ್ನು ಸ್ವೀಕರಿಸಿದ ಶಾಸಕರು, ಆದ್ಯತೆಯ ಮೇರೆಗೆ ಅಭಿವೃದ್ಧಿ ಕಾಮಗಾರಿ ಸೇರಿದಂತೆ, ಮೂಲ ಸೌಕರ್ಯಗಳನ್ನು ವಿಸ್ತರಿಸಲು ಕ್ರಮವಹಿಸುವ ಭರವಸೆ ನೀಡಿದರು.
ನಂತರ ತಹಶೀಲ್ದಾರ್ ಗೋವಿಂದರಾಜು ಅವರನ್ನು ಭೇಟಿ ಮಾಡಿದ ಪದಾಧಿಕಾರಿಗಳು ತಾಲೂಕು ಅಭಿವೃದ್ಧಿ ಕುರಿತು ಮನವಿ ಸಲ್ಲಿಸಿದರು. ಈ ಸಂದರ್ಭ ತಹಶೀಲ್ದಾರ್ ಮಾತನಾಡಿ, ಸೋಮವಾರಪೇಟೆ ಹಾಗೂ ಕುಶಾಲನಗರ ತಾಲೂಕಿನ ಗಡಿ ಗುರುತಿಸುವಲ್ಲಿ ಎಲ್ಲವೂ ಸೂಕ್ತವಾಗಿ ಮಾಡಲಾಗಿದೆ. ಉಪ ನೋಂದಣಾಧಿಕಾರಿ ಕಚೇರಿ ವ್ಯಾಪ್ತಿಗೆ ತಾಲೂಕಿನ ಎಲ್ಲಾ ಗ್ರಾಮಗಳು ಸೇರ್ಪಡೆಯಾಗಲಿವೆ. ಅಭಿವೃದ್ಧಿ ಕಾರ್ಯಗಳಿಗೆ ಅಗತ್ಯವಿರುವ ಸ್ಥಳಗಳನ್ನು ಗುರುತಿಸಲು ಶಾಸಕರೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವದು ಎಂದರು.
ಈ ಸಂದರ್ಭ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಪದಾಧಿಕಾರಿಗಳಾದ ಎಸ್.ಎಂ.ಡಿಸಿಲ್ವಾ, ಕೆ.ಎ.ಯಾಕೂಬ್, ಬಿ.ಬಿ.ಸತೀಶ್, ಕೆ.ಎನ್.ದೀಪಕ್, ಕನ್ನಿಗಂಡ ಸುಭಾಷ್, ಎಸ್.ಎ. ಮುರುಳೀಧರ್, ಎಚ್.ಎ. ನಾಗರಾಜು, ಬಿ.ಎಸ್.ಮಂಜುನಾಥ್, ಎಸ್.ಆರ್. ಸೋಮೇಶ್, ಜಿಲ್ಲಾ ಪಂಚಾಯಿತಿ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಸರೋಜಮ್ಮ, ಸೋಮವಾರಪೇಟೆ ತಾಲೂಕು ಪಂಚಾಯಿತಿ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ತಂಗಮ್ಮ ಮತ್ತಿತರರು ಉಪಸ್ಥಿತರಿದ್ದರು.