*ಗೋಣಿಕೊಪ್ಪಲು, ನ. 11 : ವೈಜ್ಞಾನಿಕ ಕಸ ವಿಲೇವಾರಿ ಘಟಕ, ಚರಂಡಿ, ಗರಡಿ ಮನೆ, ಕಿರುಸೇತುವೆ, ತಡೆಗೋಡೆ, ಗುಡಿ ಚರ್ಚು ಮಸೀದಿಗಳ ಕಟ್ಟಡಗಳಿಗೆ ಗ್ರಾಮ ವಿಕಾಸ ಯೋಜನೆಯ ಒಂದು ಕೋಟಿ ಅನುದಾನದಲ್ಲಿ ನಿರ್ಮಾಣ ವಾಗುವ ಕಾಮಗಾರಿಗಳಿಗೆ ಶಾಸಕ ಕೆ.ಜಿ. ಬೋಪಯ್ಯ ಭೂಮಿ ಪೂಜೆ ನೆರವೇರಿಸಿದರು.

ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಾಳುಗೋಡು ಭದ್ರಕಾಳಿ ದೇವಸ್ಥಾನದ ಸಭಾಭವನಕ್ಕೆ ಭೂಮಿ ಪೂಜೆ ನೆರವೇರಿಸಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ಗ್ರಾಮ ವಿಕಾಸ್ ಯೋಜನೆಯ ಒಂದು ಕೋಟಿ ಅನುದಾನದಲ್ಲಿ ರೂ. 50 ಲಕ್ಷ ವೆಚ್ಚದಲ್ಲಿ ಚರಂಡಿ, ಕಿರುಸೇತುವೆ, ಭದ್ರಕಾಳಿ ದೇವಸ್ಥಾನದ ಸಮೀಪ ರೂ. 12 ಲಕ್ಷ ವೆಚ್ಚದಲ್ಲಿ ಸಭಾಭವನ ನಿರ್ಮಾಣ, ರೂ. 12 ಲಕ್ಷ ವೆಚ್ಚದಲ್ಲಿ ಗರಡಿ ಮನೆ ನಿರ್ಮಾಣ ಮತ್ತು ಜಿಮ್ ಪರಿಕರಗಳ ಅಳವಡಿಕೆ, ರೂ. 3 ಲಕ್ಷ ವೆಚ್ಚದಲ್ಲಿ ಸೌರ ಬೆಳಕು ದೀಪ, ರೂ. 10 ಲಕ್ಷ ಅನುದಾನದಲ್ಲಿ ವೈಜ್ಞಾನಿಕ ಕಸ ವಿಲೇವಾರಿ ಘಟಕ, ರೂ. 2 ಲಕ್ಷದಲ್ಲಿ ಟೆಲಿವಿಷನ್ ನೇರ ಪ್ರಸಾರ ಮತ್ತು ಮೂಲಸೌಕರ್ಯ ಅಳವಡಿಕೆ, ರೂ. 6 ಲಕ್ಷದಲ್ಲಿ ಸ್ಥಳೀಯ ಗುಡಿ, ಚರ್ಚು ಮಸೀದಿಗಳ ಕಟ್ಟಡ ನಿರ್ಮಾಣಕ್ಕೆ ಮತ್ತು ರೂ. 5 ಲಕ್ಷ ವೆಚ್ಚದಲ್ಲಿ ತಡೆಗೋಡೆ ಕಾಮಗಾರಿಗಳು ನಡೆಯಲಿದೆ ಎಂದು ಮಾಹಿತಿ ನೀಡಿದರು.

ಜಿ.ಪಂ. ಸದಸ್ಯೆ ಅಪ್ಪಂಡೇರಂಡ ಭವ್ಯ, ಬಿಟ್ಟಂಗಾಲ ಗ್ರಾ.ಪಂ. ಅಧ್ಯಕ್ಷ ಪುಚ್ಚಿಮಂಡ ಸಾಬು ಬೆಳ್ಯಪ್ಪ, ಸದಸ್ಯ ಮುಕ್ಕಾಟಿರ ಬೋಪಯ್ಯ, ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಅಮ್ಮಣಿಚಂಡ ರಂಜಿ ಪೂಣಚ್ಚ, ದೇವಸ್ಥಾನದ ಅಧ್ಯಕ್ಷ ಚೇಂದಂಡ ಇಂದು ಭೀಮಯ್ಯ, ಜಿ.ಪಂ. ಇಂಜಿನಿಯರ್ ಮಹಾದೇವ್, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಸ್ವರೂಪ್, ಪ್ರಮುಖರಾದ ಚೇಂದಂಡ ನಂಜಪ್ಪ, ಕುಪ್ಪಂಡ ದಿಲನ್, ಗುತ್ತಿಗೆದಾರರಾದ ಅಪ್ಪಂಡೇರಂಡ ದಿನು, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧು ದೇವಯ್ಯ ಮತ್ತು ಊರಿನ ಪ್ರಮುಖರು ಹಾಜರಿದ್ದರು.