ಪೆರಾಜೆ, ನ. 11: ಇಂಟರ್ನೆಟ್ ಮತ್ತು ಮೊಬೈಲ್ ಫೋನ್ ಸಂಪರ್ಕವು ಇತ್ತೀಚಿನ ದಿನಗಳಲ್ಲಿ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಮೊಬೈಲ್ ಫೋನ್ ಅಥವಾ ಇಂಟರ್ನೆಟ್ ಇಲ್ಲದೆ ಮತ್ತು ನಮ್ಮ ಪ್ರೀತಿಪಾತ್ರರೊಂದಿಗೆ ಮನೆಯಿಂದ ದೂರದಲ್ಲಿ ವಾಸಿಸದೆ ಅವರ ಜೀವನವನ್ನು ಕಲ್ಪಿಸಿಕೊಳ್ಳಲಾಗುವದಿಲ್ಲ. ಮೊಬೈಲ್ ಫೋನ್ ಇಂದು ಕೇವಲ ಕರೆ ಮಾಡುವ ಸಾಧನವಾಗದೇ, ಆನ್ ಲೈನ್ ನಗದು ಪಾವತಿ, ಖರೀದಿ, ಕಲಿಕೆ, ಜಾಲ ತಾಣಗಳು ಹೀಗೆ ನೂರಾರು ಸೇವೆಗಳನ್ನು ಕುಳಿತ ಜಾಗದಲ್ಲೇ ಪಡೆ ಯಲು ಬಳಸುತ್ತಿದ್ದೇವೆ. ಹಿಂದಿದ್ದ ಸ್ಥಿರ ದೂರ ವಾಣಿಗಳು ಬಹುತೇಕ ಮೂಲೆ ಸೇರಿದ್ದು, ಮೊಬೈಲ್ ಎನ್ನುವದು ಜೀವನದ ಅವಿಭಾಜ್ಯ ಅಂಗ ಎನ್ನುವಷ್ಟರ ಮಟ್ಟಿಗೆ ಅವಲಂಬಿತರಾಗಿದ್ದೇವೆ.

ನಮ್ಮ ದೇಶದ ಕಲ್ಪನೆಯಂತೆ ಆಧುನಿಕ ಯುಗದಲ್ಲಿ ಎಲ್ಲವೂ ತಂತ್ರಜ್ಞಾನದಲ್ಲೆ ದೊರೆಯುವಂತೆ ಆಗಬೇಕು. ಹೀಗೆ ಮುಂದುವರಿಯುತ್ತಿರುವ ಈ ತಂತ್ರಜ್ಞಾನ ಯುಗದಲ್ಲಿ ಇನ್ನೂ ಕೆಲವು ಪ್ರದೇಶಗಳಲ್ಲಿ ಮಾತನಾಡಲು ನೆಟ್ವರ್ಕ್ ಇಲ್ಲದ ಪರಿಸ್ಥಿತಿ ಇದೆ ಎಂದರೆ ನಾವು ನಂಬಲೆಬೇಕಾದ ಸತ್ಯ

ಮಡಿಕೇರಿ ತಾಲೂಕಿನ ದೊಡ್ಡ ಗ್ರಾಮಗಳೊಂದಾದ ಪೆರಾಜೆ ಗ್ರಾಮದ ಕೆ. ಪೆರಾಜೆ ಹಾಗೂ ಪಿ. ಪೆರಾಜೆಯ ಬಹುತೇಕ ಕಡೆಗಳಲ್ಲಿ ಇದುವರೆಗೆ ಯಾವದೇ ನೆಟ್ವರ್ಕ್ ಇಲ್ಲದೆ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಪೆರಾಜೆಯಲ್ಲಿ ಹಾದು ಹೋಗುವ ಮೈಸೂರು-ಬಂಟ್ವಾಳ ಹೆದ್ದಾರಿಯಲ್ಲಿ ಟವರ್ ಇದ್ದರೂ ಅದರ ತರಂಗಾಂತರ ಗ್ರಾಮದ ಒಳಗೆ 2 ಕಿ.ಮೀ. ದೂರ ಪ್ರಯಾಣಿಸಿದರೆ ಸಿಗುತಿಲ್ಲ. ಗ್ರಾಮದೊಳಗೆ ನೂರಾರು ವಾಹನಗಳು ಸಂಚಾರಿಸುತ್ತಿರುತ್ತವೆ. ಹಾಗೇ ಪೆರಾಜೆಯಿಂದ ಕೂರ್ನಡ್ಕವಾಗಿ ಬಡ್ಡಡ್ಕ, ತೊಡಿಕಾನ ಮಾರ್ಗವಾಗಿ ಚೆಂಬು ಈ ಗ್ರಾಮಗಳನ್ನು ಸಂಪರ್ಕಿಸುವ ಹತ್ತಿರದ ರಸ್ತೆಗಳೂ ಹಾದೂ ಹೋಗುತ್ತವೆ.

ನೆಟ್ವರ್ಕ್ ಇಲ್ಲ

ನಿಡ್ಯಮಲೆ, ಕುಂಡಾಡು, ಕುಂಬಳಚೇರಿ, ಬಂಗಾರಕೋಡಿ, ಪೆರುಮುಂಡ, ಮಜಿಕೋಡಿ, ಕೊಳಂಗಾಯ, ಪೆರಂಗಜೆ, ಪಾಳ್ಯ, ಪೀಚೆ, ವ್ಯಾಪಾರೆ, ತೊಕ್ಕುಳಿ, ಹೀಗೆ ಕುಂದಲ್ಪಾಡಿ ಪೆರಾಜೆ ಮತ್ತು ಪುತ್ಯಪೆರಾಜೆ ವ್ಯಾಪ್ತಿಯು ಗ್ರಾಮದಲ್ಲಿಯೇ ಅತ್ಯಂತ ಹೆಚ್ಚು ಜನರು ವಾಸಿಸುವ ಪ್ರದೇಶವಾಗಿದೆ. ಈ ಆಸುಪಾಸಿನಲ್ಲಿ ಯಾವದೇ ಕಂಪೆನಿಯ ಟವರ್ ಇಲ್ಲದೇ ಇರುವದರಿಂದ ಪ್ರಸ್ತುತ ಕಾಲಘಟ್ಟದಲ್ಲಿ ಜನರಿಗೆ ಅಗತ್ಯ ಮೂಲಸೌಕರ್ಯಗಳಲ್ಲೊಂದಾದ ಸಂಪರ್ಕ ಸಾಧನ ಮೊಬೈಲ್ ಸಂಪರ್ಕ ಮಾತ್ರ ಸಿಗದೆ ಇರುವದು ಇಲ್ಲಿಯ ಜನರನ್ನು ಸಂಕಷ್ಟಕೀಡು ಮಾಡಿದೆ.

ಈ ಪ್ರದೇಶಗಳಿಂದ ನೆರೆಯ ಸುಳ್ಯ ಪಟ್ಟಣಕ್ಕೆ ಬರಬೇಕಾದರೆ 15-20 ಕಿ.ಮೀ. ಕ್ರಮಿಸಬೇಕು. ಯಾರಾದರೂ ಅನಾರೋಗ್ಯಕ್ಕೀಡಾದರೆ ಅಥವಾ ಅಪಘಾತ ಸಂಭವಿಸಿದರೆ ಅಂತಹ ತುರ್ತು ಪರಿಸ್ಥಿತಿಯಲ್ಲಿ ನೆಟ್ವರ್ಕ್ ಸಮಸ್ಯೆಯಿಂದ ಸಂಪರ್ಕ ಅಡಚಣೆಯಿಂದಾಗಿ ಜೀವಹಾನಿ ಇತರ ಸಮಸ್ಯೆಗಳು ಸಂಭವಿಸುವ ಸಾಧ್ಯತೆಯಿದೆ.

ವಿದ್ಯಾರ್ಥಿಗಳಿಗೂ ತೊಂದರೆ

ಇಂದು ಈ ಗ್ರಾಮದ ಜನರು ಇಂಟರ್ನೆಟ್ ಸಂಪರ್ಕವಿಲ್ಲದೆ ವಾಸಿಸುತ್ತಿದ್ದಾರೆ. ಗ್ರಾಮದ ವಿದ್ಯಾರ್ಥಿಗಳು ಆನ್‍ಲೈನ್ ತರಗತಿಗಳನ್ನು ಪಡೆಯುವದಿಲ್ಲ. ಅವರು ಆನ್‍ಲೈನ್ ಫಾರ್ಮ್‍ಗಳನ್ನು ಭರ್ತಿ ಮಾಡುವದನ್ನು ತಪ್ಪಿಸುತ್ತಾರೆ ಮತ್ತು ಇಂಟರ್ನೆಟ್ ಸಂಪರ್ಕವಿಲ್ಲದ ಕಾರಣ ಮಾಹಿತಿಯನ್ನು ತಡವಾಗಿ ಪಡೆಯುತ್ತಾರೆ. ಇಲ್ಲಿನ ವಿದ್ಯಾರ್ಥಿಗಳು ಅನೇಕ ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಪ್ರದೇಶದ ಜನರು 2ಜೀ ತರಂಗಾಂತರ ಪಡೆಯಲು ದಿನನಿತ್ಯ ನಿಡ್ಯಮಲೆ ಮತ್ತು ಕರಂಟಡ್ಕ ಭಾಗದಲ್ಲಿ ನೆಟ್ವರ್ಕ್ ಸಮಸ್ಯೆ ಅತಿಯಾಗಿದ್ದು, ಮೊಬೈಲ್ ಬಳಕೆದಾರರು ಕಾಡುಮೇಡು ಅಲೆಯುವ ಪರಿಸ್ಥಿತಿ ಬಂದೊದಗಿದೆ. ತುರ್ತುಪರಿಸ್ಥಿತಿ ಸಮಯದಲ್ಲಿ ಕರೆಮಾಡಬೇಕಾದಾಗ (ನೆಟ್ವರ್ಕ್ ಸಿಗುವ ಜಾಗಕ್ಕೆ) ಕರೆ ಮಾಡಲು ನಿಗದಿತ ಸ್ಥಳಕ್ಕೆ ಹೋಗಬೇಕಾದ ಅನಿವಾರ್ಯತೆ ಇದೆ.

- ಡಿವಿನ್ ಗೌಡ ನಿಡ್ಯಮಲೆ, ಗ್ರಾಮಸ್ಥರು ಪೆರಾಜೆಅಭಿವೃದ್ಧಿ ಹಾದಿಯಲ್ಲಿ ಸದಾ ಮುಂದಿರುವ ನಮ್ಮ ಪೆರಾಜೆ ಗ್ರಾಮದ ಬಹುದೊಡ್ಡ ಸಮಸ್ಯೆ ಮೊಬೈಲ್ ನೆಟ್‍ವರ್ಕ್ ಇಲ್ಲದಿರುವದು. ಗ್ರಾಮದ ಬಹುಪಾಲು ಪ್ರದೇಶಗಳು ಈ ಸಮಸ್ಯೆ ಎದುರಿಸುತ್ತಿವೆ. ಮುಖ್ಯವಾಗಿ ಕುಂಬಳಚೇರಿ, ಕುಂದಲ್ಪಾಡಿ, ಕೊಳಂಗಾಯ, ಮಜಿಕೋಡಿ ಹೊದ್ದೆಟ್ಟಿ, ನೆಕ್ಕಿಲ, ಬಾಳಕಜೆ ಮುಂತಾದ ಪ್ರದೇಶಗಳಲ್ಲಿ ನೆಟ್ವರ್ಕ್‍ನ ಲವಲೇಶವೂ ಇಲ್ಲದ ಪರಿಸ್ಥಿತಿ. ಎಷ್ಟೋ ಬಾರಿ ವೈದ್ಯಕೀಯ ತುರ್ತು ಅಗತ್ಯಗಳ ಸಂದರ್ಭದಲ್ಲಿ ಮೊಬೈಲ್ ನೆಟ್‍ವರ್ಕ್ ಸಿಗದೇ ಪರದಾಡಿದ ಹಾಗೂ ಪರದಾಡುತ್ತಿರುವ ಎಷ್ಟೋ ಸಂದರ್ಭಗಳಿವೆ. ದೇಶದ ಬಹುಪಾಲು ಪ್ರದೇಶಗಳನ್ನು ಬೆಸೆಯುವ ಕಾರ್ಯ ಮಾಡಿರುವ ಮೊಬೈಲ್ ಎಂಬ ಜಾಲ ನಮ್ಮ ಗ್ರಾಮದಲ್ಲಿ ದೊರಕದೇ ಇರುವದು ವಿಪರ್ಯಾಸವೇ ಸರಿ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳು ಸೂಕ್ತ ಗಮನಹರಿಸಿ ಆದಷ್ಟು ಬೇಗ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕೆಂಬದು ನಮ್ಮ ಆಗ್ರಹ.

- ಶೀತಲ್ ಕುಂಬಳಚೇರಿ, ಅಧ್ಯಕ್ಷರು ಚಿಗುರು ಯುವಕ ಮಂಡಲ ಪೆರಾಜೆಮೈಲುಗಳಷ್ಟು ದೂರ ಕ್ರಮಿಸಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ.

ಬಹು ದಿನಗಳಿಂದ ಬೇಡಿಕೆ

ಪೆರಾಜೆ ಗ್ರಾಮದೊಳಗಿನ ನೆಟ್ವರ್ಕ್ ಸಮಸ್ಯೆ ಹಾಗೂ ಟವರ್ ನಿರ್ಮಿಸಿಕೊಡುವ ಬೇಡಿಕೆಯನ್ನು ಬಹಳ ವರ್ಷಗಳಿಂದ ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದೆ. ಆದರೂ ಇದುವರೆಗೆ ಈ ಬೇಡಿಕೆ ಈಡೇರಿಲ್ಲ. ಕೊಳಂಗಾಯ, ಕಾಡುಪಂಜತಟ್ಟು, ಗಡಿಗುಡ್ಡೆ, ಮುಡ್ಕಜೆ ಅಥವಾ ಗ್ರಾಮದ ಎಲ್ಲಾಕಡೆಗೆ ನೆಟ್ವರ್ಕ್ ತಲಪಲು ಜಾಗವನ್ನು ಗುರುತಿಸಿ ಆ ಪ್ರದೇಶದಲ್ಲಿ ಯಾವದಾದರೂ ಒಂದು ಕಂಪೆನಿಯ ಟವರ್ ನಿರ್ಮಿಸಿ ಗ್ರಾಮದ ಜನರ ಬಹುವರ್ಷದ ಸಂಪರ್ಕ ಸಮಸ್ಯೆಯನ್ನು ನಿವಾರಿಸಬೇಕಾಗಿದೆ.

- ಕಿರಣ್ ಕುಂಬಳಚೇರಿ