ಮಡಿಕೇರಿ, ನ. 11: ಇತ್ತೀಚೆಗೆ ವೀರಾಜಪೇಟೆ ಸರ್ವೋದಯ ಬಿ.ಎಡ್ ಕಾಲೇಜಿನಲ್ಲಿ ಪ್ರೊ. ಬಿ.ವಿ. ರಮಣ ಇಕೋ ಕ್ಲಬ್ ವೇದಿಕೆಯಲ್ಲಿ ಪರಿಸರದ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು.

ಗ್ರಂಥಾಲಯದ ಶಿಕ್ಷಕ ರಾಜಶೇಖರ್ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಸಮಾರಂಭವನ್ನು ಔಷಧಿಯ ಗಿಡವನ್ನು ನೆಡುವದರ ಮೂಲಕ ಉದ್ಘಾಟಿಸಲಾಯಿತು. ಗೋಣಿಕೊಪ್ಪ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಕೃಷ್ಣ ಚೈತನ್ಯ ಮಾತನಾಡಿ, ಪರಿಸರದೊಡನೆ ಮಾನವನ ಸಂಬಂಧ ಹೇಗಿದೆ ಎಂಬದರ ಬಗ್ಗೆ ವಿವರಿಸಿದರು. ರೋಡಿನಲ್ಲಿ ಕಸ ಎಸೆಯುವದನ್ನು ಕಂಡರೂ ಅದನ್ನು ತಡೆಯುವ ಶಕ್ತಿ ನಮಗಿಲ್ಲ. ಇದು ನಮ್ಮ ಸಮಾಜದ ದೌರ್ಭಾಗ್ಯ ಎಂದು ಹೇಳಿದರು.

ವಿವಿಧ ರೀತಿಯ ಪಕ್ಷಿಗಳ ಪ್ರಾತ್ಯಕ್ಷಿಕೆಯನ್ನು ಹಾಗೂ ಅದರ ಗೂಡುಗಳ ಬಗೆ,್ಗ ಪಕ್ಷಿ ಭಾಷೆಯ ಬಗ್ಗೆ ವಿವರಿಸಿದರು. ಹಾಗೆಯೇ ಪಕ್ಷಿಗಳಿಂದ ಭೂಮಿಯ ಫಲವತ್ತತೆಯನ್ನು ಹೇಗೆ ಕಾಯ್ದುಕೊಳ್ಳಬಹುದು ಎಂದು ತಿಳಿ ಹೇಳುವದರೊಂದಿಗೆ ಪಕ್ಷಿಗಳ ಹಿಕ್ಕೆ ಸಹ ನೈಟ್ರೇಟ್ ಗೊಬ್ಬರದ ಹಾಗೆ ಕೆಲಸ ಮಾಡುತ್ತದೆ. ಕೀಟಗಳ ನಿಯಂತ್ರಣ ದಂಸಕಗಳ ನಿವಾರಣೆಯೊಂದಿಗೆ ಅರಣ್ಯ ಸಂರಕ್ಷಣೆಯಲ್ಲಿ ಪಕ್ಷಿಗಳ ಪಾತ್ರ ಮಹತ್ವದ್ದು ಎಂದು ತಿಳಿಸಿದರು.