ಮಡಿಕೇರಿ, ನ. 9: ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಜಿಲ್ಲಾ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಶುಶ್ರೂಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಬಿ. ವಸಂತಿ ಅವರು, ರಾಜ್ಯ ಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್‍ನಲ್ಲಿ ಮೂರು ಚಿನ್ನ ಹಾಗೂ ಒಂದು ಬೆಳ್ಳಿಯ ಪದಕ ಪಡೆದಿದ್ದಾರೆ. ತಾ. 4 ಹಾಗೂ 5ರಂದು ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ಜರುಗಿದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ವಸಂತಿ ಅವರು 100 ಮೀ., 200 ಮೀ., 400 ಮೀ., ಓಟಗಳಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಗಳಿಸಿದ್ದಾರೆ.
ಅಲ್ಲದೆ 400 ಮೀ. ರಿಲೇಯಲ್ಲಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ ಪಡೆದಿದ್ದು, 2020 ಫೆಬ್ರವರಿ 5, 6, 7ರಂದು ಗುಜರಾತಿನ ವಢೋದರದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದಿದ್ದಾರೆ. ನಿವೃತ್ತ ಬಿ.ಎಸ್.ಎಫ್. ಯೋಧ ದಿ. ಬಾಲಕೃಷ್ಣ ಅವರ ಮಡದಿಯಾಗಿರುವ ವಸಂತಿ, ಈಗಾಗಲೇ ಅನೇಕ ರೋಗಿಗಳಿಗೆ ರಕ್ತದಾನ ನಿಡುವದರೊಂದಿಗೆ ಪ್ರಾಣ ರಕ್ಷಣೆಗಾಗಿ ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಇತರ ಸಂಘ ಸಂಸ್ಥೆಗಳಿಂದ ಪುರಸ್ಕಾರ ಪಡೆದಿದ್ದಾರೆ. ಅಲ್ಲದೆ ಅನೇಕ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು ಸಾಧನೆ ತೋರಿ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.