ಸಿದ್ದಾಪುರ, ನ. 10: ಭಿಕ್ಷುಕರ ಸೋಗಿನಲ್ಲಿ ಬಂದ ಐವರು ಮಹಿಳೆಯರು ಒಂಟಿ ಮನೆಯಲ್ಲಿದ್ದ ಮಹಿಳೆಗೆ ಭೀತಿ ಹುಟ್ಟಿಸಿ ಪರಾರಿಯಾದ ಘಟನೆ ನೆಲ್ಯಹುದಿಕೇರಿಯ ಬೆಟ್ಟದ ಕಾಡುವಿನಲ್ಲಿ ಶನಿವಾರದಂದು ನಡೆದಿದೆ.ನೆಲ್ಯಹುದಿಕೇರಿಯ ಬೆಟ್ಟದ ಕಾಡು ನಿವಾಸಿ ಬಶೀರ್ ಎಂಬವರ ಮನೆಯು ಅಲ್ಲಿನ ಅಂಗನವಾಡಿಯ ಸಮೀಪದಲ್ಲಿರುವ ಒಂಟಿ ಮನೆಯಾಗಿದ್ದು, ಶನಿವಾರ ಅಂಗನವಾಡಿಗೆ ರಜೆ ಇದ್ದ ಕಾರಣ ನಿರ್ಜನ ಪ್ರದೇಶದಂತೆ ಕಂಡುಬರುತ್ತಿತ್ತು. ಶನಿವಾರದಂದು ಮನೆಯಲ್ಲಿ ಬಶೀರ್ ಅವರ ಮಡದಿ ಆಯಿಶಾ ಅವರು ಒಬ್ಬರೇ ಇದ್ದ ಸಂದರ್ಭ ಮುಂಬಾಗಿಲಿನ ಕದ ತಟ್ಟಿದ ಶಬ್ದ ಕೇಳಿ ಆಯಿಶಾ ಬಾಗಿಲನ್ನು ತೆರೆಯದೆ ಕಿಟಕಿಯಿಂದ ಹೊರಗಡೆ ನೋಡಿದ ಸಂದÀರ್ಭ ಬಾಗಿಲಿನ ಬಳಿ ಹರಿದ ಬಟ್ಟೆ ಕೈಯಲ್ಲಿ ಪ್ಲಾಸ್ಟಿಕ್ ಚೀಲಗಳನ್ನು ಹಿಡಿದು ಸಣ್ಣ ಮಗುವಿನೊಂದಿಗೆ ಮೂವರು ಮಹಿಳೆಯರು ಸಂಶಯಾಸ್ಪದವಾಗಿ ನಿಂತಿದ್ದರು.ಈ ಹಿನ್ನೆಲೆಯಲ್ಲಿ ಬಾಗಿಲನ್ನು ತೆರೆಯಲು ಮುಂದಾಗದ ಆಯಿಶಾ ತನ್ನ ಮನೆ ಕೆಲಸವನ್ನು ಮುಂದುವರಿಸಿದ್ದಾರೆ. ಇದಾದ ನಂತರ ಹಿಂಭಾಗದ ಬಾಗಿಲ ಕದವನ್ನು ತಟ್ಟಿದ ಶಬ್ದ ಕೇಳಿ ನೋಡಲು ಹೋದ ಆಯಿಶಾ ಅವರಿಗೆ ಅಲ್ಲಿಯೂ ಕೂಡ ಇಬ್ಬರು ಭಿಕ್ಷುಕರಂತೆ ಕಾಣುವ ಮಹಿಳೆಯರು ಕಂಡುಬಂದರು. ಇದರಿಂದ ಗಾಬರಿಗೊಂಡ ಆಕೆ ಭಯಭೀತಳಾಗಿ ತನ್ನ ಗಂಡನಾದ ಬಶೀರ್‍ಗೆ ಕರೆ ಮಾಡಿ ವಿಷಯ ತಿಳಿಸಿ, ಆದಷ್ಟು ಬೇಗ ಮನೆಯ ಬಳಿ ಬರುವಂತೆ ಹೇಳಿದ್ದಾರೆ.ಕೆಲಸದ ನಿಮಿತ್ತ ನೆಲ್ಯಹುದಿಕೇರಿಗೆ ಬಂದಿದ್ದ ಬಶೀರ್ ಕೂಡಲೇ ಮನೆಯತ್ತ ತೆರಳಿದ್ದು, ಈ ಸಂದರ್ಭ ಮನೆಯ ಬಳಿ ಗುಜರಿ ಸಂಗ್ರಹಿಸುವವರಂತೆ ಗೋಚರಿಸುವ ಐವರು ಮಹಿಳೆಯರು ನಿಂತಿರುವದು ಕಂಡುಬಂದಿದೆ. ಬಶೀರ್ ಅವರನ್ನು ಕಂಡೊಡನೆ ಮಹಿಳೆಯರು ಪರಾರಿಯಾಗಿದ್ದು, ಸ್ಥಳೀಯರು ಹಾಗೂ ಸ್ನೇಹಿತರ ನೆರವಿನೊಂದಿಗೆ ಸುತ್ತಮುತ್ತ ಹುಡುಕಾಟ ನಡೆಸಿದರೂ ಮಹಿಳೆಯರು ಪತ್ತೆಯಾಗಲಿಲ್ಲ ಎಂದು ಬಶೀರ್ ತಿಳಿಸಿದ್ದಾರೆ. ಈ ವ್ಯಾಪ್ತಿಯಲ್ಲಿ ಆಗುಂತಕರ ಬಗ್ಗೆ ಸ್ಥಳೀಯರು ಎಚ್ಚರವಹಿಸಿ ಪೊಲೀಸರಿಗೆ ಮಾಹಿತಿ ನೀಡಬೇಕೆಂದು ಕೋರಿದ್ದಾರೆ. ಘಟನೆಯ ಕುರಿತು ಸಿದ್ದಾಪುರ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದು ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.

-ವಾಸು