ಮಡಿಕೇರಿ, ನ. 10: ಮೂರು ದಿನಗಳ ಹಿಂದೆ ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ನಾಲಡಿ ಗ್ರಾಮದಲ್ಲಿ ಸಂಶಯಾಸ್ಪದ ರೀತಿ ವರ್ತಿಸುತ್ತಾ; ಗ್ರಾಮಸ್ಥರಿಂದ ಸೆರೆಹಿಡಿಯಲ್ಪಟ್ಟು; ಅಪರಿಚಿತ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಯುವಕನೊಬ್ಬ ತಾನು ಐಪಿಎಸ್ ಅಧಿಕಾರಿಯೆಂದು ಯುವತಿ ಯೊಬ್ಬಳಿಗೆ ನಂಬಿಸಿ ಮೋಸವೆಸಗಿ ರುವದು ಬಹಿರಂಗಗೊಂಡಿದೆ.ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ನಾಲಡಿ ಗ್ರಾಮದಲ್ಲಿ ನಾಲ್ಕು ಜನ ಯುವಕರು ಝೈಲೋ ವಾಹನದಲ್ಲಿ (ಕೆ.ಎಲ್. 37 ಬಿ. 525) ಬಂದು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದು, ಈ ಬಗ್ಗೆ ಸಾರ್ವಜನಿಕರು ನಾಪೋಕ್ಲು ಪೊಲೀಸರಿಗೆ ಮಾಹಿತಿ ನೀಡಿದ ಮೇರೆಗೆ; ನಾಪೋಕ್ಲು ಠಾಣಾಧಿಕಾರಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಶಂಕಿತರನ್ನು (ಮೊದಲ ಪುಟದಿಂದ) ತಾ. 8 ರಂದು ಬೆಳಿಗ್ಗೆ ವಶಕ್ಕೆ ಪಡೆದಿದ್ದರು. ಈ ವೇಳೆ ಪರಿಶೀಲಿಸಲಾಗಿ ಅವರ ವಾಹನದಲ್ಲಿ ಭಾರತೀಯ ಪೊಲೀಸ್ ಸೇವೆಯ ಅಧಿಕಾರಿಯ ಸಮವಸ್ತ್ರ, ಐಪಿಎಸ್ ಬೆಲ್ಟ್, ಐಪಿಎಸ್ ಕ್ಯಾಪ್, ವಾಹನಕ್ಕೆ ಅಳವಡಿಸುವ ಸ್ಟಾರ್, ಟಾಪ್ ಲೈಟ್, ಲಾಟಿ ಇದ್ದು ಆತನನ್ನು ವಿಚಾರಣೆಗೊಳಪಡಿಸಲಾಗಿ ಆರೋಪಿಗಳು ಸಮಂಜಸವಾದ ಉತ್ತರ ನೀಡಿರಲಿಲ್ಲ. ಕಾರಣ ಅವರ ವಿರುದ್ಧ ನಾಪೋಕ್ಲು ಪೊಲೀಸ್ ಠಾಣಾ ಮೊ.ಸಂ. 72/2019 ಕಲಂ 171, 419 ರೆ/ವಿ 34 ಐಪಿಸಿ ರೀತ್ಯ ಮೋಸದ ಜಾಲ ಕುರಿತು ಮೊಕದ್ದಮೆ ದಾಖಲಾಗಿದೆ. ಅಲ್ಲದೆ ಜಿಲ್ಲಾ ಅಪರಾಧ ಪತ್ತೆದಳದಿಂದ ತುರ್ತು ವಿಚಾರಣೆಗೆ ಒಳಪಡಿಸ ಲಾಗಿತ್ತು.
ನಾಲ್ಕು ಜನ ಆರೋಪಿಗಳನ್ನು ಅಪರಾಧ ಪತ್ತೆ ದಳದ ಅಧಿಕಾರಿ ಹಾಗೂ ಸಿಬ್ಬಂದಿಯವರು ವಿಚಾರಣೆಗೊಳಪಡಿಸಿದಲ್ಲು; ಆರೋಪಿ ಮಿಥುನ್ ತಾನು ಐಪಿಎಸ್ ಅಧಿಕಾರಿ ಎಂದು ನಂಬಿಸಿ ನಾಲಾಡಿ ಗ್ರಾಮದಲ್ಲಿದ್ದ ಕೇರಳ ಮೂಲದ ಹುಡುಗಿಯನ್ನು ಕೇರಳದಲ್ಲಿ ವಿವಾಹವಾಗಿದ್ದು; ನಂತರ ಈತ ಐಪಿಎಸ್ ಅಧಿಕಾರಿ ಅಲ್ಲವೆಂದು ಆಕೆ ತಿಳಿದು 2018ರಲ್ಲಿ ಆತನ ವಿರುದ್ಧ ತ್ರಿಶೂರ್ ಜಿಲ್ಲೆಯ ಮನ್ನೋತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು.
ಆ ಮೇರೆಗೆ ಪೊಲೀಸ್ ಕಾಯ್ದೆ 678/2018 ಕಲಂ 376, 419, 420 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಸದರಿ ಪ್ರಕರಣವು ತನಿಖಾ ಹಂತದಲ್ಲಿದೆ; ಈ ನಡುವೆ ತನ್ನ ಪತ್ನಿಯ ಸಂಬಂಧಿಕರು ನಾಲಾಡಿ ಗ್ರಾಮದಲ್ಲಿದ್ದು; ತಾನು ಐಪಿಎಸ್ ಅಧಿಕಾರಿಯೇ ಎಂದು ಅವರಿಗೆ ನಂಬಿಸಲು ಸಮವಸ್ತ್ರ, ಬೆಲ್ಟ್, ವಾಹನಕ್ಕೆ ಅಳವಡಿಸುವ ಸ್ಟಾರ್, ಲಾಠಿ, ಟಾಪ್‍ಲೈಟ್ ಎಲ್ಲವನ್ನು ಖರೀದಿಸಿದ ಮಿಥುನ್, ತನ್ನ ಸ್ನೇಹಿತರೊಂದಿಗೆ ನಾಲಡಿ ಗ್ರಾಮಕ್ಕೆ ಬಂದಿದ್ದಾಗಿ ದೃಢಪಟ್ಟಿದೆ.
ಆ ಮೇರೆಗೆ ಪೊಲೀಸರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಅವರ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಂಡಿದ್ದಾರೆ. ಆರೋಪಿ ಮಿಥುನ್ ಕಾರು ಚಾಲಕನಾಗಿದ್ದು; ಉರಕ್ಕಂ, ತ್ರಿಶೂರ್ ಜಿಲ್ಲೆ, ಕೇರಳ ನಿವಾಸಿ ಸಂತೋಷ್ ಎಂಬವರ ಪುತ್ರ. ಇನ್ನೋರ್ವ ಮನೋಜ್ ಕೇರಳದ ಚೇರಮಂಗಲಂ ಬಳಿ ನೆಮ್ಮಾರ್ ಗುಡ್ ಸಮಾರಿಟನ್ ಪಬ್ಲಿಕ್ ಶಾಲೆಯಲ್ಲಿ ಉಪನ್ಯಾಸಕನಾಗಿದ್ದು; ಆರೋಪಿಯ ಕೃತ್ಯಕ್ಕೆ ಸಹಕರಿಸಿರು ವದು ಖಾತರಿಯಾಗಿದೆ.
ಮೂರನೆಯ ಆರೋಪಿ ಅಬುತಾಹಿರ್ ಆಟೋ ಚಾಲಕನಾಗಿದ್ದು; ಚೇರಮಂಗಲ, ಪಾಲಕ್ಕಾಡ್ ಜಿಲ್ಲೆಯ ನಿವಾಸಿ, ಹಸೈನಾರ್ ಎಂಬವರ ಪುತ್ರ. ಅಲ್ಲದೆ ವಿನೋದ್ ಎಂಬಾತ ಟ್ಯಾಕ್ಸಿ ಚಾಲಕನಾಗಿದ್ದು; ನೇಮಾರ, ಚೇರಮಂಗಲಂ ನಿವಾಸಿಯಾಗಿದ್ದು; ಆರೋಪಿ ಮನೋಜ್, ಸಹೋದರ, ಅಲ್ಲದೆ ಈ ಮೂವರು ಪ್ರಮುಖ ಆರೋಪಿಯ ಸ್ನೇಹಿತರೆಂದು ತನಿಖೆ ವೇಳೆ ಗೊತ್ತಾಗಿದೆ.
ಆರೋಪಿಗಳಿಂದ ಝೈಲೋ ವಾಹನ, ಐಪಿಎಸ್ ಬೆಲ್ಟ್, ಐಪಿಎಸ್ ಬ್ಯಾರೆಟ್ ಕ್ಯಾಪ್, ಐಪಿಎಸ್ ಪೀಕ್ ಕ್ಯಾಪ್, 2 ಸೆರಮೋನಿಯಲ್ ಬೆಲ್ಟ್, ವಾಹನಕ್ಕೆ ಅಳವಡಿಸುವ ಸ್ಟಾರ್ ಮತ್ತು ಬಾವುಟ, ಫೈಬರ್ ಲಾಟಿ, ಐಪಿಎಸ್ ಅಧಿಕಾರಿ ಧರಿಸುವ ಸಮವಸ್ತ್ರ, ಬ್ರೌನ್ ಶೂಸ್ ಇತ್ಯಾದಿಗಳನ್ನು ವಶಪಡಿಸ ಕೊಳ್ಳಲಾಗಿ ತನಿಖೆ ಮುಂದುವರಿದಿದೆ.