* ಶಿವಜ್ಞಾನತೀರ್ಥ ಸ್ವಾಮೀಜಿ *ಸೋಮೇಶ್ವರಸ್ವಾಮಿ ದೇವಾಲಯ ಪ್ರವೇಶ ಮಹೋತ್ಸವ
ಒಡೆಯನಪುರ, ನ. 9: ಇಂದಿನ ಸಮುದಾಯ ತಾತ್ಕಾಲಿಕ ಸುಖದ ಭ್ರಮೆಯಲ್ಲಿ ಧಾರ್ಮಿಕ, ಸಂಸ್ಕಾರದ ಅಸ್ತಿತ್ವವನ್ನು ಕಳೆದುಕೊಂಡು ಬದುಕುತ್ತಿರುವದು ಸನ್ಮಾರ್ಗದ ಕಾಯಕವಾಗದು ಎಂದು ಅರಕಲಗೋಡು ಅರೆಮಾದನಳ್ಳಿ ಶ್ರೀ ವಿಶ್ವಕರ್ಮ ಬ್ರಾಹ್ಮಣ ಮಹಾಸಂಸ್ಥಾಪನಾಧೀಶ ಜಗ್ದುಗುರು ಶಿವಜ್ಞಾನತೀರ್ಥ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು. ಅವರು ಸಮೀಪದ ಅಂಕನಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಸೋಮೇಶ್ವರಸ್ವಾಮಿ ದೇವಾಲಯದ ಪ್ರವೇಶ ಮಹೋತ್ಸವ ಮತ್ತು ಶ್ರೀ ಸ್ವಾಮಿಯವರ ಲಿಂಗ ಪ್ರತಿಷ್ಠಾಪನೆ ಹಾಗೂ ನೂತನ ಶಿಖರ ಕಳಸ ಪ್ರತಿಷ್ಠಾಪನಾ ಮಹೋತ್ಸವ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜ ಸನ್ಮಾರ್ಗದಲ್ಲಿ ಸಾಗಬೇಕಾದರೆ ಮಠ-ಮಂದಿರ ದೇಗುಲಗಳ ಅಗತ್ಯ ಇರುತ್ತದೆ, ಧಾರ್ಮಿಕ ತಳಹದಿಯಲ್ಲಿ ಪ್ರತಿಯೊಬ್ಬರೂ ಜೀವನ ನಡೆಸಬೇಕಾಗುತ್ತದೆ ಈ ಉದ್ದೇಶದಿಂದ ಹಿಂದೆಯೇ ಗುರು-ಹಿರಿಯರ, ಶರಣರ ಮಾರ್ಗದರ್ಶನದಂತೆ ಮಠ-ಮಂದಿರಗಳು ಸ್ಥಾಪಿತಗೊಂಡಿವೆ ಎಂದರು. ಇಂದಿನ ಜನರು ಕೇವಲ ತಾತ್ಕಾಲಿಕ ಸುಖದ ಭ್ರಮೆಗೆ ಸಿಲುಕಿ ಆಧ್ಯಾತ್ಮಿಕ ಚಿಂತನೆ, ಭಯ-ಭಕ್ತಿ, ಸಂಸ್ಕಾರವನ್ನು ಮರೆಯುತ್ತಿದ್ದಾರೆ ಇದರಿಂದ ಸಮಾಜದಲ್ಲಿ ಸನ್ಮಾರ್ಗದ ಹಾದಿತಪ್ಪುತ್ತಿದೆ ಈ ನಿಟ್ಟಿನಲ್ಲಿ ಹಿರಿಯರು ಸಂಸ್ಕಾರ, ಆಧ್ಯಾತ್ಮಿಕ ಚಿಂತನೆಯನ್ನು ಮೈಗೂಡಿಸಿಕೊಂಡು ತಮ್ಮ ಮಕ್ಕಳಿಗೆ ಸಂಸ್ಕಾರದ ಮೌಲ್ಯಗಳನ್ನು ಕಲಿಸಿಕೊಡಬೇಕೆಂದರು. ಭಾರತ ಸಂಸ್ಕøತಿ, ಆಧ್ಯಾತ್ಮಿಕ ಮತ್ತು ಸಂಸ್ಕಾರದಲ್ಲಿ ವಿಶ್ವದಲ್ಲೇ ಶ್ರೀಮಂತ ರಾಷ್ಟ್ರವಾಗಿರುವದನ್ನು ನಾವೆಲ್ಲರೂ ಅರಿತುಕೊಂಡು ಧಾರ್ಮಿಕ ಮತ್ತು ಸಂಸ್ಕಾರದ ತಳಹದಿಯಲ್ಲಿ ಜೀವನ ಸಾಗಿಸುವಂತೆ ಸಲಹೆ ನೀಡಿದರು.
ಸಕಲೇಶಪುರದ ಯಡೆಹಳ್ಳಿ ಆರ್. ಮಂಜುನಾಥ್ ಧಾರ್ಮಿಕ ಉಪನ್ಯಾಸ ನೀಡುತ್ತಾ ಆಧ್ಯಾತ್ಮಿಕ ಚಿಂತನೆ, ಸಂಸ್ಕಾರ ಪ್ರತಿಯೊಬ್ಬರ ಜೀವನದ ಮೌಲ್ಯಗಳಾಗಿದ್ದು ಮಾನವೀಯ ಮೌಲ್ಯ, ಕುಟುಂಬದಲ್ಲಿನ ಸಂಬಂಧಗಳ ಮಹತ್ವ ಇವುಗಳು ಕಡಿಮೆಯಾದರೆ ಸಮಾಜ ಅಧೋಗತಿಯಾಗುತ್ತದೆ ಎಂದರು. ಇಂದಿನ ಯುವ ಜನಾಂಗದವರಲ್ಲಿ ಆಧ್ಯಾತ್ಮಕತೆಯ ಮಹತ್ವ, ಗುರು-ಹಿರಿಯರ, ಹೆತ್ತವರ ಮಹತ್ವ ಮುಂತಾದ ಸಂಬಂಧಗಳ ಮಹತ್ವದ ಬಗ್ಗೆ ತಾತ್ಸಾರ ಮನೋಭಾವನೆಯನ್ನು ಹೊಂದಿ ಹೆತ್ತವರನ್ನೆ ಕಡೆಗಣಿಸುತ್ತಿರುವದು ಕಳವಳಕಾರಿಯಾಗಿದೆ ಎಂದು ಹೇಳಿದರು.
ಇಂದಿನ ಬಹುತೇಕ ಪೋಷಕರು ತಮ್ಮ ಮಕ್ಕಳಿಗೆ ಧಾರ್ಮಿಕ, ಆಧ್ಯಾತ್ಮಿಕ ವಿಚಾರ, ಶರಣ-ಶರಣೆಯರ ಬಗ್ಗೆ, ವಚನ-ಪ್ರವಚನ ಮುಂತಾದ ಆಧ್ಯಾತ್ಮಿಕ, ಸಂಸ್ಕಾರ ಮತ್ತು ನೈತಿಕತೆ ಜ್ಞಾನ ಹೆಚ್ಚಿಸುವಂತಹ ವಿಚಾರವನ್ನು ತಿಳಿಸಿಕೊಡುವದಿಲ್ಲ. ಇದರಿಂದ ಮಕ್ಕಳು ಸಂಸ್ಕಾರವನ್ನು ಕಳೆದುಕೊಂಡು ಹೆತ್ತವರಿಗೆ ಮತ್ತು ಸಮಾಜಕ್ಕೆ ಮಾರಕವಾಗುವ ಜೀವನ ನಡೆಸುತ್ತಿದ್ದಾರೆ; ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಆದ್ಯಾತ್ಮಿಕ ಚಿಂತನೆಯೊಂದಿಗೆ ಹೆತ್ತವರು, ಗುರು-ಹಿರಿಯರನ್ನು ಗೌರವಿಸಿ ಸಂಸ್ಕಾರವಂತ ಜೀವನ ನಡೆಸುವಂತೆ ಕರೆ ನೀಡಿದರು.
ಕಲ್ಲುಮಠದ ಮಹಾಂತಸ್ವಾಮೀಜಿ ಮಾತನಾಡಿ, ದೇಗುಲ, ಗುಡಿ, ಗೋಪುರ ಮಠ-ಮಂದಿರಗಳು ಆಧ್ಯಾತ್ಮಿಕ ಸಂಸ್ಕøತಿಯ ಪ್ರತೀಕಗಳಾಗಿವೆ ಇದರಿಂದ ಸಮಾಜವು ಸಂಸ್ಕಾರಗೊಳ್ಳುತ್ತದೆ ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಆಧ್ಯಾತ್ಮಿಕ ಮನೋಭಾವನೆಯನ್ನು ಮೈಗೂಡಿಸಿಕೊಳ್ಳುವಂತೆ ಕರೆ ನೀಡಿದರು.
ಧಾರ್ಮಿಕ ಕಾರ್ಯಕ್ರಮದಲ್ಲಿ ತಿಪಟೂರಿನ ಉಪನ್ಯಾಸಕ ರೇಣುಕಯ್ಯ, ತಪೋವನ ಮನೆಹಳ್ಳಿ ಮಠದ ಮಹಾಂತ ಶಿವಲಿಂಗಸ್ವಾಮೀಜಿ, ಕಿರಿಕೊಡ್ಲಿ ಮಠದ ಸದಾಶಿವಸ್ವಾಮೀಜಿ, ಅರ್ಚಕ ಗುರು ಶಿವಲಿಂಗ ಶಾಸ್ತ್ರಿ ಮಾತನಾಡಿದರು. ದೇವಾಲಯ ಸಮಿತಿ ಅಧ್ಯಕ್ಷ ಮಲ್ಲೇಶ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು.