ಮಡಿಕೇರಿ, ನ. 10: ಪ್ರಸಕ್ತ ಕರ್ನಾಟಕ ರಾಜ್ಯ ಸರಕಾರವು ಟಿಪ್ಪುವಿನ ಜಯಂತಿ ರದ್ದು ಗೊಳಿಸಿ ಆದೇಶ ಹೊರಡಿಸಿರುವ ಬೆನ್ನಲ್ಲೇ ಕೊಡಗು ಜಿಲ್ಲೆಯ ಜನತೆ ಈ ಆಚರಣೆ ಕೈಬಿಟ್ಟಿದ್ದಾರೆ. ಇಂದು ಜಿಲ್ಲೆಯಲ್ಲಿ ಈದ್ ಮಿಲಾದ್ ಆಚರಣೆಯ ಹೊರತು; ಟಿಪ್ಪು ಜಯಂತಿ ಕೈಬಿಟ್ಟು; ಕಾನೂನು ಸುವ್ಯವಸ್ಥೆಯೊಂದಿಗೆ ಕೊಡಗಿನ ಶಾಂತಿ ಕಾಪಾಡುವಲ್ಲಿ ಸ್ಪಂದಿಸಿರುವ ಬಗ್ಗೆ; ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಪ್ರಶಂಸಿಸಿದ್ದಾರೆ.ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು; ಒಂದು ವಾರದಿಂದ ಜಿಲ್ಲಾಡಳಿತ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಉಭಯ ಸಮುದಾಯಗಳ ಸಭೆ ನಡೆಸಿ ಸೂಕ್ತ ನಿರ್ದೇಶನಗಳನ್ನು ಮುಖಂಡರಿಗೆ ನೀಡಿದ್ದಾಗಿ ನೆನಪಿಸಿದರು. ಅಲ್ಲದೆ ಸರಕಾರದ ಆದೇಶದಂತೆ ಮುಖ್ಯವಾಗಿ; ಅಯೋಧ್ಯೆಯ ಕುರಿತು ಸರ್ವೋಚ್ಚ ನ್ಯಾಯಾಲಯದ ತೀರ್ಪು ಹಿನ್ನೆಲೆ; ಈ ವೇಳೆಯಲ್ಲೇ ಟಿಪ್ಪು ಜಯಂತಿ; ಈದ್ ಮಿಲಾದ್ ಆಚರಣೆಯ ಸನ್ನಿವೇಶದ ಬಗ್ಗೆ ಸಂಬಂಧಪಟ್ಟವರು ಶಾಂತಿ ಕಾಪಾಡುವಂತೆ ಮನವರಿಕೆ ಮಾಡಿಕೊಡಲಾಗಿತ್ತು ಎಂದು ಗಮನ ಸೆಳೆದರು.ಮುಂಜಾಗ್ರತಾ ಕ್ರಮವಾಗಿ ನಿನ್ನೆ ಶಾಲಾ - ಕಾಲೇಜುಗಳಿಗೆ ರಜೆಯೊಂದಿಗೆ; 144 ಕಾಯ್ದೆಯಡಿ ನಿಷೇಧಾಜ್ಞೆ ಜಾರಿಗೊಳಿಸಿ ಸಾಕಷ್ಟು ಪೊಲೀಸ್ ನಿಯೋಜನೆ ಮಾಡಲಾಗಿತ್ತು. ಇಂದು ಮುಸ್ಲಿಮರು ಈದ್ ಮಿಲಾದ್ ಆಚರಣೆಯನ್ನು ಶಾಂತಿಯಿಂದ ಹಮ್ಮಿಕೊಳ್ಳಲು ಅವಕಾಶ ಕಲ್ಪಿಸಿದ್ದಲ್ಲದೆ; ಸರಕಾರದಿಂದ ಟಿಪ್ಪು ಜಯಂತಿ ರದ್ದಾಗಿರುವ ಬಗ್ಗೆ ಮನವರಿಕೆ ಮಾಡಿಕೊಡಲಾಗಿತ್ತು ಎಂದರು.
ಈ ಸಂದರ್ಭ ಕೊಡಗಿನ ಎಲ್ಲಾ ಸಮುದಾಯಗಳು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯೊಂದಿಗೆ ಸ್ಪಂದಿಸಿರುವದು ಪ್ರಶಂಸರ್ಹವೆಂದು ಅವರು ಮಾರ್ನುಡಿದರು.
ಎಲ್ಲೆಡೆ ಶಾಂತಿ : ಜಿಲ್ಲೆಯಲ್ಲಿ ಯಾರೂ ಟಿಪ್ಪು ಜಯಂತಿ ಇತ್ಯಾದಿ ಹಮ್ಮಿಕೊಳ್ಳದೆ; ಈದ್‍ಮಿಲಾದ್ ಹಬ್ಬವನ್ನು ಶಾಂತಿಯಿಂದ ಆಚರಿಸಿದ್ದು; ಸರ್ವೋಚ್ಚ ನ್ಯಾಯಾಲಯದಿಂದ ಅಯೋಧ್ಯೆಯ ಕುರಿತು ತೀರ್ಪಿಗೂ ಸಹಮತ ಹೊಂದಿರುವದು ಶ್ಲಾಘನೀಯ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಅಭಿಪ್ರಾಯ ನೀಡಿದ್ದಾರೆ. ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಅವರು ಕೆಲವೆಡೆ ತಾ. 11 ರಂದು (ಇಂದು) ಈದ್‍ಮಿಲಾದ್ ಹಮ್ಮಿಕೊಂಡಿದ್ದು; ಎಲ್ಲಾ ಸಂದರ್ಭಗಳಲ್ಲಿ ಕೊಡಗಿನ ಜನತೆ ಶಾಂತಿಪ್ರಿಯರೆಂದು ಖಾತರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.