ಮಡಿಕೇರಿ, ನ. 10 : ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಲು ಶಿಕ್ಷಣ ಸಹಕಾರಿಯಾಗಿದೆ. ಪ್ರತಿಯೊಬ್ಬರು ಶಿಕ್ಷಣವಂತರಾದರೆ ಸರ್ವತೋಮುಖ ಬೆಳವಣಿಗೆ ಸಾಧ್ಯ ಎಂದು ಬಾಳೆಲೆ ವಿಜಯಲಕ್ಷ್ಮಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಡಾ.ಜೆ ಸೋಮಣ್ಣ ಹೇಳಿದರು. ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿ ವತಿಯಿಂದ 2018-19ನೇ ಸಾಲಿನಲ್ಲಿ ವಿವಿಧ ಹಂತಗಳಲ್ಲಿ ಅತೀ ಹೆಚ್ಚು ಅಂಕಗಳಿಸಿ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಮಾತನಾಡಿದ ಅವರು, ದಲಿತ ಸಂಘರ್ಷ ಸಮಿತಿ ಶೋಷಿತ ವರ್ಗದ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದೆ. ಸಾಮಾಜಿಕ, ಶೈಕ್ಷಣಿಕ ಪ್ರಗತಿ ಸಾಧಿಸಬೇಕಾದರೆ ಡಾ.ಬಿ.ಆರ್ ಅಂಬೇಡ್ಕರ್ ಅವರ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಮದೆ ಮಹೇಶ್ವರ ಪದವಿಪೂರ್ವ ಕಾಲೇಜು ಉಪನ್ಯಾಸಕ ಸಿದ್ದರಾಜು ಬೆಳ್ಳಯ್ಯ ಮಾತನಾಡಿ, ಶಿಕ್ಷಣ ಒಂದು ಶಕ್ತಿ, ಅದರಿಂದ ಎಲ್ಲವೂ ಸಾಧ್ಯ. ಸಾಮಾಜಿಕ ಜಾಲತಾಣ, ಮೊಬೈಲ್ ಗೇಮ್ ಎಂದು ಕಾಲಹರಣ ಮಾಡದೆ ಪುಸ್ತಕ ಓದುವ ಹವ್ಯಾಸ ರೂಡಿಸಿಕೊಳ್ಳಬೇಕು. ದುಶ್ಚಟಗಳಿಗೆ ದಾಸರಾಗಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕೊಡಗು-ಮೈಸೂರು ದಸಂಸ ವಿಭಾಗೀಯ ಸಂಚಾಲಕ ಎನ್ ವೀರಭದ್ರಯ್ಯ ಮಾತನಾಡಿ, ದಲಿತರ, ಶೋಷಿತರ ಪರ ಸಂಘಟನೆ ಸದಾ ಹೋರಾಟ ರೂಪಿಸಿ ಧನಿಯಾಗಿ ಕೆಲಸ ಮಾಡುತ್ತಿದೆ. ಅಂಬೇಡ್ಕರ್ ಚಿಂತನೆ ಸಾಕಾರಗೊಳಿಸುವತ್ತ ಹೆಜ್ಜೆ ಇಟ್ಟಿದ್ದೇವೆ ಎಂದರು.
ದಸಂಸ ಜಿಲ್ಲಾ ಸಂಚಾಲಕ ಹೆಚ್.ಎಲ್ ದಿವಾಕರ್ ಮಾತನಾಡಿ, ಜಿಲ್ಲೆಗೆ ಸುಸಜ್ಜಿತ ಅಂಬೇಡ್ಕರ್ ಭವನದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ
(ಮೊದಲ ಪುಟದಿಂದ) ಸರ್ಕಾರದೊಂದಿಗೆ ವ್ಯವಹರಿಸು ತ್ತಿದ್ದೇವೆ. ಅಂಬೇಡ್ಕರ್ ಪ್ರತಿಮೆ ನಿರ್ಮಾಣಕ್ಕೆ ಒತ್ತಾಯಿಸಲಾಗಿದೆ. ಸರ್ಕಾರ ಅನುದಾನ ನೀಡದಿದ್ದರೆ ಜನರ ಸಹಕಾರದಿಂದ ಪ್ರತಿಮೆ ನಿರ್ಮಿಸುತ್ತೇವೆ. ಲೈನ್‍ಮನೆಗಳಲ್ಲಿ ವಾಸವಿರುವ ಶೋಷಿತ ಜನಾಂಗಗಳನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕಾರ್ಯೋನ್ಮುವಾಗಬೇಕೆಂದು ಒತ್ತಾಯಿಸಿದರು.
ವಿದ್ಯಾರ್ಥಿಗಳಿಗೆ ಸನ್ಮಾನ : ಎಸ್‍ಎಸ್‍ಎಲ್‍ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಜೀವಿತಾ, ಅರ್ಚನ, ಪ್ರಜ್ವಲ್, ಪ್ರೇಕ್ಷ, ಭಾವನಾ, ವಿದ್ಯಾ, ದ್ವಿತೀಯ ಪಿಯುಸಿಯಲ್ಲಿ ಚೇತನ್, ಚೈತ್ರ, ಸ್ಪೂರ್ತಿ, ಹೇಮಂತ್, ದೀಪಿಕಾ, ರಚನ, ಮಲ್ಲಿಗೆ, ನೇತ್ರವಾತಿ, ಗೌತಮಿ, ಗಣೇಶ್, ಪದವಿ ವಿಭಾಗದಲ್ಲಿ ರಶ್ಮಿತಾ, ಜ್ಯೋತಿ, ಉನ್ನತ ಕಾನೂನು ಶಿಕ್ಷಣದಲ್ಲಿ ಸುಮಿತ್ರ, ಪಿಹೆಚ್‍ಡಿ ಪದವೀದರೆ ದೀಪ ಹಾಗೂ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಬೆಕ್ಕೆಸೊಡ್ಲೂರು ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ ಬಸವರಾಜು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಉಪ ಮುಖ್ಯ ವೈದ್ಯಾಧಿಕಾರಿ ದೇವದಾಸ್, ಮಡಿಕೇರಿ ಪದವಿ ಕಾಲೇಜು ಉಪನ್ಯಾಸಕಿ ಕನ್ನಿಕಾ, ಮಡಿಕೇರಿ ತಾಲೂಕು ಸಂಘಟನಾ ಸಂಚಾಲಕ ಕೆ.ಕೆ ಗಣೇಶ್, ಪ್ರಮುಖರಾದ ದೀಪಕ್, ಶಿವಪ್ಪ, ದಾಮೋದರ್ ಸೇರಿದಂತೆ ಇನ್ನಿತರರು ಹಾಜರಿದ್ದರು.