ಮಡಿಕೇರಿ, ನ. 10: ನಗರ ಪೊಲೀಸ್ ಠಾಣಾ ಸರಹದ್ದಿನ ಕೆಎಸ್‍ಆರ್‍ಟಿಸಿ ಡಿಪೋ ಮುಂಭಾಗದ ಎಪಿಎಂಸಿ ಗೇಟಿನ ಬಳಿ ಕೇರಳ ರಾಜ್ಯದ ಲಾಟರಿ ಟಿಕೇಟನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವದಾಗಿ ಸಿಕ್ಕಿದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.ಮಂಗಳಾದೇವಿನಗರದ ವಿ.ಟಿ. ರಾಜು ಹಾಗೂ ದೇಚೂರು ನಿವಾಸಿ ಚೆನ್ನೇಗೌಡ ಎಂಬಿಬ್ಬರನ್ನು ಬಂಧಿಸಿ ಆರೋಪಿಗಳಿಂದ ರೂ. 3,520 ಮೌಲ್ಯದ 89 ಕೇರಳ ರಾಜ್ಯದ ಟಿಕೇಟ್‍ಗಳನ್ನು ಮತ್ತು ಆರೋಪಿಗಳ ವಶದಲ್ಲಿದ್ದ ರೂ. 7 ಸಾವಿರ ನಗದು ಹಣವನ್ನು ವಶಪಡಿಸಿಕೊಂಡು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಕಾರ್ಯಾಚರಣೆಯಲ್ಲಿ ಮಡಿಕೇರಿ ನಗರ ಪೊಲೀಸ್ ಠಾಣಾ ಉಪ ನಿರೀಕ್ಷಕ ಸದಾಶಿವ, ಪ್ರೊಬೇಷನರಿ ಪಿಎಸ್‍ಐ ಶೇಷಾದ್ರಿ ಕುಮಾರ್, ಮಡಿಕೇರಿ ನಗರ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಕೆ.ಕೆ. ದಿನೇಶ್, ಪ್ರವೀಣ್ ಬಿ.ಕೆ., ನಾಗರಾಜ್ ಕಡಗನ್ನವರ್, ಶರತ್ ರೈ, ಮನೋಜ್ ಮತ್ತು ನಂದಕುಮಾರ್ ಪಾಲ್ಗೊಂಡಿದ್ದರು.