ಮಡಿಕೇರಿ, ನ. 10: ಪ್ರವಾದಿ ಮಹಮ್ಮದ್ ಪೈಗಂಬರ್ ಅವರ 1494ನೇ ಜನ್ಮ ದಿನದೊಂದಿಗೆ ಇಂದು ಕೊಡಗಿನ 65 ಸ್ಥಳಗಳಲ್ಲಿ ಮುಸ್ಲಿಂ ಬಾಂಧವರು ಸಡಗರ-ಸಂಭ್ರಮದಿಂದ ಈದ್ ಮಿಲಾದ್ ಹಬ್ಬವನ್ನು ಆಚರಿಸಿದರು. ಎಲ್ಲೆಡೆ ಶಾಂತಿ ಪೂರ್ಣ ಮೆರವಣಿಗೆ, ಪ್ರಾರ್ಥನೆ ಮುಖಾಂತರ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.ಒಂದೆಡೆ ಅಯೋಧ್ಯೆಯ ಕುರಿತು ಸರ್ವೋಚ್ಚ ನ್ಯಾಯಾಲಯದ ತೀರ್ಪು ಹಾಗೂ ಇನ್ನೊಂದೆಡೆ ಕರ್ನಾಟಕ ಸರಕಾರದಿಂದ ಟಿಪ್ಪು ಜಯಂತಿ ರದ್ದುಗೊಂಡಿದ್ದ ಸನ್ನಿವೇಶದಲ್ಲಿ ಪೊಲೀಸ್ ಇಲಾಖೆಯಿಂದ ವ್ಯಾಪಕ ಬಂದೋಬಸ್ತ್ ನಡುವೆ ಯಾವದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಈದ್ ಮಿಲಾದ್ ನೆರವೇರಿತು.ದಕ್ಷಿಣ ಕೊಡಗಿನ 25ಕ್ಕೂ ಅಧಿಕ ಸ್ಥಳಗಳಲ್ಲಿ ಮುಸ್ಲಿಂ ಬಾಂಧವರು ಪ್ರಾರ್ಥನಾ ಮಂದಿರಗಳಲ್ಲಿ ಈ ಪ್ರಯುಕ್ತ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಪೊನ್ನಂಪೇಟೆ ವ್ಯಾಪ್ತಿಯ ಬೇಗೂರು ಕೊಲ್ಲಿ, ಹುದುಗೂರು ಮುಂತಾದೆಡೆಗಳಲ್ಲಿ ಧಾರ್ಮಿಕ ಮೆರವಣಿಗೆ, ಮಕ್ಕಳಿಗಾಗಿ ವಿವಿಧ ಪೈಪೋಟಿಯೊಂದಿಗೆ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.ಜಿಲ್ಲೆಯ ಐತಿಹಾಸಿಕ ಧಾರ್ಮಿಕ ಸ್ಥಳ ಎಮ್ಮೆಮಾಡು ಹಾಗೂ ಹಾಕತ್ತೂರು, ನಾಪೋಕ್ಲು ಸುತ್ತಮುತ್ತಲಿನ 9 ಕಡೆಗಳಲ್ಲಿ ಇಂದು ಈದ್ ಮಿಲಾದ್ ಪ್ರಯುಕ್ತ ಏರ್ಪಡಿಸಿದ್ದ ಧಾರ್ಮಿಕ ಮೆರವಣಿಗೆ, ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಸಮುದಾಯ ಬಾಂಧವರು ಭಾಗವಹಿಸಿ ಸಂಭ್ರಮಿಸಿ ದರು. ಅಂತೆಯೇ ಭಾಗಮಂಡಲ ವ್ಯಾಪ್ತಿಯ ಅಯ್ಯಂಗೇರಿ, ಚೆಟ್ಟಿಮಾನಿ ಮುಂತಾದೆಡೆಗಳಲ್ಲಿ ಐದು ಕಡೆ ಪ್ರಾರ್ಥನೆ, ಧಾರ್ಮಿಕ ಚಟುವಟಿಕೆಗಳು ನಡೆಯಿತು.ಉತ್ತರ ಕೊಡಗಿನ ಮಾದಾಪುರ, ಶನಿವಾರಸಂತೆ ಮತ್ತಿತರೆಡೆಗಳಲ್ಲಿ ಮುಸ್ಲಿಂ ಸಮುದಾಯದಿಂದ ವಿಶೇಷ ಪ್ರಾರ್ಥನೆ, ಧಾರ್ಮಿಕ ಮೆರವಣಿಗೆ, ದಫ್ ಪ್ರದರ್ಶನ ಸೇರಿದಂತೆ ಇತರ ಸಾಂಸ್ಕøತಿಕ ಚಟುವಟಿಕೆಗಳು ಜರುಗಿದವು. ಮುಸ್ಲಿಂ ಬಾಂಧವರು ಈದ್ ಮಿಲಾದ್ ಪ್ರಯುಕ್ತ ಪರಸ್ಪರ ಆಲಿಂಗನದೊಂದಿಗೆ ಶುಭಾಶಯ ಹಂಚಿಕೊಳ್ಳುತ್ತಿದ್ದ ದೃಶ್ಯವೂ ಎದುರಾಯಿತು. ಜಿಲ್ಲೆಯಲ್ಲಿ ಒಟ್ಟು 65 ಕಡೆಗಳಲ್ಲಿ ಈದ್ ಮಿಲಾದ್ ಆಚರಿಸಲ್ಪಟ್ಟಿದೆ ಎಂದು ಮಾಹಿತಿ ಲಭಿಸಿದೆ.

ಕುಶಾಲನಗರ: ಕುಶಾಲನಗರ ದಾರುಲ್ ಉಲೂಂ ಮದರಸಾ ಮತ್ತು ಹಿಲಾಲ್ ಮಸೀದಿ ಸಂಯುಕ್ತ ಆಶ್ರಯದಲ್ಲಿ ಈದ್ ಮಿಲಾದ್ ಪ್ರಯುಕ್ತ ಮಕ್ಕಳ ಸಾಂಸ್ಕøತಿಕ ಕಾರ್ಯಕ್ರಮ ಮತ್ತು ದಫ್ ಪ್ರದರ್ಶನ ನಡೆಯಿತು.

(ಮೊದಲ ಪುಟದಿಂದ)

ಮದರಸಾ ವಿದ್ಯಾರ್ಥಿಗಳು ಮತ್ತು ಮಸೀದಿಯ ಸದಸ್ಯರು 3 ದಿನಗಳ ಕಾಲ ನಡೆದ ಇಷ್ಕೇ ಮದೀನಾ ಕಾರ್ಯಕ್ರಮದ ಅಡಿಯಲ್ಲಿ ಈದ್ ಮಿಲಾದ್ ಆಚರಣೆಯಲ್ಲಿ ತೊಡಗಿಸಿಕೊಂಡರು. ಹಿಲಾಲ್ ಮಸೀದಿಯ ಅಧ್ಯಕ್ಷ ಇಸ್ಮಾಯಿಲ್ ಹಾಜಿ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಉದ್ಘಾಟನೆಗೊಂಡಿದ್ದು, ನಂತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಶುಕ್ರವಾರ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು. ಈದ್ ಮಿಲಾದ್ ಅಂಗವಾಗಿ ಕುಶಾಲನಗರದ ಮುಖ್ಯರಸ್ತೆಯಲ್ಲಿ ಮೆರವಣಿಗೆ ತೆರಳಿದ ವಿದ್ಯಾರ್ಥಿಗಳು ಮತ್ತು ಹಿಲಾಲ್ ಮಸೀದಿ ಸದಸ್ಯರು ದಾರುಲ್ ಉಲೂಂ ಮದರಸಾ ಸಭಾಂಗಣದಲ್ಲಿ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡರು.

ಹಿಲಾಲ್ ಮಸೀದಿಯ ಖತೀಬ ಸೂಫಿ ಧಾರಿಮಿ ಕಾರ್ಯಕ್ರಮ ಉದ್ಘಾಟಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ ಮಾಸ್ಟರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಪ್ರತಿಯೊಬ್ಬರೂ ಜೀವನವನ್ನು ಉತ್ತಮವಾಗಿ ಸಾಗಿಸಬೇಕು ಎಂದು ಕರೆ ನೀಡಿದರು.

ಶತಮಾನಗಳಿಂದ ವಿವಾದಕ್ಕೊಳಗಾಗಿದ್ದ ಅಯೋಧ್ಯಾ ಪ್ರಕರಣ ಇತ್ಯರ್ಥವಾಗಿದ್ದು, ಇದನ್ನು ಪ್ರತಿಯೊಬ್ಬರೂ ಗೌರವಿಸುವಂತಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇದೇ ಸಂದರ್ಭ ನಿವೃತ್ತ ಶಿಕ್ಷಕ ನಜೀರ್ ಮಾಸ್ಟರ್, ಪ್ರವಾದಿ ಮಹಮ್ಮದರು ಮಾನವ ಕುಲಕ್ಕೆ ನೀಡಿದ ಸಂದೇಶವನ್ನು ಮೈಗೂಡಿಸಿಕೊಂಡು ಧರ್ಮಬೇಧವಿಲ್ಲದೆ ಶಾಂತಿಯುತ ಬದುಕು ಕಾಣುವಂತಾಗಬೇಕು ಎಂದರು.

ಈ ಸಂದರ್ಭ ಪಪಂ ಸದಸ್ಯ ಖಲೀಮುಲ್ಲ, ವಕ್ಛ್ ಸದಸ್ಯ ತನ್ವೀರ್ ಅಹಮ್ಮದ್, ಹಿಲಾಲ್ ಮಸೀದಿ ಮಾಜಿ ಅಧ್ಯಕ್ಷ ಸಲೀಂ, ಅಹಮ್ಮದ್, ಇಬ್ರಾಹಿಂ ಹಾಜಿ ಮತ್ತು ವಿವಿಧ ಮಸೀದಿ ಕಮಿಟಿಗಳ ಪದಾಧಿಕಾರಿಗಳು ಇದ್ದರು.

ನಾಪೋಕ್ಲು: ಮಾನವೀಯ ಸಂದೇಶಗಳನ್ನು ಜಗಕ್ಕೆ ಸಾರಿದ ವಿಶ್ವ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ 1494ನೇ ಜನ್ಮ ದಿನದ ಈದ್ ಮಿಲಾದ್ ಅನ್ನು ನಾಪೋಕ್ಲುವಿನಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ನಾಪೋಕ್ಲುವಿನ ಹಿದಾಯತುಲ್ ಇಸ್ಲಾಂ ಮದ್ರಸ ವತಿಯಿಂದ ಈದ್ ಮಿಲಾದ್ ಅಂಗವಾಗಿ ಪಟ್ಟಣದ

ಮುಖ್ಯಬೀದಿಗಳಲ್ಲಿ ಜಾಥಾ ನಡೆಯತು. ಜಾಥಾದಲ್ಲಿ ಮದ್ರಸ ವಿದ್ಯಾರ್ಥಿಗಳ ದಫ್ ಪ್ರದರ್ಶನ ಗಮನ ಸೆಳೆಯಿತು. ಬಳಿಕ ಸಂತೆಮೈದಾನದಲ್ಲಿ ಮೆರವಣಿಗೆ ಸಂಪನ್ನಗೊಂಡಿತು. ಈ ಸಂದರ್ಭ ಮಿಲಾದ್ ಅಂಗವಾಗಿ ನೆರೆದಿದ್ದವರಿಗೆ ಅನ್ನಸಂತರ್ಪಣೆ ನೆರವೇರಿತು.

ನೆಲ್ಲಿಹುದಿಕೇರಿ: ದಾರುಸ್ಸಲಾಂ ಮದ್ರಸ ನೆಲ್ಲಿಹುದಿಕೇರಿಯಲ್ಲಿ ಮಸೀದಿ ಖತೀಬರ ನೇತೃತ್ವದಲ್ಲಿ ಮೌಲಿದ್ ಪಾರಾಯಣ ನಡೆಯಿತು. ಧ್ವಜಾರೋಹಣವನ್ನು ಮಸೀದಿ ಅಧ್ಯಕ್ಷ ಒಎಮ್ ಅಬ್ದುಲ್ಲ ಹಾಜಿ ಮಾಡಿದರು ಜಮಾಅತ್ ಸದಸ್ಯ ಲತೀಫ್ ಸ್ವಾಗತಿಸಿದರು. ವೇದಿಕೆಯಲ್ಲಿ ಕೆ.ಎಂ. ಬಶೀರ್ ಕೊಯ, ಎ.ಕೆ. ಹಕೀಂ ಮತ್ತು ಕಾರ್ಯದರ್ಶಿ ಅಶ್ರಫ್, ನಾಸಿರ್ ದಾರಿಮಿ, ಅಲವಿ ಉಸ್ತಾದ್, ಸಮದ್ ಮೌಲವಿ, ಹನೀಫ್ ಫೈಝಿ, ಮುಹಮ್ಮದ್ ಅಲಿ ಮೌಲವಿ, ತಮ್ಲೀಖ್ ದಾರಿಮಿ ಮುಂತಾದವರಿದ್ದರು.

ಸೋಮವಾರಪೇಟೆ: ಸೋಮವಾರಪೇಟೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ವಿವಿಧೆಡೆಗಳಲ್ಲಿ ಮುಸ್ಲಿಂ ಸಮುದಾಯದವರು ಈದ್‍ಮಿಲಾದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಹಬ್ಬದ ಅಂಗವಾಗಿ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು.

ಪಟ್ಟಣದ ಜಲಾಲಿಯಾ, ಬದ್ರಿಯಾ, ಬಜೆಗುಂಡಿಯ ಖಿಳಾರಿಯಾ, ಕಾಗಡಿಕಟ್ಟೆ, ತಣ್ಣೀರುಹಳ್ಳ, ಕಲ್ಕಂದೂರು ಸೇರಿದಂತೆ ಇತರೆಡೆಗಳಲ್ಲಿ ಈದ್ ಮಿಲಾದ್ ಆಚರಿಸಲಾಯಿತು.

ಕಲ್ಕಂದೂರಿನಲ್ಲಿ ಈದ್ ಪ್ರಯುಕ್ತ ಮೆರವಣಿಗೆ ನಡೆಯಿತು. ಮದ್ರಸಾದ ವಿದ್ಯಾರ್ಥಿಗಳು, ಸ್ಥಳೀಯ ಮುಸ್ಲಿಂ ಸಮುದಾಯದವರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಮುಯ್ಯದ್ದೀನ್ ಜುಮಾ ಮಸೀದಿಯ ಖತೀಬರಾದ ಸಮದ್ ಸಖಾಫಿ, ಮುಹಮ್ಮದ್ ಫೈಸಲ್ ಮಿಸ್ಬಾಯಿ, ಆಲಿ ಸಖಾಫಿ, ಅಧ್ಯಕ್ಷ ಇಬ್ರಾಹಿಂ, ಕಾರ್ಯದರ್ಶಿ ಅಬ್ದುಲ್ ರಹಮಾನ್, ಬದ್ರುಲ್ ಮುನೀರ್, ಯಾಕೂಬ್ ಹಾಜಿ, ಅಬ್ದುಲ್ ಸಲಾಂ, ಮಹಮ್ಮದ್ ಕುಂಞÂ ಸೇರಿದಂತೆ ಜಮಾತ್ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮಾದಾಪುರದ ಮಸೀದಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಸೀದಿ ಅಧ್ಯಕ್ಷ ಎಂ.ಯು. ಇಸಾಕ್ ವಹಿಸಿದ್ದರು. ಖತೀಬರಾದ ಬಸೀರ್ ಸಖಾಫಿ ಅವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯರಾದ ಎಂ.ಎ. ಮಜೀದ್, ಇಬ್ರಾಹಿಂ ಸೀದಿ, ಕೆ.ಎ. ಲತೀಫ್, ಮಸೀದಿ ಕಾರ್ಯದರ್ಶಿ ಉಬೈದುಲ್ಲಾ, ಉಪಾಧ್ಯಕ್ಷ ಕುಂಞÂ ಮೊೈದು, ಮಾಜೀ ಅಧ್ಯಕ್ಷ ಎ.ಬಿ. ಉಮ್ಮರ್, ಬಹರೈನ್ ಸಮಿತಿಯ ಅಬೂಬಕರ್, ಸ್ವಲಾತ್ ಕಮಿಟಿಯ ಅಧ್ಯಕ್ಷ ಎಂ.ಎಂ. ನಜೀರ್, ವಾಹನ ಚಾಲಕರ ಸಂಘದ ಅಧ್ಯಕ್ಷ ಹನೀಫ್ ಕೆ.ಎಂ., ಮಸೀದಿಯ ಖಜಾಂಚಿ ಶೇಕ್‍ಫೀರ್ ಅವರುಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಯುಕ್ತ ಮದ್ರಸಾದ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಈದ್‍ಮಿಲಾದ್ ಅಂಗವಾಗಿ ಪಟ್ಟಣದ ಮುಖ್ಯ ಬೀದಿಗಳಲ್ಲಿ ಈದ್ ಜಾಥಾ ನಡೆಯಿತು. ಮದ್ರಸಾದ ವಿದ್ಯಾರ್ಥಿಗಳು, ದಫ್ ತಂಡದವರು ಜಾಥಾದಲ್ಲಿ ಭಾಗವಹಿಸಿದ್ದರು.

ಬಜೆಗುಂಡಿ: ಬಜೆಗುಂಡಿಯ ಖಿಳಾರಿಯ ಮಸೀದಿಯಲ್ಲಿ ಈದ್ ಮಿಲಾದ್ ಹಬ್ಬವನ್ನು ಆರ್ಥ ಪೂರ್ಣವಾಗಿ ಆಚರಿಸಲಾಯಿತು. ಮಕ್ಕಳಿಂದ ದಫ್ ಹಾಗೂ ಧಾರ್ಮಿಕ ಪಠಣ ಸ್ಪರ್ಧೆ ನಡೆಯಿತು.

ಖತೀಬರಾದ ಹಂಸ ಮಿಸ್ಬಾಯಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ ಜಮಾಅತ್ ಅಧ್ಯಕ್ಷ ಕೆ.ಎ.ಯಾಕೂಬ್, ಪ್ರಧಾನ ಕಾರ್ಯದರ್ಶಿ ಕೆ.ಎಂ.ಸುಲೇಮಾನ್, ಉಪಾಧ್ಯಕ್ಷ ಹನೀಫ್, ಜಂಟಿ ಕಾರ್ಯದರ್ಶಿ ನಿಯಾಜ್, ಉಪಾಧ್ಯಕ್ಷ ಅಬ್ದುಲ್ ಖಾದರ್, ಸದಸ್ಯರಾದ ಮುಸ್ತಾಫ, ಮುನೀರ್, ಇಬ್ರಾಹಿಂ, ಮಜೀದ್ ಮತ್ತಿತರರು ಇದ್ದರು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಹೊಸತೋಟದಲ್ಲಿ: ತಾ. 11 ರಂದು ಮಧ್ಯಾಹ್ನ 2 ಗಂಟೆಯಿಂದ ಹೊಸತೋಟದ ಶಾದಿಮಹಲ್ ಆವರಣದಲ್ಲಿ ಈದ್‍ಮಿಲಾದ್ ಪ್ರಯುಕ್ತ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ, ತಾ. 12ರಂದು ಬೆಳಿಗ್ಗೆ 8 ರಿಂದ ಈದ್ ಸಂದೇಶ ಮೆರವಣಿಗೆ, ಬಟಕನಹಳ್ಳಿ ಖಬರಸ್ತಾನದಲ್ಲಿ ಪ್ರಾರ್ಥನೆ, ನಂತರ ಹೊಸತೋಟ ಬದ್ರಿಯಾ ಮಸೀದಿಯಲ್ಲಿ ಈದ್ ಕಾರ್ಯಕ್ರಮ ನಡೆಯಲಿದೆ.

ಕೊಟ್ಟಮುಡಿ: ಇಲ್ಲಿನ ದಾರುಲ್ ಉಲೂಂ ಸುನ್ನಿ ಮದ್ರಸ ವತಿಯಿಂಡ ಈದ್ ಮಿಲಾದ್ ರ್ಯಾಲಿ ನಡೆಯಿತು. ಕೊಟ್ಟಮುಡಿ ಮುಖ್ಯ ರಸ್ತೆಯಿಂದ ಕೇಮಾಡು ಜಂಕ್ಷನ್‍ವರೆಗೆ ರ್ಯಾಲಿ ನಡೆಯಿತು. ಎಲ್ಲ ಧರ್ಮದವರಿಗೆ ಸಿಹಿ ವಿತರಣೆ ಮಾಡಲಾಯಿತು. ಜಮಾಅತ್ ಅಧ್ಯಕ್ಷ ಹ್ಯಾರಿಸ್, ಖತೀಬರಾದ ಶಾಹಿದ್ ಸಖಾಫಿ, ಉಸ್ತಾದ್ ಮುಸ್ತಫ ಸಖಾಫಿ ನೇತೃತ್ವದಲ್ಲಿ ನಡೆಯಿತು.