ಮಡಿಕೇರಿ, ನ. 9: ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ಹುತಾತ್ಮರಾದ ಕೊಡಗಿನ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯಗೌಡ ಮತ್ತು ಕೆದಂಬಾಡಿ ರಾಮೇಗೌಡರ ಚರಿತ್ರೆಯನ್ನು ಪಠ್ಯಪುಸ್ತಕಗಳಲ್ಲಿ ದಾಖಲಿಸಲಾಗುವದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಕಟಿಸಿದ್ದಾರೆ.ಬೆಂಗಳೂರಿನಲ್ಲಿ ಚಾಮರಾಜ ಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಭಾರತ ಜ್ಞಾನಾಭಿವೃದ್ಧಿ ಟ್ರಸ್ಟ್ ಆಯೋಜಿಸಿದ್ದ ಅಮರ ಸುಳ್ಯ ಸಮರ -1837 ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.1837ನೇ ಸಾಲಿನಲ್ಲಿ ಅಮರ ಸುಳ್ಯ ಸಮರ ಎಂದೇ ಪ್ರಸಿದ್ಧವಾದ ಬ್ರಿಟಿಷರ ವಿರುದ್ಧ ಉಗ್ರವಾದ ಹೋರಾಟವನ್ನು ಮಾಡಿ ಅಪ್ಪಯ್ಯಗೌಡ, ರಾಮೇಗೌಡರು ಹುತಾತ್ಮರಾಗಿದ್ದಾರೆ. ಇವರ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಯ ಪಡಿಸುವದು ನಮ್ಮ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಪರಿಶೀಲಿಸಿ, ಇವರ ಬಗ್ಗೆ ಪಠ್ಯಪುಸ್ತಕಗಳಲ್ಲಿ ಅಳವಡಿಸಲು ಕ್ರಮ ಕೈಗೊಳ್ಳುವದಾಗಿ ಹೇಳಿದರು.

ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ, ಸಂಗೊಳ್ಳಿ ರಾಯಣ್ಣ, ಬಿದರೂರಿನ ದೊರೆಗಳು ಸೇರಿದಂತೆ ಅನೇಕ ಕನ್ನಡಿಗರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರೆ. ಅದರ ಜೊತೆಯಲ್ಲೇ ಅಪ್ಪಯ್ಯಗೌಡ, ಕೆದಂಬಾಡಿ ರಾಮೇಗೌಡ ಕೂಡ ಸೇರಿದ್ದಾರೆ. ಅವರು ಜನ ಸಂಘಟನೆ ಮಾಡಿ, ಹೋರಾಟ ಮಾಡಿದರು. ಅವರ ಬಗ್ಗೆ ಚರಿತ್ರೆಯಲ್ಲಿ ದಾಖಲಿಸುವ ಕೆಲಸ ಆಗಬೇಕು ಎಂದರು.

ಸ್ವಾತಂತ್ರ್ಯಕ್ಕಾಗಿ ಹಲವು ಜನ ಬಲಿದಾನ ಮಾಡಿದ್ದಾರೆ. ಅವರ ಬಗ್ಗೆಯೂ ಯುವ ಪೀಳಿಗೆಗೆ ಅರಿವಿಲ್ಲ. ಅದನ್ನು ತಲಪಿಸುವ ಕಾರ್ಯ ನಡೆಯ ಬೇಕಿದೆ. ಅನೇಕ ಸ್ವಾತಂತ್ರ್ಯ ಹೋರಾಟ ಗಾರರ ಬಗ್ಗೆ ಇತಿಹಾಸ ಪುಟದಲ್ಲಿ ಮಾಹಿತಿ ಇಲ್ಲ. ಅಂತಹವರನ್ನು ಇತಿಹಾಸ ಸೇರಿಸುವ ಕೆಲಸ ಆಗಬೇಕು ಎಂದು ಹೇಳಿದರು.

ಮಡಿಕೇರಿ, ಸುಳ್ಯವನ್ನು ಮದ್ರಾಸ್ ಪ್ರಾಂತ್ಯಕ್ಕೆ ಸೇರಿಸುವ ಯತ್ನ ನಡೆಯಿತು. ಅದರ ವಿರುದ್ಧ ರೈತರು ಬ್ರಿಟಿಷರ ವಿರುದ್ಧ ದಂಗೆ ಎದ್ದರು.

(ಮೊದಲ ಪುಟದಿಂದ) ಉಪ್ಪು, ತಂಬಾಕು ಉತ್ಪನ್ನಗಳ ಮೇಲೆ ತೆರಿಗೆ ವಿಧಿಸುವ ಕೆಲಸ ಮಾಡಿದರು. ಅನೇಕರು ಅವರ ವಿರುದ್ಧ ಹೋರಾಟ ಮಾಡಿದರು. ಕೆಲ ಹೋರಾಟ ವಿಷಯಗಳು ಚರಿತ್ರೆ ಪುಟದಲ್ಲಿ ಇಲ್ಲ. ಅದನ್ನು ಚರಿತ್ರೆಯಕಾರರು ಇತಿಹಾಸ ಪುಟ ಸೇರಿಸಬೇಕು ಎಂದು ಯಡಿಯೂರಪ್ಪ ನುಡಿದರು.

ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಮಾತನಾಡಿ, ವಾಸ್ತವವಾಗಿ ದೇಶದ ಸ್ವಾತಂತ್ರ್ಯ ಸಂದರ್ಭದಲ್ಲಿ ದೇಶಕ್ಕಾಗಿ ಬಲಿದಾನವಾದ ವ್ಯಕ್ತಿಗಳನ್ನು ಸ್ಮರಿಸುತ್ತಾರೆ. ಆದರೆ, ಅವರ ಆಶಯಗಳನ್ನು, ವಿಚಾರಧಾರೆಗಳನ್ನು ಜೊತೆಯಲ್ಲಿ ಕರೆದೊಯ್ಯುವ ಕೆಲಸ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಅಪ್ಪಯ್ಯಗೌಡರ ಹಾಗೂ ಕೊಡಗು ಹಾಗೂ ದಕ್ಷಿಣ ಕನ್ನಡದ ಸ್ವಾತಂತ್ರ್ಯ ಹೋರಾಟಗಾರರನ್ನು ನೆನೆದುಕೊಳ್ಳುತ್ತಾ ಕ್ರಾಂತಿಕಾರಿ ಸಂಗೊಳ್ಳಿ ರಾಯಣ್ಣ ಅವರ ಸಿನಿಮಾದಂತೆ ಅಮರ ಸುಳ್ಯ ದಂಗೆಯ ಸಿನಿಮಾವನ್ನು ಮಾಡಲು ಹಿರಿಯರಲ್ಲಿ ಕೇಳಿಕೊಂಡರು. ಸ್ಮಾರಕದ ಬಗ್ಗೆ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದರು. ರಾಜ್ಯಸಭಾ ಸದಸ್ಯ ಬಿ.ಸಿ. ಚಂದ್ರಶೇಖರ್ ಮಾತನಾಡಿ, ಹಿಂದಿನ ಹೋರಾಟಗಾರರ ಬಗ್ಗೆ ಮತ್ತೊಮ್ಮೆ ನೆನಪಿಸಿಕೊಂಡು ಅವರ ಹೋರಾಟ, ಬಲಿದಾನ, ಸಾಧನೆ ಬಗ್ಗೆ ಯುವಕರಿಗೆ ತಿಳಿಹೇಳಬೇಕು. ಬೆಂಗಳೂರು ಆಳಿದ ಕೆಂಪೇಗೌಡರು, ಕೊಡಗು ದಕ್ಷಿಣ ಕನ್ನಡ ಬಾಗದ ಅಪ್ಪಯ್ಯಗೌಡರ, ಕೆದಂಬಾಡಿ ರಾಮೇಗೌಡರ ವಿಷಯವನ್ನು ಪ್ರಸ್ತಾಪಿಸಿದರು. ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದ ಸ್ವಾಮಿ ಮಾತನಾಡಿ, ಒಕ್ಕಲಿಗ ನಾಯಕರ ಹಾಗೂ ದಕ್ಷಿಣಕನ್ನಡ ಕೊಡಗಿನ ಇತಿಹಾಸ ಹೇಳುವದರ ಮೂಲಕ ಸಮಾಜದಲ್ಲಿ ನಾವೆಲ್ಲರೂ ಸಮಾನರು; ಎಲ್ಲರೂ ಸ್ವಾವಲಂಬಿಗಳಾಗಬೇಕು. ಆತ್ಮಸ್ಥೈರ್ಯವನ್ನು ತುಂಬಿಕೊಂಡು ಮುನ್ನಡೆಯಬೇಕು ಎಂದರು. ಅಮರ ಸುಳ್ಯದ ಸಂಶೋಧಕ ದೇವಿಪ್ರಸಾದ್ ಮಾತನಾಡಿ, ತಾವು ಮಾಡಿದ ಸಂಶೋಧನೆ ಹಾಗೂ ಅದರ ಫಲ ವನ್ನು ಹೇಳಿದರು. ಮುಂದೆ ಆಗಬೇಕಾದ ವಿಚಾರಗಳ ಬಗ್ಗೆ ಮಾತನಾಡಿ ಹುಲಿ ಕೊಂದ ನಂಜಯ್ಯರ ಬಗ್ಗೆ ಹಾಗೂ ತಮ್ಮ ವಂಶದ ಬಗ್ಗೆ ಇದ್ದ ಇತಿಹಾಸವನ್ನು ಹೇಳಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯರಿಗೆ ಸನ್ಮಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯವಾಗಿ ಅಪ್ಪಯ್ಯ ಗೌಡರು, ಕೆದಂಬಾಡಿ ರಾಮೇಗೌಡರು, ಹುಲಿ ಕೊಂದ ನಂಜಯ್ಯ, ಅಮರ ಸುಳ್ಯ ದÀಂಗೆಯಲ್ಲಿ ಭಾಗವಹಿಸಿದ್ದವರು ಉಪಯೋಗಿಸುತ್ತಿದ್ದ ಯುದ್ಧ ಸಾಮಗ್ರಿಗಳು, ದಿನನಿತ್ಯದ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

ಮನವಿ

ಹುತಾತ್ಮ ಅಪ್ಪಯ್ಯಗೌಡ ಮತ್ತು ರಾಮೇಗೌಡರ ಪ್ರತಿಮೆಯನ್ನು ರಾಜಧಾನಿ ನವದೆಹಲಿಯಲ್ಲಿ ಸ್ಥಾಪಿಸಬೇಕು, ಅವರ ಹೆಸರಿನಲ್ಲಿ ಕನ್ನಡ ಭವನವನ್ನು ಸ್ಥಾಪಿಸಬೇಕು. ಬೆಂಗಳೂರಿನಲ್ಲಿರುವ ದಂಡುಪ್ರದೇಶದ ರೈಲು ನಿಲ್ದಾಣಕ್ಕೆ ನಾಮಕರಣ ಮಾಡಿ ರೈಲು ನಿಲ್ದಾಣದ ಮುಂದೆ ಅವರ ಕಂಚಿನ ಪ್ರತಿಮೆಯನ್ನು ಸ್ಥಾಪಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಭಾರತ ಜ್ಞಾನಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ತಲಕಾಡು ಚಿಕ್ಕರಂಗೇಗೌಡ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವಥ್ ನಾರಾಯಣ, ಸಚಿವ ಆರ್. ಅಶೋಕ್, ಕೊಡಗು ಗೌಡ ಸಮಾಜ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಪ್ರಮುಖರಾದ ಅಂಬೆಕಲ್ ನವೀನ್, ಕೆದಂಬಾಡಿ ರಾಜೇಶ್, ಪುತ್ತೂರ ಅನಂತರಾಜಗೌಡ, ಬದನೂರು ಪುಟ್ಟಸ್ವಾಮಿ ಮತ್ತಿತರರು ಇದ್ದರು.