ಮಡಿಕೇರಿ ನ.8 :ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾಕ್ಕೆ ಒಂದು ಕೋಟಿ ರೂಪಾಯಿ ಅನುದಾನವನ್ನು ರಾಜ್ಯ ಸರ್ಕಾರ ನೀಡಿದ್ದು, ದಸರಾ ಮಹೋತ್ಸವ ಮುಗಿದು ಒಂದು ತಿಂಗಳು ಕಳೆದರೂ ಹಣ ಹಂಚಿಕೆಯಾಗದೆ ಇರುವದರಿಂದ ದಸರಾದ ವಿವಿಧ ಸಮಿತಿಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ಜಿಲ್ಲಾ ಜಾತ್ಯತೀತ ಜನತಾದಳ ಆರೋಪಿಸಿದೆ.

ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ನೇತೃತ್ವದ ನಿಯೋಗ ಇಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರನ್ನು ಭೇಟಿಯಾಗಿ ಅನುದಾನ ಹಂಚಿಕೆ ಮಾಡುವಂತೆ ಮನವಿ ಮಾಡಿತು. ಮಡಿಕೇರಿ ದಸರಾದ ಆಕರ್ಷಣೆಯಾಗಿದ್ದ ದಶಮಂಟಪಗಳಿಗಾಗಿ ಲಕ್ಷಾಂತರ ಹಣ ಖರ್ಚಾಗಿದೆ. ಮಂಟಪ ಸಮಿತಿಗಳು ಮತ್ತು ಕಲಾವಿದರಿಗೆ ಹಣ ಪಾವತಿಯಾಗದೆ ಸಂಕಷ್ಟ ಎದುರಾಗಿದೆ. ದಶಮಂಟಪÀ ಸಮಿತಿಗಳು ಹೊರ ರಾಜ್ಯದಿಂದ ವಿದ್ಯುತ್ ಅಲಕೃಂತ ಬೋರ್ಡ್ ಮತ್ತು ಸ್ಟುಡಿಯೋ ಇನ್ನಿತರ ಕಲಾಕೃತಿಗಳಿಗೆ ಹಣವನ್ನು ಪಾವತಿ ಮಾಡಲು ಬಾಕಿ ಇದ್ದು, ಸಮಿತಿಯ ಸದಸ್ಯರು ಅಸಹಾಯಕರಾಗಿದ್ದಾರೆ ಎಂದು ಗಮನ ಸೆಳೆದ ಕೆ.ಎಂ.ಗಣೇಶ್, ತಕ್ಷಣ ಹಣ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.

ಸಂತ್ರಸ್ತರಿಗೆ ಅನ್ಯಾಯ : ಪ್ರಾಕೃತಿಕ ವಿಕೋಪದಿಂದ ನಿರಾಶ್ರಿತರಾದ ಹೆಮ್ಮೆತ್ತಾಳು ಗ್ರಾಮದ ನಿವಾಸಿಗಳಿಗೆ ನೂತನ ಮನೆ ನೀಡುವ ಉದ್ದೇಶದಿಂದ ತಯಾರಿಸಲಾಗಿದ್ದ ಮೊದಲ ಪಟ್ಟಿಯಲಿದ್ದ ಕೆಲವು ಸಂತ್ರಸ್ತರ ಹೆಸರುಗಳನ್ನು ಕೈಬಿಡಲಾಗಿದೆ ಎಂದು ಗಣೇಶ್ ಇದೇ ಸಂದರ್ಭ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು. ಒಂದೆಡೆ ಸ್ವಂತ ಮನೆಯನ್ನೂ ನೀಡದೆ, ಮತ್ತೊಂದೆಡೆ ಕಳೆದ ಮೂರು ತಿಂಗಳಿನಿಂದ ಮನೆ ಬಾಡಿಗೆಯನ್ನೂ ಪಾವತಿಸದೆ ಸಂತ್ರಸ್ತರನ್ನು ಸಂಕಷ್ಟಕ್ಕೆ ಸಿಲುಕಿಸಲಾಗಿದೆ ಎಂದು ಅವರು ಆರೋಪಿಸಿದರು.

ಪಟ್ಟಿಯಿಂದ ಕೈಬಿಡಲಾಗಿರುವ ಸಂತ್ರಸ್ತರ ಹೆಸರುಗಳನ್ನು ತಕ್ಷಣ ಸೇರ್ಪಡೆಗೊಳಿಸಬೇಕು, ನಿರಾಶ್ರಿತರಿಗಾಗಿ ನಿರ್ಮಿಸುತ್ತಿರುವ ಮನೆಗಳನ್ನು ಶೀಘ್ರ ಹಸ್ತಾಂತರಿಸಬೇಕು ಮತ್ತು ಅಲ್ಲಿಯವರೆಗೆ ಮನೆ ಬಾಡಿಗೆ ಹಣವನ್ನು ನೀಡಬೇಕೆಂದು ಮನವಿ ಮಾಡಿದರು.

ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೀಲಾಶೇಷಮ್ಮ, ಕಾರ್ಯದರ್ಶಿ ಎನ್.ಸಿ.ಸುನೀಲ್, ಸಂಘಟನಾ ಕಾರ್ಯದರ್ಶಿಗಳಾದ ಬೆಟ್ಟಗೇರಿ ಅಬ್ದುಲ್ಲ, ಬೊಳ್ಳಿಯಂಡ ಗಣೇಶ್, ಖಜಾಂಚಿ ಡೆನ್ನಿ ಬರೋಸ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶಾಂತಿ ಅಚ್ಚಪ್ಪ ಮತ್ತಿತರರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು.