ಸುಂಟಿಕೊಪ್ಪ,ನ.8: ಮಹಮ್ಮದ್ ಪೈಗಬರ್ ಅವರ 1494ನೇ ಜನ್ಮದಿನಾಚರಣೆ ಅಂಗವಾಗಿ ವಿವಿಧ ಮಸೀದಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದು ಮದರಸಗಳಲ್ಲಿ ಮೌಲವಿಗಳಿಂದ ಧಾರ್ಮಿಕ ಬೋಧನೆ ಏರ್ಪಡಿಸಲಾಗಿದೆ.

ಸುಂಟಿಕೊಪ್ಪ ಪಟ್ಟಣದಲ್ಲಿ ಈದ್‍ಮಿಲಾದ್ ಅಂಗವಾಗಿ ಮಸೀದಿ ಹಾಗೂ ಮದರಸಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದು, ತಾ. 10 ರಂದು ಸುನ್ನಿ ಮುಸ್ಲಿಂ ಜಮಯತ್, ಸುನ್ನಿಶಾಫಿ ಜುಮ್ಮ ಮಸೀದಿ, ನೂರಲ್ ಜುಮಾ ಮಸ್ಜಿದ್ ಗದ್ದೆಹಳ್ಳ ಹನಫಿ ಜಮಯತ್ ಮದ್ರಸಗಳಾದ ಮುನವ್ವರಲ್ ಇಸ್ಲಾಂ ಮದ್ರಸ, ಖತೀಜ ಉಮ್ಮ ಮದ್ರಸಗಳಲ್ಲಿ ವಿವಿಧ ಧಾರ್ಮಿಕ ಮೌಲವಿಗಳಿಂದ ಪ್ರಬೋಧನೆ ಹಾಗೂ ಮಕ್ಕಳಿಗೆ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

ಶನಿವಾರಸಂತೆ : ಪಟ್ಟಣದ ಹನಫಿ ಜಾಮಿಯಾ ಮಸೀದಿ ವತಿಯಿಂದ ಈದ್ ಮಿಲಾದ್ ಆಚರಣೆ ಹಾಗೂ ಸೌಹಾರ್ದ ಸಮಾವೇಶ ತಾ. 10 ರಂದು ನಡೆಯಲಿದೆ. ಬೆಳಿಗ್ಗೆ 10.30ಕ್ಕೆ ಗುಡುಗಳಲೆ ಬದ್ರಿಯಾ ಜುಮ್ಮಾ ಮಸೀದಿಯಿಂದ ಮುಖ್ಯ ರಸ್ತೆಯ ಮೂಲಕ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದವರೆಗೆ ಕಾಲ್ನಡಿಗೆ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ.

ಮಧ್ಯಾಹ್ನ 2.30ಕ್ಕೆ ಜಾಮೀಯ ಮಸೀದಿ ಸಭಾಂಗಣದಲ್ಲಿ ನಡೆಯುವ ಸಭಾ ಕಾರ್ಯಕ್ರಮವನ್ನು ಮಸೀದಿ ಧರ್ಮಗುರು ಮೌಲಾನ ತೌಸೀಫ್ ಅಹಮ್ಮದ್ ಉದ್ಘಾಟಿಸುತ್ತಾರೆ. ಮಸೀದಿ ಮಾಜಿ ಅಧ್ಯಕ್ಷ ಅಕ್ಮಲ್ ಪಾಶ ಅಧ್ಯಕ್ಷತೆ ವಹಿಸುತ್ತಾರೆ. ಯಸಳೂರು ತೆಂಕಲಗೂಡು ಬೃಹನ್ಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹಾಗೂ ಸೆಕ್ರೇಟ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ಪಾಧರ್ ಥೋಮಸ್ ಅಯನ್ ಲುಂಡಿ ಆಶೀರ್ವಚನ ನೀಡುತ್ತಾರೆ. ಹೊಸೂರು ಮಸೀದಿಯ ಧರ್ಮಗುರು ಷಾಪಿ ಸಅದಿ ಮುಖ್ಯ ಭಾಷಣ ಮಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಹೆಚ್. ಮಹಮ್ಮದ್ ಗೌಸ್, ಜಾಮೀಯ ಮಸೀದಿ ಅಧ್ಯಕ್ಷ ಕೆ.ಎಸ್. ಅಮೀರ್, ಗುಂಡೂರಾವ್ ಬಡಾವಣೆಯ ಮದೀನ ಮಸೀದಿಯ ಅಧ್ಯಕ್ಷ ಸೈಯದ್ ಅಹಮ್ಮದ್, ಬೀರಲಿಂಗೇಶ್ವರ ದೇವಸ್ಥಾನದ ಸಮಿತಿ ಅಧ್ಯಕ್ಷ ಶರತ್ ಶೇಖರ್, ಶ್ರೀರಾಮ ಮಂದಿರ ಸಮಿತಿ ಅಧ್ಯಕ್ಷ ರವಿ, ತ್ಯಾಗರಾಜ ಕಾಲೋನಿಯ ವಿಜಯ ವಿನಾಯಕ ಸೇವಾ ಸಮಿತಿ ಅಧ್ಯಕ್ಷ ಮಧು ಪಾಲ್ಗೊಳ್ಳುತ್ತಾರೆ.

ಸಾಧಕರಾದ ಡಾ. ಪುಟ್ಟರಾಜ್, ವೃತ್ತನಿರೀಕ್ಷಕ ನಂಜುಂಡೇಗೌಡ, ಜಾಮೀಯ ಮಸೀದಿ ಮಾಜಿ ಅಧ್ಯಕ್ಷ ಹಾಜಿ ಹಸೇನ್ ಸಾಹೇಬ್, ಚೆಸ್ಕಾಂ ನೌಕರ ಕೆ.ಎಲ್. ಗಿರೀಶ್ ಅವರನ್ನು ಸನ್ಮಾನಿಸಲಾಗವದು ಎಂದು ಜಾಮೀಯ ಮಸೀದಿ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

* ಶನಿವಾರಸಂತೆ: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮುಂಬರುವ ಈದ್ ಮಿಲಾದ್ ಹಬ್ಬದ ಆಚರಣೆ ಹಿನ್ನೆಲೆ ಸಾರ್ವಜನಿಕ ಸೌಹಾರ್ದ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಪಿಎಸ್‍ಐ ಕೃಷ್ಣ ನಾಯಕ್ ಮಾತನಾಡಿ, ಪ್ರತಿಯೊಂದು ಸಮುದಾಯದವರು ತಮ್ಮ ತಮ್ಮ ಹಬ್ಬಗಳನ್ನು, ಉತ್ಸವಗಳನ್ನು ಆಚರಿಸುತ್ತಾರೆ. ಅದು ಅವರ ಹಕ್ಕಾಗಿರುತ್ತದೆ. ಆಚರಣೆ ಸಂದರ್ಭ ಯಾವದೇ ಅಹಿತಕರ ಘಟನೆಗಳು ನಡೆಯಲು ಆಸ್ಪದ ಕೊಡಬಾರದು ಎಂಬ ಉದ್ದೇಶದಿಂದ ಪೊಲೀಸರು ಕರ್ತವ್ಯ ನಿರ್ವಹಿಸುತ್ತಾರೆ.

ಈದ್ ಮಿಲಾದ್ ಹಬ್ಬಾಚರಣೆ ಸಂದರ್ಭ ಮುಸ್ಲಿಂ ಸಮುದಾಯದವರು ಪೊಲೀಸರಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಅಲ್ಲದೇ ತಾ. 10 ರಂದು ಈದ್ ಮಿಲಾದ್ ಹಬ್ಬ ಆಚರಣೆ ಸಂದರ್ಭ ಟಿಪ್ಪು ಜಯಂತಿಯನ್ನು ಆಚರಿಸದಿರುವಂತೆಯೂ ಎಸ್‍ಐ ಕೃಷ್ಣನಾಯಕ್ ವಿವಿಧ ಸಮುದಾಯಗಳ ಮುಖಂಡರಲ್ಲಿ ವಿನಂತಿಸಿಕೊಂಡರು.

ವಿವಿಧ ಸಮುದಾಯಗಳ ಪ್ರಮುಖರು ಮಾತನಾಡಿ, ಪಟ್ಟಣದಲ್ಲಿ ಇಲ್ಲಿಯ ತನಕವೂ ಎಲ್ಲಾ ಧರ್ಮಗಳ ಹಬ್ಬ, ಇತರ ಉತ್ಸವಗಳಿಗೆ ಪರಸ್ಪರ ಸಹಕಾರ ನೀಡಲಾಗುತ್ತಿದೆ. ಈದ್ ಮಿಲಾದ್ ಆಚರಣೆಗೂ ಸಹಕಾರ ನೀಡುತ್ತೇವೆ ಎಂದು ತಿಳಿಸಿದರು. ಮುಸ್ಲಿಂ ಹಾಗೂ ಇತರ ಸಮುದಾಯದ ಮುಖಂಡರು, ಪೊಲೀಸ್ ಸಿಬ್ಬಂದಿ ಹಾಜರಿದ್ದರು.

ವೀರಾಜಪೇಟೆ: ವೀರಾಜಪೇಟೆ ತಾಲೂಕು ನಲ್ವತ್ತೊಕ್ಲು-ಚೋಕಂಡಳ್ಳಿ ಗ್ರಾಮದಲ್ಲಿ ಕಳೆದ ಹಲವು ವರ್ಷಗಳಿಂದ ಕಂದೂರಿ ಎಂಬ ಹೆಸರಿನಲ್ಲಿ ನಡೆಸಿಕೊಂಡು ಬರುತ್ತಿರುವ ಈದ್ ಮಿಲಾದ್ ಆಚರಣೆಯನ್ನು ತಾ. 16 ಮತ್ತು 17 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಯೋಜಿಸಲಾಗುವದೆಂದು ಈದ್ ಮಿಲಾದ್ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ ಪಿ.ಎ. ಬಶೀರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಸಮಿತಿಯ ಕಟ್ಟಡದ ಮುಂಭಾಗದಲ್ಲಿರುವ ಕೆ.ಎ.ಅಬ್ದುಲ್ ರಹಮಾನ್ ಅವರ ಜಾಗದಲ್ಲಿ ತಾ. 16 ರಂದು ಸಂಜೆ 4.30ಕ್ಕೆ ಈದ್ ಮಿಲಾದ್ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಕೆ.ಎಂ. ರಫಿ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದರು.

ಸಮಿತಿಯ ಕಾರ್ಯದರ್ಶಿ ಪಿ.ಎ. ಬಶೀರ್ ಅವರ ಸ್ವಾಗತ ಭಾಷಣದ ನಂತರ ಜನಾಬ್ ಜಿಯಾದ್ ಧಾರಿಮಿ ಮುದರ್ರಿಸ್ ತಳಿಪರಂಬು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ರಾತ್ರಿ 9 ಗಂಟೆಗೆ ಕೇರಳದ ಗಾಯಕ ಹಾರೀಸ್ ಕಲ್ತರ ಸಂಗಡಿಗರಿಂದ ‘ಪಕ್ಷಿಗಳ ಗೂಡಿನ ರಾಜಕುಮಾರಿ’ ಎಂಬ ಇಸ್ಲಾಮಿಕ್ ಕಥಾ ಪ್ರಸಂಗ ಜರುಗಲಿದೆ ಎಂದರು. ತಾ. 17 ರಂದು ಬೆಳಿಗ್ಗೆ 11 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಸಭಾ ಕಾರ್ಯಕ್ರಮವನ್ನು ಜುಮಾ ಮಸೀದಿಯ ಖತೀಬರಾದ ಜನಾಬ್ ಸಲಾಂ ಜುಹ್ರಿ ಉದ್ಘಾಟಿಸಲಿದ್ದಾರೆ. ಈದ್ ಮಿಲಾದ್ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಕೆ.ಎಂ. ರಫಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಜನಾಬ್ ನೌಫಲ್ ಸಖಾಫಿ ಕಳಸ ಭಾಗವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಉಪಖಾಝಿ ಜನಾಬ್ ಮಹಮಾದ್ ಮುಸ್ಲಿಯಾರ್, ಕೊಡಗು ಜಿಲ್ಲಾ ಉಪಖಾಜಿ ಜನಾಬ್ ಅಬ್ದುಲ್ಲ ಫೈಜಿ, ಕೆ.ಎಂ.ಎ. ಹಾಗೂ ರಿಫಾಯಿ ರಾತೀಬ್ ಸಮಿತಿ ಅಧ್ಯಕ್ಷ ದುಡ್ಡಿಯಂಡ ಸೂಫಿ ಹಾಜಿ, ಚೋಕಂಡಳ್ಳಿ ಜುಮಾ ಮಸೀದಿ ಅಧ್ಯಕ್ಷ ಪಟ್ಟಿಯೋಡ ಹನೀಫ್, ವೀರಾಜಪೇಟೆ ವೃತ್ತ ನೀರಿಕ್ಷ ಕ್ಯಾತೇಗೌಡ, ಕೊಂಡಗೇರಿ ಯತೀಂಖಾನ ಪ್ರಾಂಶುಪಾಲ ಕೆ.ಎಸ್. ಶಾದುಲಿ ಪೈಜಿ, ಬಿಳುಗುಂದ ಗ್ರಾಮ ಪಂಚಾಯಿತಿ ಸದಸ್ಯ ಚಿಲ್ಲಿಮಾಡ ಕಾವೇರಿಯಪ್ಪ, ಕೊಮ್ಮೆತೋಡು ಜುಮಾ ಮಸೀದಿ ಅಧ್ಯಕ್ಷ ಕೋಳುವಂಡ ಮೂಸಾನ್, ಕುತುಬಿಯತ್ ಸಮಿತಿ ಅಧ್ಯಕ್ಷ ದುಡ್ಡಿಯಂಡ ಅಬ್ದುಲ್ಲ ಹಾಜಿ, ಬಿಳುಗುಂದ ಹನಫಿ, ಜುಮಾ ಮಸೀದಿ ಅಧ್ಯಕ್ಷ ಖಲೀಮಲ್ಲಖಾನ್ ಬಿಳುಗುಂದ ಜುಮಾ ಮಸೀದಿ ಅಧ್ಯಕ್ಷ ಜಯಾವು ರಹಮಾನ್ ಹಾಗೂ ವಿವಿಧ ಧಾರ್ಮಿಕ ಪಂಡಿತರು, ಸಾಮಾಜಿಕ ನಾಯಕರು ಪಾಲ್ಗೊಳ್ಳಲಿದ್ದಾರೆ.

ಅಂದು ನೆರೆದ ಭಕ್ತಾದಿಗಳಿಗೆ ಅನ್ನದಾನ ನಡೆಯಲಿದ್ದು, ಸ್ತ್ರೀಯರಿಗೆ ಪ್ರತೇಕವಾದ ಸ್ಥಳ ಸೌಕರ್ಯವನ್ನು ಕಲ್ಪಿಸಲಾಗಿದೆ. ಭಕ್ತಾದಿಗಳು ಜಾತಿ, ಮತದÀ ಬೇಧವಿಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಪಿ.ಎ. ಬಶೀರ್ ಮನವಿ ಮಾಡಿದರು.

ಗೋಷ್ಠಿಯಲ್ಲಿ ಸಮಿತಿಯ ಸದಸ್ಯರುಗಳಾದ ಕೆ.ವೈ. ನಾಸೀರ್, ಪಿ.ಎ. ಅಬ್ದುಲ್ ಮಜೀದ್ ಹಾಗೂ ಕೆ.ಕೆ. ಜುಬೇರ್ ಉಪಸ್ಥಿತರಿದ್ದರು.