ಮಡಿಕೇರಿ, ನ. 8: ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯ ಮಾರ್ಗ ಸೂಚಿಗಳನ್ನು ಉಲ್ಲಂಘಿಸಿ; ಕೊಡಗು ಪಂಚಾಯತ್ ರಾಜ್ ಮಡಿಕೇರಿ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಎಲ್. ಶ್ರೀಕಂಠಯ್ಯ ಹಾಗೂ ಲೆಕ್ಕಾಧೀಕ್ಷಕ ಶ್ರೀಧರಮೂರ್ತಿ ಇವರಿಬ್ಬರು ಕರ್ತವ್ಯಲೋಪದೊಂದಿಗೆ ದುರ್ನಡತೆ ಎಸಗಿದ್ದಾರೆ ಎಂದು ರಾಜ್ಯ ಸರಕಾರದ ಸಂಬಂಧಿಸಿದ ಇಲಾಖೆಯ ಅಧೀನ ಕಾರ್ಯದರ್ಶಿ ಎಸ್. ರಂಗನಗೌಡ ಉಲ್ಲೇಖಿಸಿದ್ದಾರೆ.ಕೊಡಗು ಜಿಲ್ಲೆಯಲ್ಲಿ ಕುಡಿಯುವ ನೀರು ಮತ್ತು ರಸ್ತೆ ದುರಸ್ಥಿ ಕಾಮಗಾರಿಗಳನ್ನು ಕೈಗೊಳ್ಳಲು; ಸರಕಾರದಿಂದ ಪ್ರಕೃತಿ ವಿಕೋಪದಡಿ ಬಿಡುಗಡೆಯಾದ ಅನುದಾನದ ರೂ. 28 ಕೋಟಿಯ ಪೈಕಿ ರೂ. 21 ಕೋಟಿ ಮೊತ್ತವನ್ನು ಇಂಜಿನಿಯರ್ ಎಲ್. ಶ್ರೀಕಂಠಯ್ಯ ಹಾಗೂ ಲೆಕ್ಕಾಧೀಕ್ಷಕ ಶ್ರೀಧರ ಮೂರ್ತಿ ಇವರುಗಳು ಆಡಳಿತ ಇಲಾಖೆಯ ಅನುಮೋದನೆ ಪಡೆಯದೆ ಕೋಟಕ್ ಮಹೇಂದ್ರ ಬ್ಯಾಂಕ್ನಲ್ಲಿ ಉಳಿತಾಯ ಖಾತೆ ತೆರೆದು ಹಣ ಇರಿಸಿರುವದು ಗಂಭೀರ ಸ್ವರೂಪದ ಲೋಪವೆಂದು ಅಮಾನತು ಆದೇಶದಲ್ಲಿ ತಿಳಿಸಲಾಗಿದೆ.ಅಲ್ಲದೆ ಕರ್ನಾಟಕ ಸರಕಾರದ ಆರ್ಥಿಕ ಇಲಾಖೆಯ ಆದೇಶ ಸಂಖ್ಯೆ ಎಫ್.ಡಿ. 5 ಟಿ.ಎ.ಆರ್. 2017ರ ಅನುಸಾರ ಸರಕಾರದ ಅನುದಾನವನ್ನು ಸಾರ್ವಜನಿಕ ವಲಯದ ಬ್ಯಾಂಕ್ ಅಥವಾ ಖಾಸಗಿ ವಲಯಗಳ ಬ್ಯಾಂಕ್ಗಳಲ್ಲಿ ಠೇವಣಿ ಇಡಲು ಅವಕಾಶ ಇರುವದಿಲ್ಲ ಎಂದು; ಒಂದು ವೇಳೆ ಈ ರೀತಿ ಠೇವಣಿ ಇಡುವ ಅಗತ್ಯವಿದ್ದರೆ; ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆಯುವದು (ಮೊದಲ ಪುಟದಿಂದ) ಕಡ್ಡಾಯವೆಂದು ನೆನಪಿಸಲಾಗಿದೆ. ಮಾತ್ರವಲ್ಲದೆ ಈ ಹಗರಣದ ಕುರಿತು ಕೊಡಗು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಲಕ್ಷ್ಮೀಪ್ರಿಯ ಅವರು ಕಳೆದ ಅಕ್ಟೋಬರ್ 9 ರಂದು ಸರಕಾರಕ್ಕೆ ಸಲ್ಲಿಸಿರುವ ದೂರಿನ ಮೇರೆಗೆ ಈ ಕ್ರಮ ಜರುಗಿಸಲಾಗಿದೆ. ಇನ್ನು ಸಂಬಂಧಿಸಿದ ಅಮಾನತಿನಲ್ಲಿರುವ ಇಬ್ಬರು ಅಧಿಕಾರಿಗಳು; ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆಯದೆ ಕೇಂದ್ರ ಸ್ಥಾನ ಬಿಟ್ಟು ಹೋಗುವಂತಿಲ್ಲ; ಜೊತೆಗೆ ತಮ್ಮಿಬ್ಬರ ಜೀವನಾಧಾರ ಭತ್ಯೆಯನ್ನು ಪಡೆಯಲು ಅರ್ಹರಿದ್ದು; ಇವರುಗಳ ಹುದ್ದೆಯ ಹಕ್ಕನ್ನು ಪಂಚಾಯತ್ ರಾಜ್ ಇಲಾಖೆಯ ಮುಖ್ಯ ಇಂಜಿನಿಯರ್ ಅವರಿಗೆ ವರ್ಗಾಯಿಸಲಾಗಿದೆ ಎಂದು ಆದೇಶ ಹೊರಡಿಸಿದ್ದಾಗಿದೆ.