ಮಡಿಕೇರಿ, ನ. 8: ತಾ. 10 ರಂದು (ನಾಳೆ) ಮುಸ್ಲಿಂ ಸಮುದಾಯದಿಂದ ಈದ್‍ಮಿಲಾದ್ ಹಬ್ಬದ ಆಚರಣೆ ಹಾಗೂ ಶ್ರೀರಾಮ ಜನ್ಮಭೂಮಿ ಮತ್ತು ಬಾಬರಿ ಮಸೀದಿ ವಿವಾದದ ಕುರಿತು ಮುಂದಿನ ದಿನಗಳಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪು ಪ್ರಕಟಗೊಳ್ಳುವ ಹಿನ್ನೆಲೆ ಕೊಡಗು ಜಿಲ್ಲೆಯ ಜನತೆ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವ ಮೂಲಕ ಕಾನೂನು ಸುವ್ಯವಸ್ಥೆ ಕಾಪಾಡುವಂತಾಗಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಅವರು ಕೋರಿದ್ದಾರೆ. ಅಲ್ಲದೇ ಮುಂಜಾಗ್ರತಾ ಕ್ರಮವಾಗಿ ಆಯಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಭದ್ರತಾ ಕ್ರಮವಾಗಿ ಮತೀಯ ಗೂಂಡಾಗಳಿಗೆ ಕವಾಯತು ನಡೆಸುವ ಮೂಲಕ ಎಚ್ಚರಿಕೆ ನೀಡಲಾಗಿದೆ ಎಂದು ವಿವರಿಸಿದ್ದಾರೆ.
ಈ ಸಂಜೆ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ಮೂಲಕ ಈ ಸಂದೇಶ ರವಾನಿಸಿದ ಅವರು, ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ಮುಸ್ಲಿಂ ಸಮುದಾಯ ಸಾರ್ವಜನಿಕವಾಗಿ ಟಿಪ್ಪು ಜಯಂತಿ ಆಚರಿಸುವದಿಲ್ಲವೆಂದು, ಬದಲಾಗಿ ಆ ದಿನ ಈದ್‍ಮಿಲಾದ್ ಹಬ್ಬವನ್ನು ಸಾರ್ವತ್ರಿಕವಾಗಿ ಆಚರಿಸುತ್ತಿರುವದಾಗಿ ಭರವಸೆ ನೀಡಿರುವ ಮೇರೆಗೆ; ಪೊಲೀಸ್ ಇಲಾಖೆಯಿಂದ ಎಲ್ಲಾ ರೀತಿ ಸುರಕ್ಷ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಅಲ್ಲದೇ; ಈ ಸಂಬಂಧ ಕೊಡಗಿನ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕೆಲವು ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿದ್ದು, ಅಂತಹ ಕಡೆಗಳಲ್ಲಿ ವಿಶೇಷ ಗಸ್ತು, ಪಿಕೆಟಿಂಗ್, ವೀಡಿಯೋ ಗ್ರಾಪರ್‍ಗಳನ್ನು ಮುಂಜಾಗ್ರತ ಕ್ರಮವಾಗಿ ನಿಯೋಜಿಸಲಾಗಿದೆ. ಇದರೊಂದಿಗೆ ಸಮಾಜದ ಸ್ವಾಸ್ಥ್ಯ ಕೆಡಿಸುವ ಗೂಂಡಾಗಳು ಹಾಗೂ ಮತೀಯ ಗೂಂಡಾಗಳ ವಿರುದ್ಧ ಕಠಿಣ ಸಂದೇಶದೊಂದಿಗೆ, ಭದ್ರತಾ ಕಾಯ್ದೆ ಅಡಿಯಲ್ಲಿ 205 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅವರು ವಿವರಣೆಯಿತ್ತರು.
ಚೆಕ್ ಪೋಸ್ಟ್‍ಗಳಲ್ಲಿ ಕಟ್ಟೆಚ್ಚರ : ಕೊಡಗು ಜಿಲ್ಲೆಯಲ್ಲಿ ಈದ್‍ಮಿಲಾದ್ ಮತ್ತು ಶ್ರೀರಾಮ ಜನ್ಮಭೂಮಿ ವಿವಾದದ ತೀರ್ಪಿನ ಹಿನ್ನೆಲೆ ಜಿಲ್ಲೆಗೆ ಹೊಂದಿಕೊಂಡಿರುವ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳ 14 ಚೆಕ್‍ಪೋಸ್ಟ್‍ಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು; ಕೊಡಗನ್ನು ಪ್ರವೇಶಿಸುವ ಮತ್ತು ಹೊರ ಹೋಗುವ ಎಲ್ಲಾ ವಾಹನಗಳ ತಪಾಸಣೆಯನ್ನು ಕೈಗೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಮಾತ್ರವಲ್ಲದೆ ಕೇರಳದ ಕಣ್ಣೂರು, ವಯನಾಡು, ಕಾಸರಗೋಡು ಸೇರಿದಂತೆ ಹಾಸನ, ಮೈಸೂರು ಜಿಲ್ಲೆಗಳಿಗೆ ತೆರಳುವ ಮಾರ್ಗಗಳಲ್ಲಿ ಹೆಚ್ಚುವರಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸುರಕ್ಷಾ ಕ್ರಮವಾಗಿ ನಿಯೋಜಿಸಲಾಗಿದೆ ಎಂದು ಎಸ್‍ಪಿ ಸ್ಪಷ್ಟಪಡಿಸಿದರು.
ಈಗಾಗಲೇ ಪೊಲೀಸ್ ಇಲಾಖೆಯಿಂದ ಉಪ ಅಧೀಕ್ಷಕರು ಹಾಗೂ ಠಾಣಾಧಿಕಾರಿಗಳ ಹಂತದಲ್ಲಿ ವಿವಿಧ ಕೋಮುಗಳ ಮುಖಂಡರನ್ನು ಕರೆಸಿ ಸಭೆ ನಡೆಸುವ ಮೂಲಕ ಸಾಮರಸ್ಯದಿಂದ ವರ್ತಿಸುವಂತೆ ಸಲಹೆ ನೀಡಿರುವದಾಗಿ ಮಾಹಿತಿಯಿತ್ತರು.
ಜಾಲ ತಾಣದ ಮೇಲೆ ನಿಗಾ : ರಾಮಜನ್ಮಭೂಮಿ ವಿವಾದದ ತೀರ್ಪಿನ ಹಿನ್ನೆಲೆ ಅಥವಾ ಸಮಾಜದಲ್ಲಿ ಅಶಾಂತಿ ಹುಟ್ಟು ಹಾಕುವ ಯತ್ನದಿಂದ ಯಾರಾದರೂ ವಾಟ್ಸಾಪ್, ಫೇಸ್‍ಬುಕ್, ಟ್ವಿಟರ್ ಹಾಗೂ ಇನ್ನಿತರ ಸಾಮಾಜಿಕ ಜಾಲತಾಣಗಳಿಂದ ಯಾವದೇ ಪ್ರಚೋದನಕಾರಿ ಸಂದೇಶಗಳನ್ನು ನೀಡಬಾರದೆಂದು ಮುನ್ಸೂಚನೆ ನೀಡಿದ ಡಾ. ಸುಮನ್ ಅವರು, ಇಂತಹ ಕಾನೂನು ಬಾಹಿರ ಕೃತ್ಯಗಳನ್ನು ಎಸಗುವವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಅನುಸರಿಸಲಾಗುವದೆಂದು ಎಚ್ಚರಿಸಿದ್ದರು. ರಾಜಕೀಯ, ಧಾರ್ಮಿಕ ವಿಷಯಗಳು ಸೇರಿದಂತೆ ನಿಂದÀನೀಯ ಅಥವಾ ಆಕ್ಷೇಪಾರ್ಹ ಸಂದೇಶಗಳು, ವೀಡಿಯೋ, ಆಡಿಯೋ ಮುಖಾಂತರ ಹರಿಯಬಿಡುವವರ ವಿರುದ್ಧವೂ ಕಠಿಣ ಕ್ರಮ ತೆಗೆದುಕೊಳ್ಳಲಾಗುವದು ಎಂದರು.
ಹೊಸ ಕಾನೂನು : ಇಂತಹ ಸಾಮಾಜಿಕ ಜಾಲತಾಣಗಳ ದುರ್ಬಳಕೆಯೊಂದಿಗೆ ಯಾವದೇ ಅಪರಾಧಗಳು ನಡೆಯದಂತೆ ಹೊಸ ಕಾನೂನು ಜಾರಿಯಲ್ಲಿದ್ದು; ಕೊಡಗಿನ ಜನತೆ ಶಾಂತಿ ಸುವ್ಯವಸ್ಥೆಗಾಗಿ ಈ ನಿಯಮಗಳನ್ನು ಪಾಲಿಸುವದು ಅವಶ್ಯಕವೆಂದು ಅವರು ಕಳಕಳಿ ವ್ಯಕ್ತಪಡಿಸಿದರು. ಇತರೆಡೆಗೆ ಪೊಲೀಸ್ ಇದ್ದಾರೆ, ಕೊಡಗಿನ ಜನತೆ ಶಾಂತಿಪ್ರಿಯರಾಗಿದ್ದು; ಯಾವದೇ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಕೃತ್ಯಗಳಲ್ಲಿ ತೊಡಗುವದಿಲ್ಲವೆಂಬ ಆಶಾಭಾವನೆ ಇಲಾಖೆದ್ದಾಗಿದೆ ಎಂದು ಎಸ್‍ಪಿ ಮಾರ್ನುಡಿದರು.
ಪೊಲೀಸ್ ಸನ್ನದ್ಧ : ಈಗಾಗಲೇ ಜಿಲ್ಲೆಯಲ್ಲಿ ಯಾವದೇ ಪರಿಸ್ಥಿತಿಯನ್ನು ಎದುರಿಸುವ ಸದುದ್ದೇಶದಿಂದ ಹೆಚ್ಚುವರಿಯಾಗಿ 400 ಕರ್ನಾಟಕ ಪೊಲೀಸ್ ಮೀಸಲು ಸಿಬ್ಬಂದಿ ಸಹಿತ ಎಲ್ಲಾ ಕಟ್ಟೆಚ್ಚರದೊಂದಿಗೆ, ಹೆಚ್ಚಿನ ನಿಗಾ ವಹಿಸಲಾಗುತ್ತಿದ್ದು; ಅವಶ್ಯಕತೆಗೆ ತಕ್ಕಂತೆ ಪೊಲೀಸ್ ಇಲಾಖೆ ತನ್ನದೇ ಕ್ರಮ ಅನುಸರಿಸಲಿದೆ ಎಂದು ಅವರು ಸೂಚ್ಯವಾಗಿ ನುಡಿದರು.
ಅಣಕು ಪ್ರದರ್ಶನ : ಇಂದು ಜಿಲ್ಲೆಯಲ್ಲಿ ಯಾವದೇ ಪರಿಸ್ಥಿತಿಯನ್ನು ಎದುರಿಸುವ ಕ್ಷಮತೆಯೊಂದಿಗೆ ಪೊಲೀಸ್ ಕೇಂದ್ರ ಮೈದಾನದಲ್ಲಿ ವಿವಿಧ ರೀತಿಯ ಅಣಕು ಪ್ರದರ್ಶನ ನಡೆಯಿತು. ಪೊಲೀಸರು ಹಠಾತ್ ಎದುರಾಗಲಿರುವ ಬೆಂಕಿ ಅನಾಹುತ, ದೊಂಬಿಗಳನ್ನು ನಿಯಂತ್ರಿಸುವದು, ಪರಿಸ್ಥಿತಿ ಕೈಮೀರಿದಾಗ ಲಾಠಿ ಪ್ರಹಾರದೊಂದಿಗೆ ಅಶ್ರುವಾಯು ಅಥವಾ ಗೋಲಿಬಾರ್ ನಡೆಸುವ ಮೂಲಕ ಸನ್ನಿವೇಶವನ್ನು ಹತೋಟಿಗೆ ತರುವ ದಿಸೆಯಲ್ಲಿ ಅಣಕು ಪ್ರದರ್ಶನ ಮೂಲಕ ಗಮನ ಸೆಳೆದರು.
ಉನ್ನತ ಮಟ್ಟದ ಸಭೆ: ಇಂದು ಕೊಡಗು ಸೇರಿದಂತೆ ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಜಿಲ್ಲೆಗಳ ಪೊಲೀಸ್ ವರಿಷ್ಠರೊಂದಿಗೆ ಕರ್ನಾಟಕ ದಕ್ಷಿಣ ವಲಯ ಐಜಿಪಿ ವಿಪುಲ್‍ಕುಮಾರ್ ಅವರು ಸಭೆ ನಡೆಸುವ ಮೂಲಕ ಪ್ರಸಕ್ತ ದೇಶದ ಹಾಗೂ ಪ್ರಾದೇಶಿಕ ಸನ್ನಿವೇಶಗಳ ಬಗ್ಗೆ ಪೊಲೀಸ್ ಇಲಾಖೆ ಅನುಸರಿಸಬೇಕಾದ ಕ್ರಮಗಳ ಕುರಿತು ಸಭೆ ನಡೆಸಿದ್ದಾರೆ.