ಸೋಮವಾರಪೇಟೆ, ನ.6: ಸೋಮವಾರಪೇಟೆ ತಾಲೂಕು ಪತ್ರಕರ್ತರ ಸಂಘವು 20 ವರ್ಷ ಗಳನ್ನು ಪೂರೈಸುತ್ತಿದ್ದು, ಡಿಸೆಂಬರ್ ನಲ್ಲಿ ‘ಇಪ್ಪತ್ತರ ಸಂಭ್ರಮ’ ಕಾರ್ಯಕ್ರಮ ನಡೆಸಲು ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸ ಲಾಯಿತು.

ಸಂಘದ ಅಧ್ಯಕ್ಷ ಹೆಚ್.ಆರ್. ಹರೀಶ್‍ಕುಮಾರ್ ಅಧ್ಯಕ್ಷತೆಯಲ್ಲಿ, ಪತ್ರಿಕಾಭವನದಲ್ಲಿ ನಡೆದ ಸಮಿತಿ ಸಭೆಯಲ್ಲಿ ಸಂಭ್ರಮದ ಅಂಗವಾಗಿ ಸ್ಮರಣ ಸಂಚಿಕೆಯನ್ನು ಹೊರ ತರಲು ನಿರ್ಧರಿಸಲಾಯಿತು. ಇದರೊಂದಿಗೆ ತಾಲೂಕಿನ ಪತ್ರಕರ್ತರು ಹಾಗೂ ಕುಟುಂಬ ಸದಸ್ಯರಿಗೆ ಡಿಸೆಂಬರ್‍ನಲ್ಲಿ ವಿವಿಧ ಕ್ರೀಡಾಕೂಟ, ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲು ತೀರ್ಮಾನಿಸಲಾಯಿತು.

ಸ್ಮರಣ ಸಂಚಿಕೆಗೆ ತಾಲೂಕು ಪತ್ರಕರ್ತರ ಸಂಘದ ಸದಸ್ಯರುಗಳು ತಲಾ ಒಂದು ಲೇಖನವನ್ನು ಕಳುಹಿಸ ಬಹುದು. ಉಳಿದಂತೆ ತಾಲೂಕಿನ ಕವಿಗಳು ತಲಾ ಒಂದು ಕವನಗಳನ್ನು ಕಳುಹಿಸಬಹುದು. ಕವನಗಳು ಇಪ್ಪತ್ತು ಸಾಲು ಮೀರಬಾರದು. ಪತ್ರಕರ್ತರ ಲೇಖನಗಳು 600 ಪದಗಳು ಮೀರ ಬಾರದು. ಆಯ್ದ ಲೇಖನ ಮತ್ತು ಕವನಗಳನ್ನು ಸ್ಮರಣ ಸಂಚಿಕೆಯಲ್ಲಿ ಪ್ರಕಟಿಸಲಾಗುವದು ಎಂದು ಸಂಘದ ಅಧ್ಯಕ್ಷ ಹರೀಶ್‍ಕುಮಾರ್ ತಿಳಿಸಿದರು.

ಆಸಕ್ತ ಪತ್ರಕರ್ತರು ಮತ್ತು ಕವಿಗಳು ನ. 14ರೊಳಗೆ ತಮ್ಮ ಲೇಖನ, ಕವನಗಳನ್ನು ಪ್ರಧಾನ ಕಾರ್ಯದರ್ಶಿ, ಸೋಮವಾರಪೇಟೆ ತಾಲೂಕು ಪತ್ರಕರ್ತರ ಸಂಘ, ಪತ್ರಿಕಾ ಭವನ ಕಟ್ಟಡ, ಸೋಮವಾರಪೇಟೆ ಇಲ್ಲಿಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗೆ ಮೊ:9008346234 ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಪತ್ರಕರ್ತರ ಸಂಘದ ರಾಷ್ಟ್ರೀಯ ಮಂಡಳಿ ಸದಸ್ಯ ಮುರುಳೀಧರ್, ಜಿಲ್ಲಾ ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್. ಮಹೇಶ್, ತಾಲೂಕು ಸಂಘದ ಉಪಾಧ್ಯಕ್ಷ ಲೋಕೇಶ್‍ಸಾಗರ್, ಪ್ರ.ಕಾರ್ಯದರ್ಶಿ ವಿಜಯ್‍ಹಾನಗಲ್, ಖಜಾಂಚಿ ಬಿ.ಎ. ಭಾಸ್ಕರ್ ಸೇರಿದಂತೆ ನಿರ್ದೇಶಕರುಗಳು ಭಾಗವಹಿಸಿದ್ದರು.