*ಗೋಣಿಕೊಪ್ಪಲು, ನ. ೬: ಒಂದು ಕೋಟಿ ಹತ್ತು ಲಕ್ಷ ಅನುದಾನದಲ್ಲಿ ನಿರ್ಮಾಣವಾದ ಪರಿಶಿಷ್ಟ ಪಂಗಡ ಕಾಲೋನಿಗಳಿಗೆ ಸಂಪರ್ಕ ಕಲ್ಪಿಸುವ ಕಾಂಕ್ರಿಟ್ ರಸ್ತೆಗಳಿಗೆ ಶಾಸಕ ಕೆ.ಜಿ. ಬೋಪಯ್ಯ ಚಾಲನೆ ನೀಡಿದರು.
ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋಮ್ಮಾಡು ಗಿರಿಜನ ಕಾಲೋನಿಗೆ ಹೋಗುವ ಮಾರ್ಗಕ್ಕೆ ೨೦ ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡ ಕಾಂಕ್ರಿಟ್ ರಸ್ತೆ ಮತ್ತು ನಾಲ್ಕೇರಿ ಗ್ರಾ.ಪಂ. ವ್ಯಾಪ್ತಿಯ ಗಿರಿಜನ ಕಾಲೋನಿಗೆ ೨೦ ಲಕ್ಷ ಅನುಧಾನದಲ್ಲಿ ಅಭಿವೃದ್ಧಿಗೊಂಡ ಕಾಂಕ್ರಿಟ್ ರಸ್ತೆ ಕಾಮಗಾರಿ ಮತ್ತು ಚೆನ್ನಯ್ಯನಕೋಟೆ ಗ್ರಾ.ಪಂ. ವ್ಯಾಪ್ತಿಯ ದೆಯ್ಯದ ಕಾಲೋನಿಗೆ ೨೦ ಲಕ್ಷ ಮತ್ತು ಕೆಸುವಿನ ಕೆರೆ ಕಾಲೋನಿಗೆ ೨೫ ಲಕ್ಷ ಅನುದಾನದಲ್ಲಿ ನಿರ್ಮಾಣವಾದ ಕಾಂಕ್ರಿಟ್ ರಸ್ತೆಗೆ ಕುಟ್ಟ ಗ್ರಾ.ಪಂ. ವ್ಯಾಪ್ತಿಯ ಕೋದಮಲೆ ಕಾಲೋನಿಯಲ್ಲಿ ೨೫ ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ರಸ್ತೆಗಳನ್ನು ಕೆ.ಜಿ.ಬಿ. ಉದ್ಘಾಟಿಸಿದರು.
ನಂತರ ಮಾತನಾಡಿದ ಶಾಸಕರು ಪರಿಶಿಷ್ಟ ಪಂಗಡ ಕಾಲೋನಿಗೆ ಹಾದುಹೋಗುವ ರಸ್ತೆಗೆ ಬೇಡಿಕೆಯಿತ್ತು. ಇದನ್ನು ಮನಗಂಡು ರಸ್ತೆ ಅಭಿವೃದ್ಧಿಗೆ ಪೂರಕವಾಗಿ ಡಿ.ಎಸ್.ಪಿ ಯೋಜನೆಯಡಿ ರಸ್ತೆ ನಿರ್ಮಾಣಗೊಂಡಿದೆ. ಪರಿಶಿಷ್ಟ ಪಂಗಡದ ಕಾಲೋನಿಗಳಿಗೆ ವಿದ್ಯುತ್ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಗ್ರಾಮೀಣ ಭಾಗದ ರಸ್ತೆಗಳು ಹಲವು ವರ್ಷಗಳಿಂದ ಅಭಿವೃದ್ಧಿ ಕಂಡಿರಲಿಲ್ಲ. ಬಿ.ಜೆ.ಪಿ ಸರ್ಕಾರದ ಅವಧಿಯಲ್ಲಿ ಬಹಳಷ್ಟು ರಸ್ತೆಗಳು ಅಭಿವೃದ್ಧಿಗೊಂಡಿದೆ ಎಂದರು.
ಪ್ರಮುಖವಾದ ಕಾನೂರು, ಬಾಳೆಲೆ, ನಿಟ್ಟೂರು ರಸ್ತೆಗೂ ೪ ಕೋಟಿ ಅನುದಾನ ಬಿಡುಗಡೆಗೊಂಡಿದೆ. ಶೀಘ್ರದಲ್ಲೇ ರಸ್ತೆ ಕಾಮಗಾರಿ ನಡೆಯಲಿದೆ. ಅದೇ ರೀತಿ ಈ ಭಾಗದಲ್ಲಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸಾರಿಗೆ ಬಸ್ ಸಂಚಾರ ವ್ಯವಸ್ಥೆಯನ್ನು ಮಾಡಲಾಗುವದು. ಈಗಾಗಲೇ ಗ್ರಾಮೀಣ ಭಾಗದ ಸಂಚಾರ ವ್ಯವಸ್ಥೆಗಾಗಿ ೨೦ ಮಿನಿ ಬಸ್ಸುಗಳಿಗೆ ಪ್ರಸ್ತಾಪ ಮಾಡಲಾಗಿದೆ. ಮುಂದಿನ ದಿನದಲ್ಲಿ ಈ ವ್ಯವಸ್ಥೆಯೂ ಗ್ರಾಮೀಣ ಭಾಗದ ಜನರಿಗೆ ತಲಪಲಿದೆ. ಹಂತ ಹಂತವಾಗಿ ಜನರ ಬೇಡಿಕೆಗೆ ಅನುಗುಣವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವದು ಎಂದು ಭರವಸೆ ನೀಡಿದರು.
ತಾಲೂಕು ಬಿ.ಜೆ.ಪಿ ಮಂಡಳ ಅಧ್ಯಕ್ಷ ಕುಂಞAಗಡ ಅರುಣ್ ಭೀಮಯ್ಯ, ಜಿಲ್ಲಾ ವರ್ತಕ ಪ್ರಕೋಷ್ಟ ಪ್ರಮುಖ ಕಾಡ್ಯಮಾಡ ಗಿರೀಶ್ ಗಣಪತಿ, ತಾಲೂಕು ಪಂಚಾಯಿತಿ ಸದಸ್ಯ ಪ್ರಕಾಶ್, ಕಾನೂರು ಕೃಷಿ ಪತ್ತಿನ ಸಹಕಾರದ ಸಂಘದ ಅಧ್ಯಕ್ಷ ಅಳಮೇಂಗಡ ವಿವೇಕ್, ಆರ್.ಎಂ.ಸಿ. ಸದಸ್ಯ ಮಾಚಂಗಡ ಸುಜಾ ಬೋಪಣ್ಣ, ಬಿ.ಜೆ.ಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಕಾಡ್ಯಮಾಡ ಭರತ್ ಮಾಚು, ಗುತ್ತಿಗೆದಾರ ನಾಮೇರ ನವೀನ್, ಲೋಕೋಪಯೋಗಿ ಸಹಾಯಕ ಇಂಜಿನಿಯರ್ ಸಣ್ಣುವಂಡ ನವೀನ್, ವೀರಾಜಪೇಟೆ ತಾಲೂಕು ಫೆಡರೇಶನ್ ಅಧ್ಯಕ್ಷ ಮಚ್ಚಮಾಡ ಕಂದಾ ಭೀಮಯ್ಯ, ಲಕ್ಕುಂದ ಬೂತ್ ಸಮಿತಿ ಅಧ್ಯಕ್ಷ ಅಣ್ಣಳಮಾಡ ನವೀನ್ ಅಚ್ಚಯ್ಯ, ಪ್ರಮುಖರಾದ ಮುಕ್ಕಾಟೀರ ಸೋನು, ಮಾಣಿಪಂಡ ಮಂಜು ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.