ಕೂಡಿಗೆ, ನ. ೬: ವೀರಶೈವ ಲಿಂಗಾಯತ ಯುವ ವೇದಿಕೆಯಿಂದ ಕೂಡುಮಂಗಳೂರು ಗ್ರಾಮದಲ್ಲಿ ನೆರೆ ಸಂತ್ರಸ್ತನಿಗೆ ನಿರ್ಮಿಸಿಕೊಟ್ಟಿರುವ ನೂತನ ಮನೆ ಸಿದ್ಧಗಂಗಾ ನಿಲಯದ ಉದ್ಘಾಟನೆ ಮತ್ತು ಹಸ್ತಾಂತರ ಕಾರ್ಯಕ್ರಮ ನಡೆಯಿತು.
ವೀರಶೈವ ಲಿಂಗಾಯತ ಯುವ ವೇದಿಕೆ ರಾಜ್ಯಾಧ್ಯಕ್ಷ ಪ್ರಶಾಂತ್ ಕಲ್ಲೂರು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೋಮಶೇಖರ್ ಶಂಭುಲಿAಗಯ್ಯ ಕಲ್ಲೂರು ನೂತನ ಮನೆಯನ್ನು ಉದ್ಘಾಟಿಸಿದರು.
ದಿವ್ಯ ಸಾನಿಧ್ಯ ವಹಿಸಿದ್ದ ತುಮಕೂರಿನ ಸಿದ್ಧಗಂಗಾ ಮಠದ ಪೀಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ಸಂತ್ರಸ್ತ ಯೋಗೇಶ್‌ಗೆ ನೂತನ ಮನೆಯನ್ನು ಹಸ್ತಾಂತರಿಸಿದರು.
ದಿವ್ಯ ಸಾನಿಧ್ಯ ವಹಿಸಿ ಮಾತ ನಾಡಿದ ಸಿದ್ಧಲಿಂಗ ಮಹಾಸ್ವಾಮೀಜಿ, ಪ್ರತಿಯೊಬ್ಬರೂ ಕೂಡ ಕಷ್ಟಕಾಲದಲ್ಲಿ ಪರಸ್ಪರ ನೆರವಾಗುವ ಗುಣಗಳನ್ನು ಮೈಗೂಡಿಸಿಕೊಂಡಲ್ಲಿ ಸುಂದರ ಸಮಾಜನಿರ್ಮಾಣ ಸಾಧ್ಯ ಎಂದರು.
ಸಿದ್ಧಗಂಗಾ ಮಠದ ಸಮಾಜಮುಖಿ ಚಿಂತನೆ, ಆಶಯಗಳನ್ನು ಮೈಗೂಡಿಸಿಕೊಂಡರೆ ಬದುಕು ಸಾರ್ಥಕವಾಗುತ್ತದೆ. ಕೊಡಗು ಜಿಲ್ಲೆಯ ಗಡಿಭಾಗ ಕಾವೇರಿ ತಟದಲ್ಲಿ ಸಿದ್ಧಗಂಗಾ ಶ್ರೀಗಳ ಕಂಚಿನ ಪುತ್ಹಳಿ ನಿರ್ಮಾಣವಾಗಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು. ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವೀರಾಜಪೇಟೆ ಅರಮೇರಿ ಕಳಂಚೇರಿ ಮಠಾಧೀಶ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ, ತೊರೆನೂರು ವಿರಕ್ತ ಮಠದ ಮಲ್ಲೇಶ ಸ್ವಾಮೀಜಿ, ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ, ಕಲ್ಲಳ್ಳಮಠದ ರುದ್ರಮುನಿ ಮಹಾಸ್ವಾಮೀಜಿ, ದುಂಡಳ್ಳಿಯ ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಕೊಡ್ಲಿಪೇಟೆಯ ಸಿದ್ಧಲಿಂಗ ಸ್ವಾಮೀಜಿ, ಶಿಡಿಗಳಲೆ ಮಠದ ಶ್ರೀ ಇಮ್ಮಡಿ ಶಿವಲಿಂಗ ಸ್ವಾಮೀಜಿ, ಮನೆಹಳ್ಳಿ ಮಠದ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿಗಳು, ವೀರಶೈವ ಲಿಂಗಾಯತ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ಕವನ ಬಸವಕುಮಾರ್, ಸ್ಥಳೀಯ ಪ್ರಮುಖರಾದ ಪ್ರಶಾಂತ್, ಮಂಜು, ಎಚ್.ವಿ. ಶಿವಪ್ಪ, ಜಿ.ಪಂ. ಸದಸ್ಯೆ ಮಂಜುಳಾ, ತಾ.ಪಂ. ಸದಸ್ಯ ಗಣೇಶ್, ಸಂತ್ರಸ್ತ ಯೋಗೇಶ್ ಕುಮಾರ್, ಸ್ಥಳೀಯ ಜನಪ್ರತಿನಿಧಿಗಳು, ಪ್ರಮುಖರು ಇದ್ದರು.