ಮಡಿಕೇರಿ, ನ. 6: ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ ಯಡಿ ಮೊದಲ ಪ್ರಸವದ ಗರ್ಭಿಣಿ ಮಹಿಳೆಯರಿಗೆ ರೂ.5 ಸಾವಿರ ಪ್ರೋತ್ಸಾಹ ಧನವನ್ನು ಮೂರು ಕಂತುಗಳಲ್ಲಿ ನೇರ ನಗದು ವರ್ಗಾವಣೆಯ ಮೂಲಕ ಫಲಾನುಭವಿಯ ಬ್ಯಾಂಕ್ ಜತೆಗೆ ವರ್ಗಾಯಿಸಲಾಗುವದು. ಸರ್ಕಾರಿ ಹಾಗೂ ಅರೆ ಸರ್ಕಾರಿ ಮಹಿಳಾ ನೌಕರರನ್ನು ಹೊರತುಪಡಿಸಿ ಉಳಿದ ಎಲ್ಲಾ ಮೊದಲ ಪ್ರಸವದ ಗರ್ಭಿಣಿ ಮಹಿಳೆಯರು ಈ ಸೌಲಭ್ಯ ಪಡೆಯಬಹುದಾಗಿದೆ. ನೋಂದಣಿಗೆ ನಿಗದಿಪಡಿಸಿದ ಅರ್ಜಿ ನಮೂನೆಗಳು ಅಂಗನವಾಡಿ ಕೇಂದ್ರಗಳಲ್ಲಿ ಉಚಿತವಾಗಿ ದೊರೆಯುತ್ತದೆ. ಭರ್ತಿ ಮಾಡಿದ ಅರ್ಜಿಯೊಂದಿಗೆ ತಾಯಿ ಮತ್ತು ಮಗುವಿನ ಸುರಕ್ಷತ ಕಾರ್ಡ್, ಫಲಾನುಭವಿಯ ಹಾಗೂ ಪತಿಯ ಆಧಾರ್ ಕಾರ್ಡ್ ಪ್ರತಿ ಹಾಗೂ ಫಲಾನುಭವಿಯ ಬ್ಯಾಂಕ್ ಖಾತೆಯ ವಿವರಗಳೊಂದಿಗೆ ಸಂಬಂಧಿಸಿದ ಅಂಗನವಾಡಿ ಕೇಂದ್ರಗಳಿಗೆ ಸಲ್ಲಿಸಬಹುದಾಗಿದೆ ಎಂದು ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.