ಗೋಣಿಕೊಪ್ಪ ವರದಿ, ನ. 6: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಯುವ ಒಕ್ಕೂಟ, ವೀರಾಜಪೇಟೆ, ಮಡಿಕೇರಿ, ಸೋಮವಾರಪೇಟೆ ತಾಲೂಕು ಯುವ ಒಕ್ಕೂಟಗಳ ಸಹಯೋಗದಲ್ಲಿ ತಾ.10 ರಂದು ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಆವರಣ ದಲ್ಲಿ ಜಿಲ್ಲಾ ಮಟ್ಟದ ಯುವಜನ ಮೇಳ ಆಯೋಜಿಸಲಾಗಿದೆ ಎಂದು ಯುವ ಒಕ್ಕೂಟದ ಅಧ್ಯಕ್ಷ ಪಿ. ಪಿ. ಸುಕುಮಾರನ್ ತಿಳಿಸಿದ್ದಾರೆ.
ಒಂದು ದಿನದ ಕಾರ್ಯಕ್ರಮ ದಲ್ಲಿ ಯುವಕ, ಯುವತಿಯರಿಗೆ ವಿವಿಧ ಸ್ಪರ್ಧೆಗಳಿದ್ದು, 15 ರಿಂದ 45 ವರ್ಷದವರು ಪಾಲ್ಗೊಳ್ಳಬಹು ದಾಗಿದೆ. 11 ಸ್ಪರ್ಧೆಗಳಿವೆ. ಒಂದು ಸಂಘದಿಂದ ಒಂದು ಸ್ಪರ್ಧೆಗೆ ಒಂದು ತಂಡ ಪಾಲ್ಗೊಳ್ಳಬಹುದಾಗಿದೆ. ಕ್ಯಾಸೆಟ್ ಹಾಡುಗಳಿಗೆ ಅವಕಾಶವಿಲ್ಲ. ಜಾನಪದ ಶೈಲಿಯ ಸ್ಪರ್ಧೆಗಳಿಗೆ ಜಾನಪದ ಶೈಲಿಯ ಉಡುಗೆ ಕಡ್ಡಾಯವಾಗಿರು ತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಯುವತಿಯರಿಗೆ ಪ್ರತ್ಯೇಕವಾಗಿ ಜೋಳ, ರಾಗಿ ಬೀಸುವ ಪದ ಮತ್ತು ಸೋಬಾನೆ ಪದ ಸ್ಪರ್ಧೆ ಇದೆ. ಜೋಳರಾಗಿ ಬೀಸುವ ಸ್ಪರ್ಧೆಗೆ (3 ನಿಮಿಷ) 2 ಜನರ ತಂಡ, ಸೋಬಾನೆ ಸ್ಪರ್ಧೆಗೆ (5 ನಿಮಿಷ) 4 ಜನರ ತಂಡ ಪಾಲ್ಗೊಳ್ಳಬಹುದಾಗಿದೆ ಎಂದು ತಿಳಿಸಿದರು.
ಯುವಕ, ಯುವತಿಯರಿಗೆ ವೈಯಕ್ತಿಕ ಹಾಗೂ ಗುಂಪು ಸ್ಪರ್ಧೆ ಇದೆ. ವೈಯಕ್ತಿಕ ವಿಭಾಗದಲ್ಲಿ 3 ನಿಮಿಷದ ಅವಧಿಯಲ್ಲಿ ಭಾವಗೀತೆ, 4 ನಿಮಿಷದ ಅವಧಿಯ ಲಾವಣಿ, 3 ನಿಮಿಷದ ಅವಧಿಯಲ್ಲಿ ರಂಗಗೀತೆ, 5 ನಿಮಿಷದ ಅವಧಿಯಲ್ಲಿ ಏಕಪಾತ್ರಾಭಿನಯ, ಗುಂಪು ಸ್ಪರ್ಧೆಯಲ್ಲಿ 4 ನಿಮಿಷ ಅವಧಿಯ 5 ಜನರ ತಂಡದ ಗೀಗಿ ಪದ, 6 ನಿಮಿಷದ ಅವಧಿಯ 12 ಜನರ ತಂಡದ ಕೋಲಾಟ, 10 ನಿಮಿಷ ಅವಧಿಯ 12 ಜನರ ಜಾನಪದ ನೃತ್ಯ, 10 ನಿಮಿಷ ಅವಧಿಯ 8 ಜನರ ಭಜನೆ, 4 ನಿಮಿಷದ 6 ಜನರ ಜನಪದ ಗೀತೆ ಸ್ಪರ್ಧೆಗಳಿವೆ ಎಂದು ಅವರು ತಿಳಿಸಿದರು. ಹೆಚ್ಚಿನ ಮಾಹಿತಿಗೆ 9481213920, 9945794414 ಸಂಖ್ಯೆಯಲ್ಲಿ ಸಂಪರ್ಕಿಸಬಹುದಾಗಿದೆ. ಗೋಷ್ಠಿಯಲ್ಲಿ ಯುವ ಒಕ್ಕೂಟ ಮಾಜಿ ಅಧ್ಯಕ್ಷ ಕಂದಾ ದೇವಯ್ಯ, ವಿರಾಜಪೇಟೆ ತಾಲೂಕು ಯುವ ಒಕ್ಕೂಟ ಅಧ್ಯಕ್ಷೆ ಶೀಲಾ ಬೋಪಣ್ಣ, ನಿಸರ್ಗ ಯುವತಿ ಮಂಡಳಿ ಅಧ್ಯಕ್ಷೆ ರೇಖಾ ಶ್ರೀಧರ್ ಉಪಸ್ಥಿತರಿದ್ದರು.