ಸೋಮವಾರಪೇಟೆ, ನ. ೬: ಸೋಮವಾರಪೇಟೆ ತಾಲೂಕು ಒಕ್ಕಲಿಗರ ಸಂಘವು ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದ್ದು, ಇದರ ನೆನಪಿಗಾಗಿ ಈಗಾಗಲೇ ಸುವರ್ಣ ದ್ವಾರ ನಿರ್ಮಾಣಗೊಂಡಿದೆ. ಜನವರಿ ತಿಂಗಳಿನಲ್ಲಿ ಸುವರ್ಣ ಮಹೋತ್ಸವ ಸಮಾರಂಭ ನಡೆಸಲು ತೀರ್ಮಾನಿಸ ಲಾಗಿದೆ ಎಂದು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ ತಿಳಿಸಿದರು.

ಇಲ್ಲಿನ ಪತ್ರಿಕಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮುದಾಯದ ಅಭಿವೃದ್ಧಿಯ ದೃಷ್ಟಿಯಿಂದ ಸ್ಥಾಪಿತಗೊಂಡಿರುವ ಸಂಘವು ಕಳೆದ ೫೦ ವರ್ಷಗಳಲ್ಲಿ ಹಲವಷ್ಟು ಸಾಧನೆಗಳನ್ನು ಕಂಡಿದೆ. ಇದೀಗ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದ್ದು, ಇದರ ನೆನಪಿಗಾಗಿ ರೂ. ೪೦ ಲಕ್ಷ ವೆಚ್ಚದಲ್ಲಿ ಸುವರ್ಣ ದ್ವಾರ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ ಎಂದರು.

ಜನವರಿ ತಿಂಗಳಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದ್ದು, ಈಗಾಗಲೇ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಆದಿಚುಂಚನಗಿರಿ ಮಠಾಧೀಶರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸೇರಿದಂತೆ ಜನಪ್ರತಿನಿಧಿಗಳು, ದಾನಿಗಳು ಭಾಗವಹಿಸಲಿದ್ದಾರೆ. ಇದರೊಂದಿಗೆ ಸಮುದಾಯ ಬಾಂಧವರಿಗೆ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸ ಲಾಗುವದು. ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯ ಬಿ.ಜೆ. ದೀಪಕ್ ನೇತೃತ್ವದಲ್ಲಿ ಕ್ರೀಡಾಸಮಿತಿ ರಚಿಸಲಾಗಿದೆ ಎಂದು ಮುತ್ತಣ್ಣ ಹೇಳಿದರು.

ಇದರೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ ಸಮುದಾಯದ ಸಾಧಕರನ್ನು ಗುರುತಿಸಿ ಗೌರವಿಸಲಾಗುವದು. ಸುವರ್ಣ ಮಹೋತ್ಸವದ ನೆನಪಿಗೆ ಸ್ಮರಣ ಸಂಚಿಕೆ ಹೊರತರಲಾಗುವದು. ಈ ಸಮಿತಿಯ ಅಧ್ಯಕ್ಷರಾಗಿ ಕೆ.ಟಿ. ಪರಮೇಶ್ ಅವರನ್ನು ನೇಮಿಸಲಾಗಿದೆ. ಆಹಾರ ಸಮಿತಿ ಅಧ್ಯಕ್ಷರಾಗಿ ರಾಮಚಂದ್ರ, ಆರ್ಥಿಕ ಸಮಿತಿ ಅಧ್ಯಕ್ಷರಾಗಿ ಎಂ.ಎಲ್. ರಾಜು, ಪ್ರಚಾರ ಸಮಿತಿ ಅಧ್ಯಕ್ಷರಾಗಿ ಎನ್.ಬಿ. ಗಣಪತಿ ಅವರುಗಳನ್ನು ನೇಮಿಸಲಾಗಿದೆ ಎಂದರು.

ತಾಲೂಕು ಒಕ್ಕಲಿಗರ ಸಂಘದಿAದ ಈಗಾಗಲೇ ೯ ಕೋಟಿ ವೆಚ್ಚದಲ್ಲಿ ಸಮುದಾಯ ಭವನವನ್ನು ನಿರ್ಮಿಸಲಾಗಿದೆ. ಎಲ್‌ಕೆಜಿ ಯಿಂದ ಪಿಯುಸಿ ವರೆಗೆ ವಿದ್ಯಾಸಂಸ್ಥೆಯನ್ನು ಸ್ಥಾಪಿಸಲಾಗಿದ್ದು, ಸುಮಾರು ೮೦೦ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಒಕ್ಕಲಿಗರ ಸಂಘದ ಈ ಎಲ್ಲಾ ಸಾಧನೆಗೆ ಸಂಘದ ಸದಸ್ಯರ ಸಹಕಾರ ಕಾರಣವಾಗಿದ್ದು, ಸುವರ್ಣ ಮಹೋತ್ಸವದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸಲಾಗುವದು ಎಂದರು.

ಡಿ. ೧೫ ರಂದು ವಾರ್ಷಿಕ ಸಭೆ: ಒಕ್ಕಲಿಗರ ಸಂಘದ ವಾರ್ಷಿಕ ಮಹಾಸಭೆಯನ್ನು ಡಿಸೆಂಬರ್ ೧೫ರಂದು ಪೂರ್ವಾಹ್ನ ೧೦.೩೦ಕ್ಕೆ ಸಂಘದ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ ಎಂದು ಮುತ್ತಣ್ಣ ತಿಳಿಸಿದರು.

ಗೋಷ್ಠಿಯಲ್ಲಿ ಸುವರ್ಣ ಮಹೋತ್ಸವ ಮೆರವಣಿಗೆ ಸಮಿತಿ ಅಧ್ಯಕ್ಷ ನಂದಕುಮಾರ್, ಕ್ರೀಡಾಸಮಿತಿ ಅಧ್ಯಕ್ಷ ಬಿ.ಜೆ. ದೀಪಕ್, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಬಸಪ್ಪ, ವಿದ್ಯಾಸಂಸ್ಥೆಯ ಕರೆಸ್ಪಾಂಡೆAಟ್ ಜಗದೀಶ್ ಅವರುಗಳು ಉಪಸ್ಥಿತರಿದ್ದರು.