ಸಿದ್ದಾಪುರ, ನ. 6: ಸಂತ್ರಸ್ತ ಕುಟುಂಬಗಳಿಗೆ ಕೂಡಲೇ ಪುನರ್ವಸತಿ ಕಲ್ಪಿಸಿಕೊಡುವಂತೆ ವಿಧಾನ ಪರಿಷತ್ ಸಭಾಪತಿ ಕೆ. ಪ್ರತಾಪ ಚಂದ್ರ ಶೆಟ್ಟಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬುಧವಾರ ದಂದು ನೆಲ್ಯಹುದಿಕೇರಿಯ ಸರಕಾರಿ ಶಾಲೆಯ ಪರಿಹಾರ ಕೇಂದ್ರಕ್ಕೆ ಆಗಮಿಸಿ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದ ಬಳಿಕ ನೆಲ್ಯಹುದಿಕೇರಿಯ ಬೆಟ್ಟದಕಾಡು ಪ್ರವಾಹ ಪೀಡಿತ ಪ್ರದೇಶ ಹಾಗೂ ಕರಡಿಗೋಡುವಿನಲ್ಲಿ ನೆಲಸಮಗೊಂಡ ಮನೆಗಳನ್ನು ವೀಕ್ಷಿಸಿದರು. ಕರಡಿ ಗೋಡುವಿನಲ್ಲಿ ನದಿ ತೀರದಲ್ಲಿ ಕುಸಿದಿ ರುವ ಮನೆಗಳನ್ನು ವೀಕ್ಷಿಸಿದ ಸಂದರ್ಭ ದಲ್ಲಿ ಸ್ಥಳದಲ್ಲಿದ್ದ ತಹಶೀಲ್ದಾರ್ ಹಾಗೂ ಕಂದಾಯ ಇಲಾಖಾಧಿಕಾರಿ ಗಳ ಬಳಿ ಪ್ರವಾಹ ದಿಂದ ಕುಸಿದಿರುವ ಮನೆಗಳ ಮಾಹಿತಿಯನ್ನು ಪಡೆದುಕೊಂಡರು.(ಮೊದಲ ಪುಟದಿಂದ) ಈ ಸಂದರ್ಭ ಅಧಿಕಾರಿಗಳ ಬಳಿ ಮಾತನಾಡಿ ಮನೆ ಕಳೆದುಕೊಂಡು 3 ತಿಂಗಳು ಕಳೆದಿದೆ ಇವರಿಗೆ ಪರಿಹಾರ ನೀಡಲಾಗಿದಿಯೆ ಎಂದು ವಿಚಾರಿಸಿದರು. ಈ ಸಂದರ್ಭ ತಮಗೆ 3 ತಿಂಗಳು ಕಳೆದರೂ ಶಾಶ್ವತ ಸೂರು ಸಿಗಲಿಲ್ಲ. ಬಾಡಿಗೆ ಹಣವು ಕೂಡ ಲಭಿಸಿರುವದಿಲ್ಲ.

ತಾವು ಗ್ರಾಮ ಪಂಚಾಯತಿಯಿಂದ ಅನುಮತಿ ಪತ್ರ ಪಡೆದು ಮನೆ ನಿರ್ಮಾಣ ಮಾಡಿ ಕಳೆದ 40 ವರ್ಷಗಳಂದ ವಾಸ ಮಾಡಿಕೊಂಡಿದ್ದು, ಮನೆ ತೆರಿಗೆ, ನೀರಿನ ಕಂದಾಯ ಎಲ್ಲವೂ ಗ್ರಾ.ಪಂ ಗೆ ಪಾವತಿಸುತಿದ್ದೇವೆ. ಈ ಬಾರಿಯ ಪ್ರವಾಹಕ್ಕೆ ಸಿಲುಕಿ ನಮ್ಮ ಮನೆಗಳನ್ನು ಕಳೆದುಕೊಂಡಿದ್ದು, ನಮಗೆ ಶಾಶ್ವತ ಸೂರು ಜಿಲ್ಲಾಡಳಿತ ಒದಗಿಸಿಕೊಡುವ ದಾಗಿ ಭರವಸೆ ನೀಡಿ ಮೂರು ತಿಂಗಳು ಕಳೆದರೂ ಪುನರ್ವಸತಿ ಕಲ್ಪಿಸಲಿಲ್ಲ ಎಂದು ಸಂತ್ರಸ್ತರು ಅಳಲು ತೋಡಿಕೊಂಡರು.

ಈ ಸಂದರ್ಭ ಸಭಾಪತಿ ಪ್ರತಾಪ ಚಂದ್ರ ಶೆಟ್ಟಿ ತಹಶೀಲ್ದಾರ್ ಬಳಿ ಮಾತನಾಡಿ ಜಿಲ್ಲಾಡಳಿತ ಮೂರು ತಿಂಗಳ ಅವಧಿ ನೀಡಿದ್ದು, ಈವರೆಗೂ ಪುನರ್ವಸತಿ ಯಾಕೆ ಕಲ್ಪಿಸಲಿಲ್ಲ ಎಂದು ಪ್ರಶ್ನಿಸಿದರು. ಕೂಡಲೇ ಸರಕಾರಿ ಜಾಗಗಳು ಸಿಗದಿದ್ದಲ್ಲಿ, ಜಾಗಗಳನ್ನು ಖರೀದಿಸಿ ಪುನರ್ವಸತಿ ಕಲ್ಪಿಸಿ ನದಿ ತೀರದ ನಿವಾಸಿಗಳಿಗೆ ಮನವರಿಗೆ ಮಾಡಿ ಬದಲಿ ವ್ಯವಸ್ಥೆ ಕಲ್ಪಿಸಿಕೊಡುವಂತೆ ಸೂಚಿಸಿದರು. ನ್ಯಾಯಾಲಯದಿಂದ ಕೆಲವು ಒತ್ತುವರಿದಾರರು ಜಾಗಕ್ಕೆ ತಡೆಯಾಜ್ಞೆ ತಂದಿರುವ ಬಗ್ಗೆ ಸಂತ್ರಸ್ತರು ಸಭಾಪತಿಗಳ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಭಾಪತಿಗಳು ನ್ಯಾಯಾಲಯದ ತಾಂತ್ರಿಕ ಸಮಸ್ಯೆಗಳು ಬಗೆಹರಿಯು ವವರೆಗೆ ಕಾಯದೆ ಅಧಿಕಾರಿಗಳು ಪುನರ್ವಸತಿಗೆ ಜಾಗವನ್ನು ಹುಡುಕುವಂತೆ ಸಲಹೆ ನೀಡಿದರು.

ತಹಶೀಲ್ದಾರ್ ಮಹೇಶ್ ಮಾತನಾಡಿ, ಈಗಾಗಲೇ ಸಂತ್ರಸ್ತ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ 10 ಎಕರೆ ಜಾಗವನ್ನು ಗುರುತಿಸಲಾಗಿದ್ದು, ಅದನ್ನು ಖರೀದಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡುವ ಯೋಜನೆಯನ್ನು ರೂಪಿಸಲಾಗಿದೆ ಎಂದು ತಿಳಿಸಿದರು. ಪರಿಹಾರ ವಿಳಂಬವಾಗುತ್ತಿದೆ ಎಂದು ಸಂತ್ರಸ್ತರು ತಿಳಿಸಿದಾಗ ಕಂದಾಯ ಅಧಿಕಾರಿಗಳು ಈಗಾಗಲೇ ತುರ್ತು ಪರಿಹಾರ ನೀಡಲಾಗಿದ್ದು, ಅಧಿಕೃತ ದಾಖಲೆ ಗಳನ್ನು ಹೊಂದಿರುವ ಕುಟುಂಬಗಳಿಗೆ ಹಂತಹಂತವಾಗಿ ಪರಿಹಾರವನ್ನು ವಿತರಿಸಲಾಗುತ್ತಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಮೋಹನ್ ಕುಮಾರ್ ಕೊಂಡಜೆ ಮಾತನಾಡಿ, ಸಂತ್ರಸ್ತರನ್ನು ನದಿ ತೀರದಿಂದ ಬದಲಾಯಿಸಿ ಅವರಿಗೆ ಪುನರ್ವಸತಿ ಕಲ್ಪಿಸಲು ಜಾಗದ ಸಮಸ್ಯೆ ಇದ್ದಲ್ಲಿ ಯಾವುದಾದರು ಜಾಗವನ್ನು ಖರೀದಿಸಿ ಫ್ಲ್ಯಾಟ್ ಮಾದರಿಯಲ್ಲಿ ಮನೆ ನಿರ್ಮಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ನೆಲ್ಯಹುದಿಕೇರಿ ಪರಿಹಾರ ಕೇಂದ್ರಕ್ಕೆ ಸಭಾಪತಿಗಳು ಭೇಟಿ ನೀಡಿದ ಸಂದರ್ಭ ಸಂತ್ರಸ್ತರು ಮಾತನಾಡಿ ನಾವು ಕಳೆದ 3 ತಿಂಗಳಿನಿಂದ ಮನೆ ಕಳೆದುಕೊಂಡು ತಮ್ಮ ಸಂಸಾರ ದೊಂದಿಗೆ ಶಾಲೆಯ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿದ್ದೇವೆ. ತಮಗೆ ಶಾಶ್ವತ ಸೂರು ಕಲ್ಪಿಸಿಕೊಡುವಂತೆ ಮನವಿ ಮಾಡಿದರು. ಜಾಗ ಸಿಗದಿದ್ದಲ್ಲಿ ತಮಗೆ ತಲಾ 10 ಲಕ್ಷ ರೂಪಾಯಿ ಸರಕಾರದ ವತಿಯಿಂದ ಕೊಡಿಸಿಕೊಡುವಂತೆ ಮನವಿ ಮಾಡಿಕೊಂಡರು. ಇದೀಗ ನಾವು ಸರಕಾರಿ ಶಾಲೆಯ ಗೆದ್ದಲು ಹಿಡಿದ ಕೊಠಡಿಯ ನೆಲದಲ್ಲಿ ಮಲಗುತ್ತಿದ್ದೇವೆ ಎಂದು ಅಳಲು ತೋಡಿಕೊಂಡರು. ಕೂಡಲೇ ಪುನರ್ವಸತಿ ಕಲ್ಪಿಸಿಕೊಡುವಂತೆ ಮನವಿ ಮಾಡಿದರು. ಈ ಸಂದರ್ಭ ಪರಿಹಾರ ಕೇಂದ್ರದಲ್ಲಿನ ಎಲ್ಲಾ ಕೊಠಡಿಗಳನ್ನು ಸಭಾಪತಿಗಳು ಪರಿಶೀಲನೆ ನಡೆಸಿದರು.

ಪಿ.ಆರ್ ಭರತ್ ಮಾತನಾಡಿ, ಜಿಲ್ಲಾಡಳಿತ ಮೂರು ತಿಂಗಳು ಅವಧಿ ನೀಡಿದರೂ ಕೂಡ ಪುನರ್ವಸತಿ ಕಲ್ಪಿಸಿಕೊಡಲಿಲ್ಲ. ಒತ್ತುವರಿ ಜಾಗವನ್ನು ಗುರುತಿಸಿದ್ದು, ಈ ಜಾಗದ ಮಾಲೀಕರು ನ್ಯಾಯಾಲಯದ ತಡೆಯಾಜ್ಞೆ ತಂದಿರುವದು ಸಮಸ್ಯೆಯಾಗುತ್ತಿದೆ ಎಂದರು. ಸರ್ವೆ ಇಲಾಖೆಯ ಅಧಿಕಾರಿಗಳು ಆಸಕ್ತಿ ವಹಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಒತ್ತುವರಿದಾರ ಮಾಲೀಕರು ನ್ಯಾಯಾಲಯದ ಮೊರೆ ಹೋಗಲು ಸರ್ವೆ ಇಲಾಖೆ ಪರೋಕ್ಷವಾಗಿ ಸಹಕರಿಸುತ್ತಿದೆ ಎಂದು ದೂರಿದರು.

ಇದಾದ ಬಳಿಕ ಸುದ್ದಿಗಾg Àರೊಂದಿಗೆ ಮಾತನಾಡಿದ ಸಭಾಪತಿ, ವಿಧಾನಪರಿಷತ್ತಿನಲ್ಲಿ ಜಿಲ್ಲೆಯ ವಿಚಾರಗಳು ಪ್ರಸ್ತಾಪವಾಗಿರುವ ಹಿನ್ನೆಲೆಯಲ್ಲಿ ತಾನು ಜಿಲ್ಲೆಗೆ ಭೇಟಿ ನೀಡಿ ಪ್ರವಾಹ ಪೀಡಿತ ಪ್ರದೇಶಗಳ ಮಾಹಿತಿ ಪಡೆದಿದ್ದು, ಈ ಬಗ್ಗೆ ಸರಕಾರವು ಮುಂದಿನ ಕ್ರಮ ಕೈಗೊಳ್ಳಲಿದೆ ಎಂದರು.

ಸಭಾಪತಿಯ ಭೇಟಿಯ ಸಂದರ್ಭದಲ್ಲಿ ನೆಲ್ಯಹುದಿಕೇರಿಯಲ್ಲಿ ಕುಶಾಲನಗರ ಹೋಬಳಿ ಉಪ ತಹಶೀಲ್ದಾರ್ ಚಿನ್ನಪ್ಪ, ಕಂದಾಯ ಪರಿವೀಕ್ಷಕ ಮಧುಸೂದನ್, ಗ್ರಾಮ ಲೆಕ್ಕಿಗ ಸಂತೋಷ್, ಪಿಡಿಓ ಅನಿಲ್ ಕುಮಾರ್, ಹಾಗೂ ಸಿದ್ದಾಪುರದಲ್ಲಿ ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ಎಂ.ಎಲ್ ಹರೀಶ್, ಗ್ರಾಮ ಲೆಕ್ಕಿಗ ಓಮಪ್ಪ ಬಣಾಕರ್, ಅನೀಶ್, ಪಿಡಿಓ ವಿಶ್ವನಾಥ್ ಹಾಗೂ ಸ್ಥಳೀಯ ಗ್ರಾ,ಪಂ ಸದಸ್ಯರುಗಳು ಮತ್ತು ಹೋರಾಟ ಸಮಿತಿಯ ಕೃಷ್ಣ ಇತರರು ಹಾಜರಿದ್ದರು.

-ವಾಸು