*ಗೋಣಿಕೊಪ್ಪಲು, ನ. 7: ಎರಡು ಕೋಟಿ ಅರವತ್ತೆರಡು ಲಕ್ಷದ ಅನುದಾನದಲ್ಲಿ ಕೊಣನೂರು, ಮಾಕುಟ್ಟ ರಾಜ್ಯ ಹೆದ್ದಾರಿಯ ರಸ್ತೆ ಅಗಲೀಕರಣ ಮತ್ತು ಡಾಂಬರೀಕರಣ ಕಾಮಗಾರಿಗಳಿಗೆ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.

ಕೊಣನೂರು, ಮಾಕುಟ್ಟ ರಾಜ್ಯ ಹೆದ್ದಾರಿಯ ವೀರಾಜಪೇಟೆ ಅಮ್ಮತ್ತಿ ಮಾರ್ಗದಲ್ಲಿನ ಕೊಮ್ಮೆತೋಡು ಗ್ರಾಮದ ಮೂಲಕ ಹಾದುಹೋಗುವ ಒಂದೂವರೆ ಕಿ.ಮೀ ಉದ್ದದ ಹೆದ್ದಾರಿಯ ಡಾಂಬರೀಕರಣ ಮತ್ತು 7 ಮೀ ಅಗಲೀಕರಣ ನಡೆಯಲಿದೆ. ಲೋಕೋಪಯೋಗಿ ಇಲಾಖೆಯ ವತಿಯಿಂದ ನಡೆಯುವ ಕಾಮಗಾರಿಯು ಅಪಘಾತ ವಲಯ ಎಂದು ಗುರುತಿಸಿರುವ ರಸ್ತೆ ತಿರುವು ಗಳನ್ನು ವೈಜ್ಞಾನಿಕವಾಗಿ ಅಗಲೀಕರಣ ಗೊಳಿಸಲಾಗುತ್ತಿದೆ. ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವದು ಅಲ್ಲದೇ ರಸ್ತೆ ಅಗಲೀಕರಣದ ಸಂದರ್ಭ ಮಳೆ ನೀರು ಹರಿದು ಹೋಗಲು ಮಾರ್ಗದ ಉದ್ದಕ್ಕೂ 5 ಮೋರಿಗಳ ನಿರ್ಮಾಣವೂ ನಡೆಯಲಿದೆ ಎಂದು ಶಾಸಕರು ಈ ಸಂದರ್ಭ ತಿಳಿಸಿದರು. ಈ ಭಾಗದಲ್ಲಿ ರಸ್ತೆ ಅಗಲೀಕರಣಕ್ಕೆ ಕೊಲ್ಲೀರ ಕುಟುಂಬಸ್ಥರು ಸ್ಥಳಾವಕಾಶವನ್ನು ಕಲ್ಪಿಸಿಕೊಟ್ಟಿದಕ್ಕೆ ಅವರ ಸೇವೆಯನ್ನು ಶ್ಲಾಘಿಸಿದ ಶಾಸಕರು ಅಭಿವೃದ್ಧಿ ಕಾರ್ಯಗಳಿಗೆ ಸಾರ್ವಜನಿಕರು ಕೈಜೋಡಿಸಿದಾಗ ಹೆಚ್ಚಿನ ಅಭಿವೃದ್ಧಿಗಳು ಕಾಣಲು ಸಾಧ್ಯವಿದೆ ಎಂದರು.

ತಾ.ಪಂ. ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್, ವೀರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಹೆಚ್.ಪಿ. ಮಾದೇವ ಸುಭಾಶ್, ಹರ್ಷವರ್ಧನಾ, ಅನಿತಕುಮಾರ್, ಆಶಾ ಸುಬ್ಬಯ್ಯ, ಜೂನ ಸುನೀತಾ, ಜಿಲ್ಲಾ ಬಿಜೆಪಿ ಸಮಿತಿ ಉಪಾಧ್ಯಕ್ಷ ಪಟ್ರಪಂಡ ರಘು ನಾಣಯ್ಯ, ತಾಲೂಕು ಬಿಜೆಪಿ ಮಂಡಳ ಕಾರ್ಯದರ್ಶಿ ಕುಂಬೇರ ಗಣೇಶ್, ಶಾಸಕರ ಕಾರ್ಯದರ್ಶಿ ಮಲ್ಲಂಡ ಮದು ದೇವಯ್ಯ, ವೀರಾಜಪೇಟೆ ತಾಲೂಕು ಲೋಕೋಪಯೋಗಿ ಇಂಜಿನಿಯರ್ ಸುರೇಶ್, ಸಹಾಯಕ ಇಂಜಿನಿಯರ್‍ಗಳಾದ ಸಣ್ಣುವಂಡ ನವೀನ್, ಯತೀಶ್, ಗುತ್ತಿಗೆದಾರರಾದ ವಿ.ವಿ.ಟಿ ಸಂಸ್ಥೆಯ ಕೊಲ್ಲೀರ ವಿಜು ಬೋಪಣ್ಣ, ಐಯ್ಯನೆರವಂಡ ತನು ಉತ್ತಪ್ಪ, ಕತ್ರಿಕೊಲ್ಲಿ ವಿಜು ಹಾಗೂ ಗ್ರಾಮಸ್ಥರು ಹಾಜರಿದ್ದರು.