ಸಿದ್ದಾಪುರ, ನ. 7: ಪೊಲೀಸ್ ಇಲಾಖೆಗೆ ಸೇರಿದ ಜಾಗವನ್ನು ಗ್ರಾಮಪಂಚಾಯಿತಿ ಒತ್ತುವರಿ ಮಾಡಿಕೊಂಡು ಮಳಿಗೆ ನಿರ್ಮಾಣ ಮಾಡಲಾಗುತ್ತಿದೆಯೆಂದು ಪೊಲೀಸರು ಆಕ್ಷೇಪಣೆ ವ್ಯಕ್ತಪಡಿಸಿದ ಪ್ರಸಂಗ ಸಿದ್ದಾಪುರದಲ್ಲಿ ನಡೆದಿದೆ. ಸಿದ್ದಾಪುರ ಪೊಲೀಸ್ ಠಾಣೆಗೆ ಸೇರಿದ ಜಾಗದಲ್ಲಿ ಠಾಣಾಧಿಕಾರಿಗಳ ವಸತಿ ಗೃಹ ಇದ್ದು ಇದರ ಬದಿಯಲ್ಲಿ ಸಿದ್ದಾಪುರ ಗ್ರಾಮ ಪಂಚಾಯಿತಿ ವತಿಯಿಂದ ನೂತನ ಅಂಗಡಿ ಮಳಿಗೆಗಳನ್ನು ನಿರ್ಮಾಣ ಮಾಡಲು ಗುಂಡಿಗಳನ್ನು ತೆಗೆಯಲಾಗಿದೆ. ಈ ಸಂದರ್ಭದಲ್ಲಿ ಪಂಚಾಯಿತಿಯವರು ಪೊಲೀಸ್ ಇಲಾಖೆಗೆ ಸೇರಿದ ಜಾಗವನ್ನು ಒತ್ತುವರಿ ಮಾಡಿ ಮಣ್ಣು ತೆಗೆದಿರುವದಕ್ಕೆ ಠಾಣಾಧಿಕಾರಿ ದಯಾನಂದ್ ಹಾಗೂ ಎಎಸ್‍ಐ ಗಣಪತಿ ಹಾಗೂ ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಆಕ್ಷೇಪಣೆ ವ್ಯಕ್ತಪಡಿಸಿದರು. ಗ್ರಾ.ಪಂ. ಅಧ್ಯಕ್ಷ ಮಣಿ ಹಾಗೂ ಪಿ.ಡಿ.ಓ. ಅವರ ಬಳಿ ಒತ್ತುವರಿ ಮಾಡಿ ಮಳಿಗೆ ನಿರ್ಮಾಣ ಮಾಡದಂತೆ ಸೂಚನೆ ನೀಡಿದರು.

ಇತ್ತೀಚೆಗೆ ಮಡಿಕೇರಿ ವೃತ್ತ ನಿರೀಕ್ಷಕರು ಸಿದ್ದಾಪುರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಪಂಚಾಯಿತಿಯಿಂದ ತಾವು ತಡೆಗೋಡೆ ನಿರ್ಮಾಣ ಮಾಡುವದಾಗಿ ತಿಳಿಸಿದ್ದರು ಎನ್ನಲಾಗಿದೆ. ಇದೀಗ ದಿಢೀರನೆ ಪೊಲೀಸ್ ಇಲಾಖೆಗೆ ಸೇರಿದ ಜಾಗವನ್ನು ಒತ್ತುವರಿ ಮಾಡಿ ಮಳಿಗೆ ನಿರ್ಮಾಣ ಮಾಡುವದು ಸರಿಯಾದ ಕ್ರಮವಲ್ಲವೆಂದು ಠಾಣಾಧಿಕಾರಿ ಪಂಚಾಯಿತಿಯವರಿಗೆ ತಿಳಿಸಿದರು. ಒತ್ತುವರಿ ಮಾಡಿಕೊಂಡು ಮಳಿಗೆ ನಿರ್ಮಿಸಿದ್ದಲ್ಲಿ ಸಮಸ್ಯೆ ಆಗುತ್ತದೆಂದು ಮನವರಿಕೆ ಮಾಡಿಕೊಟ್ಟರು. ಕೆಲ ಕಾಲ ಉಭಯ ಕಡೆಗಳ ನಡುವೆ ತೀವ್ರ ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ಸಿದ್ದಾಪುರ ಗ್ರಾ.ಪಂ. ಪಿ.ಡಿ.ಓ. ವಿಶ್ವನಾಥ್ ಹಾಜರಿದ್ದರು.

- ವಾಸು