ಮಡಿಕೇರಿ, ನ. 6: ಮಡಿಕೇರಿ ನಿವೃತ್ತ ಅರೆಸೇನಾ ಪಡೆ ಒಕ್ಕೂಟಕ್ಕೆ ಅದರದ್ದೇ ಸ್ವಂತ ನೆಲೆಯನ್ನು ಕಂಡು ಕೊಳ್ಳುವ ನಿಟ್ಟಿನ ಪ್ರಯತ್ನಗಳು ಪ್ರಗತಿಯಲ್ಲಿದ್ದು, ಹಲವು ವರ್ಷಗಳಿಂದ ನಿವೇಶನವೊಂದನ್ನು ಪಡೆಯುವ ಪ್ರಯತ್ನ ಶೀಘ್ರ ಫಲಪ್ರದವಾಗುವ ಇಂಗಿತವನ್ನು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರಾಜಶೇಖರ್ ವ್ಯಕ್ತಪಡಿಸಿದರು.
ನಗರದ ಗೌಡ ಸಮಾಜದ ಸಭಾಂಗಣದಲ್ಲಿ ಬಿಎಸ್‍ಎಫ್, ಸಿಆರ್‍ಪಿಎಫ್, ಸಿಬಿಎಸ್‍ಎಫ್, ಐಟಿಬಿಪಿ ಮತ್ತು ಎಸ್‍ಎಸ್‍ಪಿಯನ್ನು ಒಳಗೊಂಡ ‘ನಿವೃತ್ತ ಅರೆ ಸೇನಾ ಪಡೆ ಒಕ್ಕೂಟ’ದ 7ನೇ ವಾರ್ಷಿಕ ಮಹಾಸಭೆಯು ಉಪಾಧ್ಯಕ್ಷ ಪುಲಿಯಂಡ ಎಂ.ಚಂಗಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು.
ಕಳೆದ ಹಲವು ವರ್ಷಗಳಿಂದ ಒಕ್ಕೂಟಕ್ಕೆ ನಿವೇಶನ ಪಡೆಯುವ ಪ್ರಯತ್ನಗಳು ನಡೆಯುತ್ತಿದ್ದು, ಪ್ರಸ್ತುತ ಕರ್ಣಂಗೇರಿಯಲ್ಲಿ ಗುರುತಿಸಿರುವ ಜಾಗದ ಸರ್ಕಾರದ ಮಂಜೂರಾತಿಯನ್ನು ನಿರೀಕ್ಷಿಸಲಾಗುತ್ತ್ತಿದೆ. ಜಾಗ ದೊರೆತ ಬಳಿಕ ಒಕ್ಕೂಟದ ಕಚೇರಿ ನಿರ್ಮಾಣ ಬಗ್ಗೆ ಮಾಹಿತಿ ನೀಡಿದರು.
ಕಾಲಾವಕಾಶ: ಮಹಾಸಭೆಯ ಬಹುಪಾಲು ಸಮಯ ‘ಮರಣ ನಿಧಿ’ಯ ವಿಚಾರದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಒಕ್ಕೂಟದಲ್ಲಿ 694 ಸದಸ್ಯರುಗಳಿದ್ದು, ಇವರಲ್ಲಿ ಸಾಕಷ್ಟು ಮಂದಿ ಮರಣ ನಿಧಿಯ 1 ಸಾವಿರ ರೂ. ಶುಲ್ಕದಲ್ಲಿ ಕೆಲ ಪ್ರಮಾಣವನ್ನು ಮಾತ್ರ ತುಂಬಿದ್ದರೆ, ಮತ್ತೆ ಹಲವರು ಶುಲ್ಕ ಪಾವತಿಗೆ ಮುಂದಾಗಿಲ್ಲದಿರುವದನ್ನು ಆಡಳಿತ ಮಂಡಳಿ ಸಭೆಗೆ ತಿಳಿಸಿತು. ಒಕ್ಕೂಟದಿಂದ ಮೃತಪಟ್ಟ ಸದಸ್ಯರ ಕುಟುಂಬಕ್ಕೆ 5 ಸಾವಿರ ಮರಣ ನಿಧಿಯನ್ನು ನೀಡುತ್ತದೆ. ಆದರೆ, ಮರಣ ನಿಧಿಯನ್ನು ಸಂಪೂರ್ಣವಾಗಿ ಪಾವತಿಸದಿರುವವರ ಕುಟುಂಬಕ್ಕೆ ಮರಣ ನಿಧಿ ನೀಡಬೇಕೆ ಬೇಡವೆ ಎನ್ನುವ ಬಗ್ಗೆ ವ್ಯಾಪಕ ಚರ್ಚೆ ನಡೆಯಿತು.
ಬಳಿಕ ಸಭಾಧ್ಯಕ್ಷತೆ ವಹಿಸಿದ್ದ ಉಪಾಧ್ಯಕ್ಷ ಪುಲಿಯಂಡ ಎಂ.ಚಂಗಪ್ಪ ಅವರು, ಸದಸ್ಯರ ಸಲಹೆ ಸೂಚನೆಗಳನ್ನು ಪಡೆದುಕೊಂಡು, ಮರಣ ನಿಧಿಯ ಶುಲ್ಕ ಪಾವತಿಗೆ ಸದಸ್ಯರಿಗೆ ಸೂಚನಾ ಪತ್ರವನ್ನು ಕಳುಹಿಸಿ, ಮುಂದಿನ ಮಾರ್ಚ್‍ವರೆಗೆ ಕಾಲಾವಕಾಶ ನೀಡುವ ಬಗ್ಗೆ ನಿರ್ಣಯ ಕೈಗೊಂಡರು, ಸಭೆಯ ಅನುಮೋದನೆಯನ್ನು ಪಡೆಯಲಾಯಿತು.
ಸನ್ಮಾನ: ಮಹಾಸಭೆಯಲ್ಲಿ ಸಿಆರ್‍ಪಿಎಫ್‍ನ ನಿವೃತ್ತ ಯೋಧ ಸೋಮವಾರಪೇಟೆ ತಾಲೂಕಿನ ಹನಕೋಡು ಗ್ರಾಮದವರಾದ ಬಸವಯ್ಯ ಎಚ್.ಡಿ., ಒಕ್ಕೂಟದ ಹಿರಿಯ ಸದಸ್ಯ ಬಿಎಸ್‍ಎಫ್‍ನ ನಿವೃತ್ತ ಯೋಧ ಕೈಕಾಡು ಗ್ರಾಮದ ಅಯ್ಯಪ್ಪ ಹಾಗೂ 1991 ರಲ್ಲಿ ಕಾಶ್ಮೀರದಲ್ಲಿ ಹುತಾತ್ಮರಾದ ಸಿಆರ್‍ಪಿಎಫ್‍ನ ವೀರ ಯೋಧ ಪ್ರಕಾಶ್ ಅವರ ತಾಯಿ ಪಾರ್ವತಿ ಅವರನ್ನು ಒಕ್ಕೂಟದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಒಕ್ಕೂಟದ ಕಾರ್ಯದರ್ಶಿ ಹಾಗೂ ಖಜಾಂಚಿ ಎನ್.ಎಂ. ಭೀಮಯ್ಯ ಅವರು ವಾರ್ಷಿಕ ಲೆಕ್ಕ ಪತ್ರವನ್ನು ಮಂಡಿಸಿದರು. ಒಕ್ಕೂಟದ ಗೌರವಾಧ್ಯಕ್ಷ ಗಣಪತಿ, ಸಲಹೆಗಾರ ಆನಂದ್, ವೀರಾಜಪೇಟೆ ತಾಲೂಕು ಅಧ್ಯಕ್ಷ ಎಂ.ಕೆ.ಅಪ್ಪಯ್ಯ, ಪದಾಧಿಕಾರಿಗಳಾದ ಚಂಗಪ್ಪ ಉಪಸ್ಥಿತರಿದ್ದರು.
ಕಳೆದ ಒಂದು ವರ್ಷದ ಅವಧಿಯಲ್ಲಿ ದೈವಾಧೀನರಾದ ಒಕ್ಕೂಟದ ಸದಸ್ಯರಿಗೆ ಮೌನಾಚರಣೆಯ ಮೂಲಕ ಗೌರವ ಅರ್ಪಿಸಲಾಯಿತು. ಒಕ್ಕೂಟದ ನಿರ್ದೇಶಕಿ ಕೆ.ಜಿ. ತಂಗಮ್ಮ ಪ್ರಾರ್ಥಿಸಿ, ಪ್ರಧಾನ ಕಾರ್ಯದರ್ಶಿ ರಾಜಶೇಖರ್ ಸ್ವಾಗತಿಸಿ , ಕಾರ್ಯಕ್ರಮ ನಿರೂಪಿಸಿದರು.