ಸಿದ್ದಾಪುರ, ನ. ೫: ಜಿಲ್ಲೆಯಲ್ಲಿ ಆಗಸ್ಟ್ ತಿಂಗಳ ಮಹಾಮಳೆಗೆ ಮನೆಗಳನ್ನು ಕಳೆದುಕೊಂಡಿರುವ ಸಂತ್ರಸ್ತರಲ್ಲಿ ಅರ್ಹರಾದ ೫ ಕುಟುಂಬಗಳನ್ನು ಗುರುತಿಸಿ ಸಿದ್ದಾಪುರದ ಎಂ.ಜಿ ರಸ್ತೆಯ ಹಿರಾ ಮಸೀದಿಯ ಕೆಳ ಅಂತಸ್ತಿನಲ್ಲಿ ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ (ಹೆಚ್.ಆರ್.ಎಸ್) ವತಿಯಿಂದ ೫ ಮನೆಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.

ಇಲ್ಲಿಯ ಎಂ.ಜಿ ರಸ್ತೆಯಲ್ಲಿರುವ ಹಿರಾ ಮಸೀದಿಯ ಆವರಣದಲ್ಲಿ ನಡೆದ ನೆರೆ ಸಂತ್ರಸ್ತರಿಗೆ ಮನೆಗಳ ವಿತರಣಾ ಸಮಾರಂಭದ ಅಧ್ಯಕ್ಷತೆಯನ್ನು ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಅಕ್ಬರಲಿ ವಹಿಸಿದ್ದರು.

ಮಡಿಕೇರಿ ಮಸ್ಜಿದುರಹ್ಮ ಮಸೀದಿಯ ಖತೀಬ್ ಉಮರ್ ಮೌಲವಿ ಪ್ರಾರ್ಥನೆ ನೆರವೇರಿಸಿದರು. ಜಮಾಅತೆ ಇಸ್ಲಾಮಿ ಹಿಂದ್ ಕೊಡಗು ಜಿಲ್ಲಾಧ್ಯಕ್ಷ ಯು. ಅಬ್ದುಸ್ಸಲಾಮ್ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳಲ್ಲಿ ಪ್ರಕೃತಿ ವಿಕೋಪದಿಂದ ಹಾನಿಗಳು ಸಂಭವಿಸಿದ ಸಂದರ್ಭದಲ್ಲಿ ಹೆಚ್.ಆರ್.ಎಸ್ ತಂಡಗಳು ಸಕಾಲದಲ್ಲಿ ಸ್ಪಂದಿಸಿವೆ ಎಂದರು. ತಂಡವು ಸಮಾಜಸೇವೆಯಲ್ಲಿ ಜಾತಿ, ಧರ್ಮ, ಭೇದ ಭಾವ ಇಲ್ಲದೆ ತೊಡಗಿಸಿಕೊಂಡಿದೆ. ಕಳೆದ ವರ್ಷ ವರ್ಷ ಮಡಿಕೇರಿಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಹಾಗೂ ಈ ಬಾರಿ ಸಿದ್ದಾಪುರ ಸುತ್ತಮುತ್ತಲಿನಲ್ಲಿ ಉಂಟಾದ ಪ್ರವಾಹ ಸಂದರ್ಭದಲ್ಲಿ ಸಂತ್ರಸ್ತರಿಗೆ ಅಗತ್ಯ ನೆರವು ನೀಡಿ ಸ್ಪಂದಿಸಿದೆ ಎಂದು ಮಾಹಿತಿ ನೀಡಿದರು. ಈಗಾಗಲೇ ಸಂಘಟನೆ ಮೂಲಕ ದಾನಿಯೊಬ್ಬರು ಎರಡು ಎಕರೆ ಜಾಗವನ್ನು ದಾನವಾಗಿ ನೀಡಿದ್ದು, ಅದರಲ್ಲಿ ಸಂತ್ರಸ್ತರಿಗೆ ಅಂದಾಜು ೪೦ ಮನೆಗಳು ನಿರ್ಮಾಣ ಮಾಡಿ ಕೊಡುವದರ ಬಗ್ಗೆ ಸಿದ್ಧತೆಗಳು ನಡೆಯುತ್ತಿವೆ ಎಂದು ತಿಳಿಸಿದರು.

ಹೆಚ್.ಆರ್.ಎಸ್ ಸಂಘಟನೆಯ ರಾಜ್ಯ ನಿರ್ದೇಶಕ ಕೆ.ಎಂ ಅಶ್ರಫ್ ದಿಕ್ಸೂಚಿ ಭಾಷಣ ಮಾಡಿ, ಆಧುನಿಕ ಯುಗದಲ್ಲಿ ಧರ್ಮಗಳು ಬದಲಾಗುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು. ರಾಜಕಾರಣಿಗಳು ತಮ್ಮ ಸ್ವಾರ್ಥ ಲಾಭಕ್ಕಾಗಿ ಧರ್ಮಗಳನ್ನು ಬಳಸಿಕೊಂಡು ಗಲಭೆಗಳನ್ನು ಎಬ್ಬಿಸುತ್ತಿರುವದು ಸರಿಯಾದ ಕ್ರಮವಲ್ಲ ಎಂದು ಟೀಕಿಸಿದರು. ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆಯು ೧೯೪೭ ರಿಂದ ಪ್ರಾರಂಭವಾಗಿ ಇಂದಿಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದೆ ಎಂದರು. ಸಂಘಟನೆಯ ಅಧೀನದಲ್ಲಿ ಹೆಚ್.ಆರ್.ಎಸ್ ತಂಡದಲ್ಲಿ ೪೦೦ ಮಂದಿ ಸದಸ್ಯರಿದ್ದು, ಈ ಪೈಕಿ ೧೦೦ ಮಂದಿ ಮಹಿಳೆಯರು ಇರುವದಾಗಿ ತಿಳಿಸಿದರು. ಅಲ್ಲದೆ ೭೫ ಮಂದಿ ಎನ್.ಡಿ.ಆರ್.ಎಫ್. ಮೂಲಕ ತರಬೇತಿ ಪಡೆದಿದ್ದು, ರಾಜ್ಯ ಹೊರ ರಾಜ್ಯದಲ್ಲಿ ಪ್ರವಾಹ ಸಂದರ್ಭದಲ್ಲಿ ಪಾಲ್ಗೊಂಡು ಜೀವ ರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.

ಮAಗಳೂರಿನ ಶಾಂತಿ ಪ್ರಕಾಶನ ವ್ಯವಸ್ಥಾಪಕ ಮುಹಮ್ಮದ್ ಕುಂಞÂ ಸೌಹಾರ್ದ ಸಂದೇಶದ ಬಗ್ಗೆ ಮಾತನಾಡಿ, ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆಯು ಯಾವದೇ ಪ್ರತಿಫಲಾಪೇಕ್ಷೆ ಇಲ್ಲದೆ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದೆ ಎಂದರು.

ಆಶ್ರಯ, ನೆರಳು, ಬೆಳಕು, ಸಾಂತ್ವನ, ಕರುಣೆ ಎಂಬ ಹೆಸರಿನಲ್ಲಿ ಮನೆಗಳನ್ನು ಹಸ್ತಾಂತರಿಸಲಾಯಿತು. ಕರಡಿಗೋಡಿನ ಹುಸೈನ್, ಇ.ಕೆ ಆಯಿಷಾ, ಬೆಟ್ಟದಕಾಡಿನ ನಫೀಸ, ಪಾಲಿಬೆಟ್ಟ ರಸ್ತೆಯ ಜಿ. ಸುಂದರ ಮತ್ತು ಕುಂಬಾರಗುAಡಿಯ ಅಂತೋಣಿ ಡಿಸೋಜಾ, ದೀಪಕ್ ಎಂಬವರಿಗೆ ಮನೆಗಳನ್ನು ಹಸ್ತಾಂತರಿಸಿದರು. ಫಲಾನುಭವಿಗಳ ಪರವಾಗಿ ವಿವಿಧ ಗಣ್ಯ ವ್ಯಕ್ತಿಗಳು ಕೀಯನ್ನು ಸ್ವೀಕರಿಸಿದರು.

ಈ ಸಂದರ್ಭ ಜಮಾಅತೆ ಇಸ್ಲಾಮಿ ಹಿಂದ್ ಸಿದ್ದಾಪುರ ಘಟಕದ ಅಧ್ಯಕ್ಷ ಉಮರ್ ಹಾಜಿ, ಸಿದ್ದಾಪುರ ಮುಸ್ಲಿಂ ಜಮಾಹತ್ ಅಧ್ಯಕ್ಷ ಕೆ. ಉಸ್ಮಾನ್ ಹಾಜಿ, ಜಮಾಅತೆ ಇಸ್ಲಾಮಿ ಹಿಂದ್ ಕೇರಳ ರಾಜ್ಯದ ಜಂಟಿ ಕಾರ್ಯದರ್ಶಿ ಸಾದಿಕ್ ಉಳಿಯಿಲ್, ತಾ.ಪಂ. ಸದಸ್ಯೆ ಸುಹದಾ ಅಶ್ರಫ್, ಜಿ.ಪಂ. ಮಾಜಿ ಸದಸ್ಯ ಎಂ.ಎಸ್. ವೆಂಕಟೇಶ್, ನಂಜರಾಯಪಟ್ಟಣದ ಡಾ. ಚೆಂಗಪ್ಪ, ನೆಲ್ಯಹುದಿಕೇರಿ ಪಿ.ಡಿ.ಓ. ಅನಿಲ್ ಕುಮಾರ್, ಪ್ರಮುಖರಾದ ಟಿ.ಎ. ಬಶೀರ್, ಎ.ಕೆ. ಅಬ್ದುಲ್ಲಾ, ಮುಸ್ತಫ ಹಾಜಿ, ಕೆ.ಟಿ ಬಶೀರ್, ಗ್ರಾ.ಪಂ ಸದಸ್ಯರಾದ ಶೌಕತ್ ಅಲಿ, ಶುಕೂರ್ ಸೇರಿದಂತೆ ಮತ್ತಿತರರು ಇದ್ದರು.