ಮಡಿಕೇರಿ, ನ. ೫: ವೀರಾಜಪೇಟೆ ಪಟ್ಟಣ ಪಂಚಾಯಿತಿ ವತಿಯಿಂದ ಪಟ್ಟಣದಲ್ಲಿ ರಸ್ತೆ ಅಗಲೀಕರಣ ಮಾಡುವ ಯೋಜನೆಗೆ ರಾಜ್ಯ ಉಚ್ಚ ನ್ಯಾಯಾಲಯ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.ವೀರಾಜಪೇಟೆ ಪಟ್ಟಣದಲ್ಲಿ ವಾಹನಗಳ ಓಡಾಟ ಹೆಚ್ಚಾಗಿದ್ದು; ವಾಹನ ನಿಲುಗಡೆಗೆ ಸ್ಥಳಾವಕಾಶ ಇಲ್ಲವೆಂಬ ಕಾರಣಕ್ಕಾಗಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಧರ್ ಅವರು ಪಟ್ಟಣದ ಮುಖ್ಯ ರಸ್ತೆಗಳ ಅಗಲೀಕರಣಕ್ಕೆ ಮುಂದಾಗಿದ್ದರು. ಆದರೆ, ಕಳೆದ ಮಳೆಗಾಲದಲ್ಲಿ ಅಲ್ಲಿನ ಮಲೆತಿರಿಕೆ ಬೆಟ್ಟ ಹಾಗೂ ನೆಹರೂ ನಗರದ ಅಯ್ಯಪ್ಪ ಬೆಟ್ಟದಲ್ಲಿ ಬಿರುಕು ಕಾಣಿಸಿಕೊಂಡಿದ್ದು; ಬೆಟ್ಟವನ್ನು ಕೊರೆದರೆ ಪಟ್ಟಣಕ್ಕೆ ಅಪಾಯವಿದೆ ಎಂದು ಗಣಿ ಮತ್ತು ಭೂವಿಜ್ಞಾನಿಗಳು ಜಿಲ್ಲಾಡಳಿತ ಹಾಗೂ ಸರಕಾರಕ್ಕೆ ವರದಿ ಸಲ್ಲಿಸಿದ್ದರು. ಮುಖ್ಯಾಧಿಕಾರಿಗಳು ಸರ್ವಾಧಿಕಾರಿತನ ಪ್ರದರ್ಶಿಸಿ ರಸ್ತೆ ಅಗಲೀಕರಣಕ್ಕೆ ಮುಂದಾಗಿರುವದಾಗಿ ಅಲ್ಲಿನ ನಿವಾಸಿಗಳು, ವ್ಯಾಪಾರಸ್ಥರಿಂದ ವಿರೋಧ ವ್ಯಕ್ತಗೊಂಡಿತ್ತು. ಮನೆ-ಅಂಗಡಿ ಕಳೆದುಕೊಳ್ಳುವ ಮಾಲೀಕರುಗಳಿಗೆ ಪರಿಹಾರವನ್ನು ಕೂಡ ನೀಡದೆ ಅಗಲೀಕರಣಕ್ಕೆ ಮುಂದಾಗಿರುವದನ್ನು ವಿರೋಧಿಸಿ ನಿವಾಸಿಗಳು ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಇತ್ತ ಇನ್ನೂ ಕೆಲವರು ರಸ್ತೆ ಅಗಲೀಕರಣಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು.

ಈ ಹಿನ್ನೆಲೆಯಲ್ಲಿ ಹೋರಾಟಗಾರ ಪ್ರಮುಖರಾದ ವಕೀಲ ಐ.ಆರ್. ಪ್ರಮೋದ್ ಹಾಗೂ ಇತರ ೩೨ ಮಂದಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ರಸ್ತೆ ಅಗಲೀಕರಣ ಮಾಡದಂತೆ; ಅದರಿಂದುAಟಾಗುವ ಸಮಸ್ಯೆಗಳ ಬಗ್ಗೆ ವಿವರವಾಗಿ ಉಚ್ಚನ್ಯಾಯಾಲಯದ ವಕೀಲ ಟಿ.ಎನ್. ರಘುಪತಿ ಅವರ ಮೂಲಕ ರಿಟ್ ಅರ್ಜಿ ಸಲ್ಲಿಸಿದ್ದರು.

ನ್ಯಾಯಾಲಯದ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಇಂದು ವಿಚಾರಣೆಯನ್ನು ಕೈಗೆತ್ತಿಕೊಂಡ ಸಂದರ್ಭ ದಲ್ಲಿ ವಕೀಲ ರಘುಪತಿ ಅವರು, ಮುಖ್ಯಾಧಿಕಾರಿಗಳು ತೆಗೆದುಕೊಂಡಿರುವ ಕ್ರಮ ಕಾನೂನಿನ ಉಲ್ಲಂಘನೆ ಯಾಗಲಿದ್ದು; ಒಂದು ರಸ್ತೆ ಅಗಲೀಕರಣ ಗೊಳಿಸಿದಲ್ಲಿ ಪ್ರಾಕೃತಿಕ ದುರಂತಕ್ಕೂ ಕಾರಣವಾಗಲಿದೆ. ಹಾಗಾಗಿ ಅಗಲೀಕರಣಕ್ಕೆ ಅವಕಾಶ ನೀಡದಂತೆ ಕೋರಿದರು. ವಾದವನ್ನು ಆಲಿಸಿದ ನ್ಯಾಯಮೂರ್ತಿಗಳು ರಸ್ತೆ ಅಗಲೀಕರಣ ಕಾರ್ಯಕ್ಕೆ ತಾತ್ಕಾಲಿಕ ತಡೆಯಾಜ್ಞೆ ನೀಡಿ ಆದೇಶಿಸಿದ್ದಾರೆ.

ಈ ನಡುವೆ ವಾಹನ ನಿಲುಗಡೆಗೆ ಸ್ಥಳಾವಕಾಶವಿಲ್ಲ ವೆಂಬ ಮುಖ್ಯಾಧಿಕಾರಿಗಳು ನೀಡಿರುವ ಕಾರಣಕ್ಕೆ ಉಚ್ಚ ನ್ಯಾಯಾಲಯದ ವಕೀಲ ರವೀಂದ್ರ ಕಾಮತ್ ಅವರು, ಪಟ್ಟಣದಲ್ಲಿ ನಿರ್ಮಿಸಲಾಗಿರುವ ವಾಣಿಜ್ಯ ಮಳಿಗೆಗಳಲ್ಲಿ ವಾಹನ ನಿಲುಗಡೆಗೆ ಅವಕಾಶ ನೀಡಬೇಕೆಂದು ನಗರಾಭಿವೃದ್ಧಿ ಪ್ರಾಧಿಕಾರ ಸೂಚನೆ ನೀಡಿದ್ದರೂ, ನಿಲುಗಡೆಗೆ ಅವಕಾಶ ನೀಡದೆ ಅಲ್ಲಿಯೂ ಅಂಗಡಿಗಳನ್ನು ತೆರೆಯಲಾಗಿದೆ. ಮುಖ್ಯಾಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡು ಅಂಗಡಿಗಳನ್ನು ತೆರವುಗೊಳಿಸಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಿದಲ್ಲಿ ಸಮಸ್ಯೆ ಪರಿಹಾರ ವಾಗಲಿದೆ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ.