ಮಡಿಕೇರಿ, ನ. ೪: ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ನುಗ್ಗಿದ ಕರ್ನಾಟಕ ರಸ್ತೆ ಸಾರಿಗೆ ಬಸ್ ಮೇಲೆತ್ತುವ ಕಾರ್ಯಾಚರಣೆ ಭಾನುವಾರ ಸಂಜೆ ನಡೆಯಿತು.

ಮೈಸೂರಿನಿಂದ ಮಡಿಕೇರಿಗೆ ಬರುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ಮಡಿಕೇರಿ ಬಳಿ ಸಿಂಕೋನ ಇಳಿಜಾರಿನಲ್ಲಿ ಬಿದ್ದಿತ್ತು. ಪ್ರಯಾಣಿಕರಿಗೆ ಯಾವದೇ ಅಪಾಯ ಸಂಭವಿಸದೆ ಬಸ್ ಮಾತ್ರ ರಸ್ತೆಯಿಂದ ಸುಮಾರು ೫೦ ಅಡಿ ಕೆಳಗೆ ಜಾರಿತ್ತು. ಬಸ್ ಮೇಲೆತ್ತಲು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಬೆಳಗ್ಗಿನಿಂದ ಸಂಸ್ಥೆಯ ಕ್ರೇನ್ ಬಳಸಿ ಹರಸಾಹಸ ಪಟ್ಟರೂ ವಿಫಲವಾಗಿ ನಂತರ ಉಪ್ಪಿನಂಗಡಿಯಿAದ ವಿಶೇಷ ಕ್ರೇನ್ ತರಿಸಿ ಕಾರ್ಯಾಚರಣೆ ಪ್ರಾರಂಭಿಸಿ ಬಸ್‌ನ್ನು ಮೇಲಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆ ಸಂದರ್ಭ ಮಡಿಕೇರಿ ಸುಂಟಿಕೊಪ್ಪ ಹೆದ್ದಾರಿ ನಡುವೆ ಕೆಲವು ಗಂಟೆ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು.

ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗದ ಕಂಟ್ರೋಲರ್ ನಾಗೇಂದ್ರ ನೇತೃತ್ವದಲ್ಲಿ ಡಿಎಂಇ ವೇಣುಗೋಪಾಲ್, ಮಡಿಕೇರಿ ಘಟಕ ವ್ಯವಸ್ಥಾಪಕರಾದ ಗೀತಾ, ಅಧಿಕಾರಿಗಳಾದ ತಟ್ಟಂಡ ಸತೀಶ್, ಕಿಶೋರ್, ಮತ್ತಿತರರು ಸ್ಥಳದಲ್ಲಿ ಇದ್ದರು. ಎರಡು ಬೃಹತ್ ಕ್ರೇನ್‌ಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವು. ವಾರಾಂತ್ಯ ಕಾರಣ ಹೆದ್ದಾರಿಯಲ್ಲಿ ಸಾವಿರಾರು ವಾಹನ ಓಡಾಟ ಹಿನ್ನೆಲೆಯಲ್ಲಿ ಮಡಿಕೇರಿ ಗ್ರಾಮಾಂತರ ಮತ್ತು ಸಂಚಾರಿ ಪೊಲೀಸರು ಯಾವದೇ ಅನಾಹುತವಾಗದಂತೆ ಸಂಚಾರ ವ್ಯವಸ್ಥೆ ನಿಭಾಯಿಸಿದರು.

- ಚಂದ್ರಮೋಹನ್