ಮಡಿಕೇರಿ, ನ. ೩: ೨೦೧೮-೧೯ರ ಆಗಸ್ಟ್ನಲ್ಲಿ ಜಿಲ್ಲೆಯಲ್ಲಿ ನಿರಂತವಾಗಿ ಸುರಿದ ಮಳೆಯಿಂದಾಗಿ ಪ್ರವಾಹ ಜೀವಹಾನಿ ಜಾನುವಾರುಗಳ ಪ್ರಾಣಹಾನಿ ಸಾಕಷ್ಟು ಪ್ರಮಾಣದ ಅಗತ್ಯ ಮೂಲಭೂತ ಸೌಕರ್ಯ (ರಸ್ತೆ, ವಿದ್ಯುತ್, ನೀರು ಸರಬರಾಜು), ಆಸ್ತಿ ಮತ್ತು ದೊಡ್ಡ ಪ್ರಮಾಣದ ಬೆಳೆಹಾನಿಗೆ ಕಾರಣವಾಗಿದೆ. ಸರಿ ಸುಮಾರು ೧ ಲಕ್ಷ ಜನರು ಇದರಿಂದ ಬಾಧಿತರಾಗಿದ್ದಾರೆ. ೨೦೧೮ ಮತ್ತು ೨೦೧೯ರ ಪ್ರಕೃತಿ ವಿಕೋಪದಲ್ಲಿ ಸುಮಾರು ೪೦ ಜನರು ಮೃತಪಟ್ಟಿದ್ದು, ೩೫೨ ಜಾನುವಾರುಗಳು ಮೃತಪಟ್ಟಿವೆ. ಸುಮಾರು ೬,೩೯೭ ಮನೆಗಳು, ೨೬೫ ಅಂಗನವಾಡಿಗಳು, ೨೩೯ ಶಾಲೆಗಳು ಹಾಗೂ ೨೦ ಆರೋಗ್ಯ ಕೇಂದ್ರ ಕಟ್ಟಡಗಳು ಹಾನಿಗೊಳಗಾಗಿದೆ ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ರೂ. ೧೭೩೬ ಕೋಟಿಗಳಷ್ಟು ನಷ್ಟ ಸಂಭವಿಸಿದೆ.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜಿಲ್ಲಾಡಳಿತ, ಭೂಸೇನೆ, ಎನ್‌ಡಿಆರ್‌ಎಫ್/ಎಸ್‌ಡಿಆರ್‌ಎಫ್, ಸ್ಥಳೀಯರು ಇತ್ಯಾದಿ ಇವರ ಸಹಾಯದಿಂದ ರಕ್ಷಣಾ ಹಾಗೂ ಪರಿಹಾರ ಕಾರ್ಯ ಕೈಗೊಳ್ಳಲಾಗಿದೆ. ಈ ಪ್ರದೇಶಗಳಲ್ಲಿ ಉತ್ತಮ ಪುನರ್ ನಿರ್ಮಾಣದ ಧ್ಯೇಯದೊಂದಿಗೆ ಸ್ಥಿತಿ ಸ್ಥಾಪಕ ಸಮುದಾಯವನ್ನು ನಿರ್ಮಿಸಲು ಜಿಲ್ಲಾಡಳಿತ ಬದ್ಧವಾಗಿದೆ. ಆಸಕ್ತಿಯುಳ್ಳ ಸರ್ಕಾರೇತರ ಸಂಸ್ಥೆಗಳು (ಎನ್‌ಜಿಒ), ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ವಿಭಾಗ (ಸಿಎಸ್‌ಆರ್), ನಾಗರಿಕ ಸಮಾಜ ಸಂಸ್ಥೆಗಳು (ಸಿಎಸ್‌ಒ), ಉದಾರ ದಾನಿಗಳು ಹಾಗೂ ಇತರ ಪಾಲುದಾರರನ್ನು ಪ್ರವಾಹ ೨೦೧೮-೧೯ ರ ಸ್ಪಂದನೆಯ ಸಹಾಯಕ್ಕೆ ಆಹ್ವಾನಿಸಲಾಗಿದೆ. ಪ್ರವಾಹದ ಪರಿಹಾರ ಮತ್ತು ಚೇತರಿಕೆಯ ಅಂಶಗಳಾದ ನೀರು, ಸ್ವಚ್ಛತೆ, ನೈರ್ಮಲ್ಯ, ವಸತಿ, ಆಹಾರ ಮತ್ತು ಪೌಷ್ಟಿಕಾಂಶ, ಶಾಲೆ ಮತ್ತು ಅಂಗನವಾಡಿಗಳ ಪುನರ್ ನಿರ್ಮಾಣ ಜೀವನೋಪಾಯ ಚೇತರಿಕೆ, ದುರ್ಬಲ ಸಮುದಾಯಗಳ (ಮಹಿಳೆ, ಮಕ್ಕಳು, ವಿಕಲಚೇತನರು, ವೃದ್ಧರು) ರಕ್ಷಣೆ ಮತ್ತಿತರ ವಲಯವಾರು ಅವಶ್ಯಕತೆಗಳಾಗಿದೆ.
ಈ ಹಿನ್ನಲೆಯಲ್ಲಿ ಪ್ರವಾಹ ಪೀಡಿತ ಗ್ರಾಮಗಳು, ನೇರೆ ಸಂತ್ರಸ್ತರಿಗೆ ಪರಿಹಾರ ಪುನರ್‌ವಸತಿ ಮತ್ತು ಚೇತರಿಕೆ ಕ್ರಮಗಳ ಕುರಿತು ಚರ್ಚಿಸಲು ಹಾಗೂ ನಿರ್ದೇಶನ ಬಗ್ಗೆ ಜಿಲ್ಲಾಧಿಕಾರಿಗಳು, ಕೊಡಗು ಜಿಲ್ಲೆ ಇವರ ಅಧ್ಯಕ್ಷತೆಯಲ್ಲಿ ಸಮನ್ವಯ ಸಭೆಯನ್ನು ತಾ. ೬ ರಂದು ಬೆಳಿಗ್ಗೆ ೧೦ ಗಂಟೆಗೆ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿದೆ.